Rajya Sabha Election: ರಾಜ್ಯಸಭಾ ಟಿಕೆಟ್ ಘೋಷಣೆ ಬೆನ್ನಲ್ಲೇ ಬಿಜಿಪಿಗೆ ಬಿಗ್ ಶಾಕ್! ಪಕ್ಷ ತೊರೆಯುವ ಮುನ್ಸೂಚನೆ ಕೊಟ್ಟ ಇಬ್ಬರು ಹಿರಿಯ ನಾಯಕರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಬಿಜೆಪಿ ತೊರೆಯಲು ಸಿದ್ಧರಾದ ಕೌಶಲ್ ಕಿಶೋರ್, ಧರ್ಮೇಂದ್ರ ಕಶ್ಯಪ್


Last Updated:

ಉತ್ತರ ಪ್ರದೇಶದ ಬಿಜೆಪಿ ಪಾಳಯದಲ್ಲಿ ಭಿನ್ನಮತದ ಹೊಗೆಯಾಡುತ್ತಿದೆ. ಮುಂಬರುವ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಇಬ್ಬರು ಪ್ರಮುಖ ಮಾಜಿ ಸಂಸದರು ಸಾಮಾಜಿಕ ಜಾಲತಾಣಗಳಲ್ಲಿ ನಿಗೂಢ ಪೋಸ್ಟ್‌ಗಳನ್ನು ಹಾಕುವ ಮೂಲಕ ಬಿಜೆಪಿ ತೊರೆಯುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ.

ಬಿಜೆಪಿ ತೊರೆಯಲು ಸಿದ್ಧರಾದ ಕೌಶಲ್ ಕಿಶೋರ್, ಧರ್ಮೇಂದ್ರ ಕಶ್ಯಪ್
ಬಿಜೆಪಿ ತೊರೆಯಲು ಸಿದ್ಧರಾದ ಕೌಶಲ್ ಕಿಶೋರ್, ಧರ್ಮೇಂದ್ರ ಕಶ್ಯಪ್

ರಾಜ್ಯಸಭಾ ಚುನಾವಣೆಯ (Rajya Sabha Election) ಅಭ್ಯರ್ಥಿಗಳ ಆಯ್ಕೆಯ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ (BJP) ಭಿನ್ನಮತ ಮತ್ತು ತೀವ್ರ ಅಸಮಾಧಾನ ಭುಗಿಲೆದ್ದಿದೆ. ಉತ್ತರ ಪ್ರದೇಶದಲ್ಲಿ ಪಕ್ಷದ ಇಬ್ಬರು ಹಿರಿಯ ನಾಯಕರು ಹಾಗೂ ಮಾಜಿ ಸಂಸದರು ತಮಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಿಸ್ಟರಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಬಿಜೆಪಿ ತೊರೆಯುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ.

ಟಾಟಾ… ಬೈ-ಬೈ’ ಪೋಸ್ಟ್ ಹಾಕಿದ ಧರ್ಮೇಂದ್ರ ಕಶ್ಯಪ್

ಓಬಿಸಿ (OBC) ಸಮುದಾಯದ ಪ್ರಭಾವಿ ನಾಯಕರಾಗಿರುವ ಮಾಜಿ ಸಂಸದ ಧರ್ಮೇಂದ್ರ ಕಶ್ಯಪ್ ತಮಗೆ ರಾಜ್ಯಸಭಾ ನಾಮನಿರ್ದೇಶನವನ್ನು ನಿರಾಕರಿಸಿದ್ದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧವೇ ಪ್ರಚಾರ ಮಾಡಿದ್ದವರಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಅವರು ಆರೋಪಿಸಿದ್ದಾರೆ. ಎರಡು ಬಾರಿ ಸಂಸದರಾಗಿದ್ದ ಕಶ್ಯಪ್, ತಮ್ಮ ಫೇಸ್‌ಬುಕ್ ಪುಟದಲ್ಲಿ “ಟಾಟಾ… ಬೈ-ಬೈ” ಎಂದು ಬರೆದುಕೊಂಡಿದ್ದು, ಮುಂದಿನ ವಾರ ಅವರು ಸಮಾಜವಾದಿ ಪಕ್ಷಕ್ಕೆ (SP) ಸೇರಲಿದ್ದಾರೆ ಎಂಬ ವದಂತಿಗಳು ಹರಡಿವೆ. ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿದ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಬರೇಲಿಯಲ್ಲಿ ತಿಳಿಸಿದ್ದಾರೆ.

ದಲಿತ ನಾಯಕ ಕೌಶಲ್ ಕಿಶೋರ್ ಬೇಸರ

ಇನ್ನೊಂದೆಡೆ ದಲಿತ ಸಮುದಾಯದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಸಂಸದ ಕೌಶಲ್ ಕಿಶೋರ್ ಕೂಡ ಪಕ್ಷ ತೊರೆಯುವ ಹಾದಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೌಶಲ್ ಕಿಶೋರ್ ರಾಜ್ಯಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರು, ಅದರೆ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದರ ಬೆನ್ನಲ್ಲೇ ಅವರ ಪುತ್ರ ವಿಕಾಸ್ ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ, ” ತಂದೆ-ತಾಯಿಗೆ ಗೌರವವಿಲ್ಲದ ಕುಟುಂಬದಲ್ಲಿ ಯಾರೂ ವಾಸಿಸಬಾರದು” ಎಂಬ ಮಾರ್ಮಿಕ ಪೋಸ್ಟ್ ಹಾಕುವ ಮೂಲಕ ತಮ್ಮ ತಂದೆಗೆ ಟಿಕೆಟ್ ಸಿಗದ ಬಗ್ಗೆ ಇರುವ ಅಸಮಾಧಾನವನ್ನು ಹೊರಹಾಕಿದ್ದಾರೆ.

ದಲಿತ ಸಮುದಾಯಕ್ಕೆ ತಾರತಮ್ಯದ ಆರೋಪ

ಕೌಶಲ್ ಕಿಶೋರ್ ಮತ್ತು ಅವರ ಪತ್ನಿ ಜಯದೇವಿ (ಬಿಜೆಪಿ ಶಾಸಕಿ) ಈ ಹಿಂದೆಯೂ ಸಹ ದೇವಸ್ಥಾನವೊಂದರ ಧಾರ್ಮಿಕ ಕಾರ್ಯಕ್ರಮದಲ್ಲಿ ತಮಗೆ ಸರಿಯಾದ ಗೌರವ ನೀಡಿಲ್ಲ ಮತ್ತು ತಾವು ದಲಿತ ಸಮುದಾಯದವರಾಗಿರುವುದರಿಂದ ತಾರತಮ್ಯ ಎದುರಿಸಬೇಕಾಯಿತು ಎಂದು ಬಹಿರಂಗವಾಗಿ ದೂರಿದ್ದರು. ಇದರ ನಡುವೆ ರಾಜ್ಯಸಭಾ ಟಿಕೆಟ್ ಕೂಡ ಕೈತಪ್ಪಿರುವುದು ಅವರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ಕೇವಲ ಇವರಿಬ್ಬರಷ್ಟೇ ಅಲ್ಲದೆ ಇನ್ನೂ ಹಲವು ಹಿರಿಯ ನಾಯಕರು ಬಿಜೆಪಿಯ ರಾಜ್ಯಸಭಾ ಆಯ್ಕೆಗಳ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ಚುನಾವಣೆಯ ಜಾತಿ ಸಮೀಕರಣ

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ತನ್ನ ಎಂಟು ರಾಜ್ಯಸಭಾ ಅಭ್ಯರ್ಥಿಗಳಲ್ಲಿ ಮೂವರು ಓಬಿಸಿ, ಇಬ್ಬರು ಬ್ರಾಹ್ಮಣರು, ಇಬ್ಬರು ದಲಿತರು ಮತ್ತು ಒಬ್ಬರು ಠಾಕೂರ್ ಸಮುದಾಯದವರನ್ನು ಕಣಕ್ಕಿಳಿಸುವ ಮೂಲಕ ಜಾತಿ ಸಮೀಕರಣವನ್ನು ಸರಿದೂಗಿಸಲು ಪ್ರಯತ್ನಿಸಿತ್ತು. ಆದರೆ ಈ ಆಯ್ಕೆಯು ಈಗ ಪಕ್ಷದ ಒಳಗಡೆಯೇ ದೊಡ್ಡ ಬಂಡಾಯಕ್ಕೆ ದಾರಿ ಮಾಡಿಕೊಟ್ಟಿದೆ.



Source link

Leave a Reply

Your email address will not be published. Required fields are marked *