Last Updated:
₹1.71 Crore Kewra Attar Fraud in Odisha: ಪರ್ಫ್ಯೂಮ್ ಖರೀದಿ ಮಾಡಲು ಬರುವಾಗ ಮೊದಲೇ ಸ್ಯಾಂಪಲ್ ತರುವಂತೆ ಅಪರಿಚಿತರು ಸೂಚಿಸಿದ್ದರು. ಅದರಂತೆ ಸುನೀಲ್ ಅವರು ಸ್ಯಾಂಪಲ್ ಜೊತೆಗೆ 1.71 ಕೋಟಿ ರೂಪಾಯಿ ಮೌಲ್ಯದ ಕೇದಗೆಯ ಪರ್ಫ್ಯೂಮ್ ಅನ್ನು ತೆಗೆದುಕೊಂಡು ಹೋಗಿದ್ದರು.
ಗಂಜಾಮ್: ಸುಗಂಧ ದ್ರವ್ಯ ವ್ಯಾಪಾರಿಯೊಬ್ಬರಿಗೆ ಅಪರಿಚಿತರ ತಂಡವೊಂದು ಬರೋಬ್ಬರಿ ₹1.71 ಕೋಟಿ ಮೌಲ್ಯದ ಬೆಲೆಬಾಳುವ ಅಪರೂಪದ ಪರ್ಫ್ಯೂಮ್ ಅನ್ನು (Perfume Fraud Case) ವಂಚಿಸಿ ಮೋಸ ಮಾಡಿರುವ ಘಟನೆ ಒಡಿಶಾದಲ್ಲಿ ಸಂಭವಿಸಿದೆ.
ಒಡಿಶಾದ ಗಂಜಾಮ್ ಜಿಲ್ಲೆಯ ಚಾಮಖಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಡಪುಟಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಅಪರಿಚಿತರ ಮಾತಿಗೆ ಮರುಳಾಗಿ ಮೋಸ ಹೋದ ವ್ಯಾಪಾರಿಯನ್ನು ಸುನೀಲ್ ಜಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಸುಗಂಧ ದ್ರವ್ಯ ಮಾರಾಟ ಮಾಡುವ ವ್ಯಾಪಾರ ಮಾಡುತ್ತಿದ್ದು, ಅಪರಿಚಿತರು ಇದನ್ನು ಖರೀದಿ ಮಾಡುವುದಾಗಿ ನಂಬಿಸಿ ಹೋಟೆಲ್ಗೆ ಕರೆಸಿ ಮೋಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಪರ್ಫ್ಯೂಮ್ ವ್ಯಾಪಾರಿ ಸುನೀಲ್ ಅವರನ್ನು ಭುವನೇಶ್ವರದ ಒಂದು ಹೋಟೆಲ್ಗೆ ಬೃಹತ್ ಪ್ರಮಾಣದಲ್ಲಿ ಕೇದಗೆಯ ಪರ್ಫ್ಯೂಮ್ ಖರೀದಿ ಮಾಡುವ ನೆಪದಲ್ಲಿ ಅಪರಿಚಿತ ಖರೀದಿದಾರರು ಕರೆಸಿದ್ದಾರೆ. ಆ ಹೋಟೆಲ್ನಲ್ಲಿ ವ್ಯಾಪಾರದ ಮಾತುಕತೆ ನಡೆಸುವ ವೇಳೆ ಸಾಫ್ಟ್ ಡ್ರಿಂಕ್ನಲ್ಲಿ ಮಾದಕ ವಸ್ತು ಕೊಟ್ಟು ಸುನೀಲ್ ಅವರಿಗೆ ನಶೆ ಬರುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪರ್ಫ್ಯೂಮ್ ಖರೀದಿ ಮಾಡಲು ಬರುವಾಗ ಮೊದಲೇ ಸ್ಯಾಂಪಲ್ ತರುವಂತೆ ಅಪರಿಚಿತರು ಸೂಚಿಸಿದ್ದರು. ಅದರಂತೆ ಸುನೀಲ್ ಅವರು ಸ್ಯಾಂಪಲ್ ಜೊತೆಗೆ 1.71 ಕೋಟಿ ರೂಪಾಯಿ ಮೌಲ್ಯದ ಕೇದಗೆಯ ಪರ್ಫ್ಯೂಮ್ ಅನ್ನು ತೆಗೆದುಕೊಂಡು ಹೋಗಿದ್ದರು. ಎಲ್ಲಾ ಪರ್ಫ್ಯೂಮ್ ಸುನೀಲ್ ತಂದಿದ್ದಾರೆ ಎಂಬ ಮಾಹಿತಿಯನ್ನು ಅರಿತ ದುಷ್ಕರ್ಮಿಗಳು ಅವರನ್ನು ಯಾಮಾರಿಸಲು ಪ್ಲಾನ್ ಮಾಡಿ ಸಕ್ಸಸ್ ಆಗಿದ್ದಾರೆ.
ಸುನೀಲ್ ಅವರಿಗೆ ನಶೆ ಏರುತ್ತಿದ್ದಂತೆ ಅವರು ತಂದಿದ್ದ 1.71 ಕೋಟಿ ರೂಪಾಯಿ ಮೌಲ್ಯದ ಕೇದಗೆಯ ಪರ್ಫ್ಯೂಮ್ ಅನ್ನು ಬೇರೆ ಬಾಕ್ಸ್ಗಳಿಗೆ ವರ್ಗಾಯಿಸಿ ಪುನಃ ಅದೇ ಬಾಟಲ್ಗಳಿಗೆ ನಕಲಿ ಕೇದಗೆಯ ಪರ್ಫ್ಯೂಮ್ ಅನ್ನು ತುಂಬಿಸಿದ್ದಾರೆ. ನಂತರ ನಮಗೆ ಪರ್ಫ್ಯೂಮ್ ಇಷ್ಟ ಆಗಿದೆ. ಈಗ ನೀವು ತಗೊಂಡು ಹೋಗಿ, ಸದ್ಯದಲ್ಲೇ ಹಣ ಹೊಂದಿಸಿ ನಿಮಗೆ ಕಾಲ್ ಮಾಡುತ್ತೇವೆ ಎಂದಿದ್ದಾರೆ. ವಂಚಕರ ಮಾತನ್ನು ನಂಬಿದ್ದ ಸುನೀಲ್ ಮನೆಗೆ ವಾಪಸ್ ಬಂದಿದ್ದು, ಆದರೆ ಐದು ದಿನದ ನಂತರ ತಾನು ಮೋಸ ಹೋಗಿರೋದು ಗೊತ್ತಾಗಿದೆ.
ಇದರಿಂದ ಆಘಾತಕ್ಕೊಳಗಾದ ಸುನೀಲ್ ಅವರು ಚಾಮಖಂಡಿ ಪೊಲೀಸರಿಗೆ ದೂರು ನೀಡಿದ್ದು, ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಭುವನೇಶ್ವರ ಪೊಲೀಸ್ ಠಾಣೆಯೊಂದಿಗೆ ಸಂಯೋಜನೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸದ್ಯ, ಈ ಘಟನೆಯಿಂದ ಕೇದಗೆ ಹೂವು ಬೆಳೆಯುವ ರೈತರು ತುಂಬಾ ಆತಂಕಕ್ಕೀಡಾಗಿದ್ದಾರೆ. ಸುನೀಲ್ಗೆ ನೀಡಿದ ಕೇದಗೆ ಹೂವಿನಲ್ಲಿ ತಮಗೆ ಸಿಗಬೇಕಿದ್ದ ಬಾಕಿ ಹಣವನ್ನು ಪಡೆಯುವ ಬಗ್ಗೆ ಭಯ ಅವರನ್ನು ಕಾಡುತ್ತಿದೆ. ಅಂದಹಾಗೆ ಕೇದಗೆ ಪರ್ಫ್ಯೂಮ್ ಉದ್ಯಮವು ಗಂಜಾಮ್ ಜಿಲ್ಲೆಯಲ್ಲಿ ಅನೇಕ ರೈತರ ಜೀವನಾಧಾರವಾಗಿದೆ. ಈ ಪ್ರಕರಣದಿಂದ ಉದ್ಯಮದ ಮೇಲೆಯೂ ಪ್ರತಿಕೂಲ ಪರಿಣಾಮ ಬೀಳುವ ಸಾಧ್ಯತೆ ಇದೆ.
ಪೊಲೀಸರು ಆರೋಪಿಗಳನ್ನು ಬೇಗನೆ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಈ ಪ್ರಕರಣವು ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
Ganjam,Odisha (Orissa)













