Last Updated:
Kerala Islam Friendly Gym Row: ಪಾಲಕ್ಕಾಡ್‌ನ ಪುತ್ತುನಗರಂ ಪ್ರದೇಶದಲ್ಲಿರುವ ಈ ಜಿಮ್‌ನ ಮಾಲೀಕ ನವಾಜ್ ಮುತ್ತು ಟಿ ಇದೊಂದು ಇಸ್ಲಾಂ ಸ್ನೇಹಿ ಜಿಮ್ ಎಂದು ಘೋಷಣೆ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಾಲಕ್ಕಾಡ್: ಕೇರಳದಲ್ಲಿ ಇರುವ ಒಂದು ಜಿಮ್ ಇದೀಗ (Islam Friendly Gym) ವಿವಾದಕ್ಕೆ ಗುರಿಯಾಗಿದೆ. ಆ ಜಿಮ್‌ನ ನಿಯಮಗಳು ದೇಶಾದ್ಯಂತ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರವಿರೋಧ ಚರ್ಚೆ ತೀವ್ರಗೊಂಡಿದೆ.
ಅಸಲಿಗೆ, ಪಾಲಕ್ಕಾಡ್‌ನ ಪುತ್ತುನಗರಂ ಪ್ರದೇಶದಲ್ಲಿರುವ ಒಂದು ಜಿಮ್ ತನ್ನ ಹೊಸ ನಿಯಮಗಳಿಂದಾಗಿ ವ್ಯಾಪಕ ಚರ್ಚೆಗೆ ಗುರಿಯಾಗಿದೆ. ಸುಮಾರು 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಫಿಟ್‌ನೆಸ್ ಕೇಂದ್ರವನ್ನು ಕೇರಳದ ಮೊದಲ ‘ಇಸ್ಲಾಂ ಸ್ನೇಹಿ’ ಜಿಮ್ ಆಗಿ ಮರುಪ್ರಾರಂಭಿಸಲಾಗುವುದು ಎಂದು ಅದರ ಮಾಲೀಕ ನವಾಜ್ ಮುತ್ತು ಟಿ ಘೋಷಣೆ ಮಾಡಿದ್ದು, ಇದು ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ.
ಈ ಸಂಬಂಧ ಪಾಲಕ್ಕಾಡ್‌ನ ಪುತ್ತುನಗರಂ ಪ್ರದೇಶದಲ್ಲಿರುವ ಈ ಜಿಮ್‌ನ ಮಾಲೀಕ ನವಾಜ್ ಮುತ್ತು ಟಿ ಇದೊಂದು ಇಸ್ಲಾಂ ಸ್ನೇಹಿ ಜಿಮ್ ಎಂದು ಘೋಷಣೆ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತನ್ನ ವಿಡಿಯೋದಲ್ಲಿ ಜಿಮ್‌ನ ಮಾಲೀಕ ನವಾಜ್ ಮುತ್ತು ಟಿ, ‘ನಾವು ಇಸ್ಲಾಂ ಸ್ನೇಹಿ ಜಿಮ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಇದು ಕೇರಳದಲ್ಲಿ ಮೊಟ್ಟ ಮೊದಲ ಇಸ್ಲಾಂ ಸ್ನೇಹಿ ಜಿಮ್ ಆಗಿದೆ ಎಂದು ನಾನು ನಂಬುತ್ತೇನೆ. ಆಸಕ್ತಿ ಹೊಂದಿರುವ ಯಾರಾದರೂ ನನ್ನನ್ನು ಸಂಪರ್ಕಿಸಿ, ಈ ಸೌಲಭ್ಯದ ಪ್ರಯೋಜನ ಪಡೆಯಬಹುದು’ ಎಂದು ನವಾಜ್ ವೀಡಿಯೊದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಮೊದಲು ಹಾಕಿದ ವೀಡಿಯೊಗೆ ಭಾರಿ ವಿರೋಧ ವ್ಯಕ್ತವಾಗಿ ಅದನ್ನು ಡಿಲೀಟ್ ಮಾಡಿದ ಜಿಮ್ ಮಾಲೀಕ ನವಾಜ್ ಮತ್ತೊಂದು ಸ್ಪಷ್ಟೀಕರಣದ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ’ಈ ಜಿಮ್ ಮುಸ್ಲಿಮರಿಗೆ ಮಾತ್ರ ಸೀಮಿತವಾದ ಸ್ಥಳವಲ್ಲ ಎಂದು ತಿಪ್ಪೆ ಸಾರಿಸಿದ್ದಾರೆ. ಈ ಜಿಮ್‌ನಲ್ಲಿ ಇರುವ ನಿಯಮಗಳನ್ನು ಪಾಲಿಸಿದರೆ ಯಾರಾದರೂ ಕೂಡ ಬರಬಹುದು’ ಎಂದು ಹೇಳಿದ್ದಾರೆ.
ನವಾಜ್ ಕುಟುಂಬದ ಸದಸ್ಯರು ಸೇರಿದಂತೆ ಅನೇಕ ತೀವ್ರವಾದಿ (ನಿಷ್ಠಾವಂತ?) ಮುಸ್ಲಿಮರು ಎಲ್ಲ ಸಮುದಾಯದ ಜನರು ಬರುವ ವ್ಯಾಯಾಮ ಸ್ಥಳಗಳು ಮತ್ತು ತೀವ್ರ ಹಿನ್ನೆಲೆ ಸಂಗೀತದ ಕಾರಣದಿಂದಾಗಿ ಜಿಮ್‌ಗಳನ್ನು ತಪ್ಪಿಸುತ್ತಾರೆ. ಆದರೆ ಅವರಿಗೋಸ್ಕರ ಯಾವ ಜಿಮ್‌ನಲ್ಲೂ ಮ್ಯೂಸಿಕ್ ಆಫ್ ಮಾಡುವುದಿಲ್ಲ. ಆ ತರಹದ ಜಿಮ್‌ಗಳು ಕೂಡ ಎಲ್ಲೂ ಇಲ್ಲ. ಹೀಗಾಗಿ ಅಂತಹ ಸೌಲಭ್ಯವನ್ನು ನೀಡುವ ಸಲುವಾಗಿ’ ಈ ಜಿಮ್ ಅನ್ನು ಪರಿವರ್ತನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಜಿಮ್‌ನಲ್ಲಿ ಇರುವ ನಿಯಮಗಳೇನು?
- ಜೋರಾಗಿ ಮ್ಯೂಸಿಕ್ ಇಲ್ಲ; ಹೆಡ್‌ಫೋನ್‌ಗಳನ್ನು ಬಳಸಬಹುದು
- ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಮಯ
- ಪುರುಷರಿಗೆ ಪುರುಷ ತರಬೇತುದಾರರು; ಮಹಿಳೆಯರಿಗೆ ಮಹಿಳಾ ತರಬೇತುದಾರರು
- ಅಪರಿಚಿತ ಪುರುಷರ ಮುಂದೆ ಕೈ ಮತ್ತು ಮುಖ ಹೊರತುಪಡಿಸಿ ಸಂಪೂರ್ಣ ದೇಹ ಮುಚ್ಚಬೇಕು
- ಮಹಿಳೆಯರು ನಾರ್ಮಲ್ ಡ್ರೆಸ್ ಧರಿಸಬೇಕು, ಹಿಜಾಬ್ ಕಡ್ಡಾಯ
- ಎಲ್ಲಾ ಧರ್ಮೀಯರಿಗೂ ಮುಕ್ತ ಅವಕಾಶ
ಅಂದಹಾಗೆ, ವಿದೇಶಗಳಲ್ಲಿ ಈ ಪರಿಕಲ್ಪನೆಯು ಹೊಸತಲ್ಲ. ಯುಕೆಯಲ್ಲಿ, ಬ್ಯಾಟ್ಲಿಯಲ್ಲಿರುವ ಹೆಲ್ತ್ ಕ್ಲಬ್ ಫಾರ್ ಹರ್ ಮತ್ತು ನ್ಯೂಪೋರ್ಟ್‌ನಲ್ಲಿರುವ WOH ಜಿಮ್‌ನಂತಹ ಮಹಿಳೆಯರಿಗೆ ಮಾತ್ರ ಇರುವ ಆರೋಗ್ಯ ಕ್ಲಬ್‌ಗಳು ಜಿಮ್ ಸಂಸ್ಕೃತಿಯನ್ನು ಸದ್ದಿಲ್ಲದೆ ಬದಲಾಯಿಸುತ್ತಿವೆ, ತಾವು ಬಟ್ಟೆ ಹೇಗೆ ಧರಿಸುತ್ತಾರೆ ಎಂಬುದರ ಬಗ್ಗೆ ಚಿಂತಿಸದೆ ತರಬೇತಿ ಪಡೆಯಲು ಬಯಸುವ ಮುಸ್ಲಿಂ ಮಹಿಳೆಯರಿಗೆ ಒಳಗೊಳ್ಳುವಿಕೆಗೆ ಆದ್ಯತೆ ನೀಡುತ್ತಿವೆ.
ಧರ್ಮ ಆಧಾರಿತ ಜಿಮ್‌ಗಳನ್ನು ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರತಿಪಾದಿಸಿತ್ತು. ಹೀಗಾಗಿ ಕೇರಳದಲ್ಲಿ ನಿಷೇಧಿತ ಸಂಘಟನೆ ಪಿಎಫ್‌ಐ ಯೋಚನೆ ಪ್ರೇರಿತ ಜಿಮ್ ಅನ್ನು ತರುವ ಪ್ರಯತ್ನ ನಡೆಯುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.
Palakkad,Kerala













