Last Updated:
ಶ್ರೇಯಸ್ ಅಯ್ಯರ್ ಅವರ ಈ ಅಬ್ಬರದ ಶತಕದ ನೆರವಿನಿಂದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಸದ್ಯ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಇಶಾನ್ ಕಿಶನ್ ಮೊದಲ ಸ್ಥಾನ ಹಾಗೂ ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಇತ್ತೀಚಿನ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ (ICC T20 Rank) ಭಾರಿ ಪ್ರಗತಿ ಸಾಧಿಸಿದ್ದಾರೆ. ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 102 ರನ್ ಚಚ್ಚಿದ ಅಯ್ಯರ್, ಬರೋಬ್ಬರಿ 18 ಸ್ಥಾನಗಳ ಜಿಗಿತ ಕಂಡು ತಮ್ಮ ವೃತ್ತಿಜೀವನದ ಅತ್ಯುತ್ತಮ 7ನೇ ಶ್ರೇಯಾಂಕಕ್ಕೆ ತಲುಪಿದ್ದಾರೆ. ಟೀಮ್ ಇಂಡಿಯಾ ಕ್ಯಾಪ್ಟನ್ ಮೊದಲ ಬಾರಿಗೆ ಟಾಪ್ 10ರೊಳಗೆ ಎಂಟ್ರಿಕೊಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ಅವರ ಈ ಅಬ್ಬರದ ಶತಕದ ನೆರವಿನಿಂದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಸದ್ಯ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಇಶಾನ್ ಕಿಶನ್ ಮೊದಲ ಸ್ಥಾನ ಹಾಗೂ ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇದರೊಂದಿಗೆ 10ನೇ ಸ್ಥಾನದಲ್ಲಿರುವ ತಿಲಕ್ ವರ್ಮಾ ಸೇರಿದಂತೆ ಭಾರತದ ಒಟ್ಟು ನಾಲ್ಕು ಬ್ಯಾಟರ್‌ಗಳು ವಿಶ್ವದ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನೂ ಬೌಲಿಂಗ್ ವಿಭಾಗದಲ್ಲಿ ಪಾಕಿಸ್ತಾನದ ಅಬ್ರಾರ್ ಅಹ್ಮದ್ ತಮ್ಮ ನಂಬರ್ 1 ಸ್ಥಾನವನ್ನು ಕಳೆದುಕೊಂಡಿದ್ದಾರೆ. ಏಷ್ಯನ್ ಗೇಮ್ಸ್‌ನ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅವರು ಅಗ್ರಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಇವರ ಬದಲಿಗೆ ಅಫ್ಘಾನಿಸ್ತಾನದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಬರೋಬ್ಬರಿ ಎಂಟನೇ ಬಾರಿಗೆ ವಿಶ್ವದ ನಂಬರ್ 1 ಟಿ20 ಬೌಲರ್ ಪಟ್ಟವನ್ನು ಮರಳಿ ಪಡೆದಿದ್ದಾರೆ. ಭಾರತದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ 16 ಸ್ಥಾನಗಳ ಏರಿಕೆ ಕಂಡು 7ನೇ ಶ್ರೇಯಾಂಕಕ್ಕೆ ತಲುಪಿದ್ದಾರೆ. ಜಸ್ಪ್ರೀತ್ ಬುಮ್ರಾ ಹಲವು ದಿನಗಳ ಬಳಿಕ ಮತ್ತೆ ಟಾಪ್ 10ಕ್ಕೆ ಮರಳಿ 10ನೇ ಸ್ಥಾನ ಪಡೆದಿದ್ದಾರೆ.
ಇನ್ನೊಂದೆಡೆ ಏಕದಿನ (ODI) ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಒಡಿಐ ನಾಯಕ ಶುಭ್ಮನ್ ಗಿಲ್ ತಮ್ಮ ನಂಬರ್ 1 ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಗುವಾಹಟಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅಜೇಯ 223 ರನ್ ಸಿಡಿಸುವ ಮೂಲಕ ಗಿಲ್ ಇತಿಹಾಸ ನಿರ್ಮಿಸಿದ್ದರು. ಇದು ಏಕದಿನ ಕ್ರಿಕೆಟ್‌ನ ರನ್ ಚೇಸಿಂಗ್ ಇತಿಹಾಸದಲ್ಲೇ ದಾಖಲಾದ ಅತ್ಯುನ್ನತ ವೈಯಕ್ತಿಕ ಸ್ಕೋರ್ ಆಗಿತ್ತು. ಈ ಪ್ರದರ್ಶನದಿಂದಾಗಿ ಗಿಲ್ ಅವರ ರೇಟಿಂಗ್ ಪಾಯಿಂಟ್ಸ್ 841 ಕ್ಕೆ ಏರಿಕೆಯಾಗಿದೆ.
ಗಿಲ್ ಅವರ ಅಬ್ಬರದ ನಡುವೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ, ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬಿರುಗಾಳಿಯ ಶತಕ ಸಿಡಿಸಿದ ಕೆ.ಎಲ್. ರಾಹುಲ್ ಬರೋಬ್ಬರಿ 7 ಸ್ಥಾನಗಳ ಭರ್ಜರಿ ಪ್ರಗತಿ ಕಾಣುವ ಮೂಲಕ ಮತ್ತೆ ವಿಶ್ವದ ಟಾಪ್ 10 ಒಡಿಐ ಬ್ಯಾಟರ್‌ಗಳ ಪಟ್ಟಿಗೆ ಮರಳಿ 10ನೇ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ವಿರುದ್ಧ ಸತತ 2 ಶತಕ ಸಿಡಿಸಿದ ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ 2 ಸ್ಥಾನ ಏರಿಕೆ ಕಂಡು 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಇನ್ನು ಟಿ20ಯ ನಂಬರ್ 1 ಬೌಲರ್ ಆಗಿರುವ ಆಫ್ಘಾನಿಸ್ತಾನದ ರಶೀದ್ ಖಾನ್ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿಯೂ ತಮ್ಮ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಭಾರತದ ವಿರುದ್ಧ ಮಿಂಚಿದ್ದ ಜೇಡನ್ ಸೀಲ್ಸ್ 12 ಸ್ಥಾನ ಏರಿಕೆ ಕಂಡು ಟಾಪ್ 10ಕ್ಕೆ ಎಂಟ್ರಿಕೊಟ್ಟಿದ್ದಾರೆ. ಕುಲ್ದೀಪ್ ಯಾದವ್ 6ನೇ ಸ್ಥಾನ ಪಡೆದು ಟಾಪ್ 10ರಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.














