Last Updated:
ಪಾಕಿಸ್ತಾನ ನೀಡಿದ್ದ 168 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಭಾರತ ಆಲ್‌ರೌಂಡರ್ ರಿಷಿ ಧವನ್ ಅವರ ಅತ್ಯುತ್ತಮ ಅರ್ಧಶತಕ ಮತ್ತು ಕೊನೆಯಲ್ಲಿ ಅನುರೀತ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತದ 2 ವಿಕೆಟ್ಗಳ ಗೆಲುವು ಸಾಧಿಸಿತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ರೋಮಾಂಚನಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಸಾಕ್ಷಿಯಾದರು. ಏಷ್ಯನ್ ಲೆಜೆಂಡ್ಸ್ ಲೀಗ್ (Asian Legends League) ಲೀಗ್ನಲ್ಲಿ ಇಂಡಿಯನ್ ರಾಯಲ್ಸ್ ತಂಡವು ತಮ್ಮ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ್ ಪ್ಯಾಂಥರ್ಸ್ ತಂಡವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿತು. ಇದು ಪಂದ್ಯಾವಳಿಯಲ್ಲಿ ಭಾರತದ ಸತತ ಎರಡನೇ ಗೆಲುವಾಗಿದೆ. ಪಾಕಿಸ್ತಾನ ನೀಡಿದ್ದ 168 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಭಾರತ ಆಲ್‌ರೌಂಡರ್ ರಿಷಿ ಧವನ್ ಅವರ ಅತ್ಯುತ್ತಮ ಅರ್ಧಶತಕ ಮತ್ತು ಕೊನೆಯಲ್ಲಿ ಅನುರೀತ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 2 ವಿಕೆಟ್ಗಳ ಗೆಲುವು ಸಾಧಿಸಿತು.
ಭಾರತ ತಂಡದ ನಾಯಕ ನಮನ್ ಓಜಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಪಾಕಿಸ್ತಾನ್ ಪ್ಯಾಂಥರ್ಸ್ ತಂಡ ನಾಯಕ ಇಮ್ರಾನ್ ನಜೀರ್ ಮತ್ತು ಯಾಸಿರ್ ಭಟ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿತು. ಭಾರತಕ್ಕೆ ಮೊದಲ ಬ್ರೇಕ್‌ಥ್ರೂ ಸಿಗಲು ಹೆಚ್ಚು ಸಮಯ ಹಿಡಿಯಲಿಲ್ಲ. ವೇಗದ ಬೌಲರ್ ಮನ್‌ಪ್ರೀತ್ ಗೋನಿ ಯಾಸಿರ್ ಭಟ್ ಅವರನ್ನು ಕೇವಲ 6 ರನ್‌ಗಳಿಗೆ ಔಟ್ ಮಾಡುವ ಮೂಲಕ ಪಾಕಿಸ್ತಾನಕ್ಕೆ ಮೊದಲ ಹೊಡೆತ ನೀಡಿದರು.
ಆರಂಭಿಕ ಹಿನ್ನಡೆಯ ನಂತರ, ನಾಯಕ ಇಮ್ರಾನ್ ನಜೀರ್ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಭಾರತೀಯ ಬೌಲರ್‌ಗಳ ಮೇಲೆ ಆಕ್ರಮಣಕಾರಿಯಾಗಿ ದಾಳಿ ನಡೆಸಿದರು, 29 ಎಸೆತಗಳಲ್ಲಿ ಅದ್ಭುತ 47 ರನ್ ಗಳಿಸಿದರು. ಅರ್ಧಶತಕಕ್ಕೆ ಕೇವಲ ಮೂರು ರನ್‌ಗಳಿದ್ದಾಗ ಸುಬೋಧ್ ಭಾಟಿ ಅವರನ್ನು ಔಟ್ ಮಾಡಿ, ಪಾಕಿಸ್ತಾನದ ವೇಗಕ್ಕೆ ಬ್ರೇಕ್ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ, ತೌಫಿಕ್ ಉಮರ್ 27 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 1 ಸಿಕ್ಸರ್ ಸೇರಿದಂತೆ 39 ರನ್ ಗಳಿಸಿದರು, ಆದರೆ ಇಬ್ರಾರ್ ಹುಸೇನ್ ಸಹ 36 ಎಸೆತಗಳಲ್ಲಿ 2 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿದಂತೆ 39 ರನ್ ಗಳಿಸುವ ಮೂಲಕ ಅಮೂಲ್ಯವಾದ ಕೊಡುಗೆ ನೀಡಿದರು.
ಒಂದು ಹಂತದಲ್ಲಿ ಪಾಕಿಸ್ತಾನ ಬೃಹತ್ ಮೊತ್ತ ಗಳಿಸುವತ್ತ ಮುನ್ನುಗ್ಗುತ್ತಿತ್ತು. ಭಾರತದ ಸ್ಪಿನ್ನರ್ ಶದಾಬ್ ಜಕಾತಿ ಮಧ್ಯಮ ಕ್ರಮಾಂಕವನ್ನ ನಿಯಂತ್ರಿಸಿದರು. ಪಾಕಿಸ್ತಾನ್ ಪ್ಯಾಂಥರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 167 ರನ್ ಗಳಿಸಿತು.
ಭಾರತದ ಪರ ಸುಬೋಧ್ ಭಾಟಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು, 4 ಓವರ್‌ಗಳಲ್ಲಿ 37 ರನ್‌ಗಳಿಗೆ 2 ವಿಕೆಟ್, ಶಾದಬ್ ಜಕಾತಿ 4 ಓವರ್‌ಗಳಲ್ಲಿ 32 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ಮನ್ಪ್ರೀತ್ ಗೋನಿ 3 ಓವರ್‌ಗಳಲ್ಲಿ 18 ರನ್‌ಗಳಿಗೆ 1 ವಿಕೆಟ್ ಮತ್ತು ರಿಷಿ ಧವನ್ 4 ಓವರ್‌ಗಳಲ್ಲಿ 38 ರನ್‌ಗಳಿಗೆ 1 ವಿಕೆಟ್ ಪಡೆದರು. ಅನುರೀತ್ ಸಿಂಗ್ ಕೂಡ ಬಿಗಿಯಾಗಿ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ ಕೇವಲ 22 ರನ್‌ಗಳನ್ನು ನೀಡಿದರಾದರೂ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ.
168 ರನ್‌ಗಳನ್ನು ಬೆನ್ನಟ್ಟಿದ ಇಂಡಿಯನ್ ರಾಯಲ್ಸ್ ಕಳಪೆ ಆರಂಭವನ್ನು ನೀಡಿತು. ಮೊಹಮ್ಮದ್ ಇರ್ಫಾನ್ ಬೌಲಿಂಗ್ನಲ್ಲಿ ನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ನಮನ್ ಓಜಾ ಕೇವಲ 4 ರನ್‌ಗಳಿಗೆ ಔಟ್ ಆದರು. ನಂತರ ಕ್ರೀಸ್‌ಗೆ ಬಂದ ಅಭಿಷೇಕ್ ಜಟೋಲಾ 21 ಎಸೆತಗಳಲ್ಲಿ 3 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಬಾರಿಸಿ 31 ರನ್ ಗಳಿಸಿ ಅವರು ಕೂಡ ಇರ್ಫಾನ್‌ಗೆ ವಿಕೆಟ್ ನೀಡಿದರು. ಜಟೋಲ ವಿಕೆಟ್ ಬೀಳುತ್ತಿದ್ದಂತೆ ಭಾರತ ದಿಢೀರ್ ಕುಸಿತ ಕಂಡು 59 ರನ್ಗಳಾಗುವ ವೇಳೆ 5 ವಿಕೆಟ್ ಕಳೆದುಕೊಂಡಿತು. ವಿಪಿ ಸಿಂಗ್ (0) ಹಾಗೂ ಅಸದ್ ಪಠಾಣ್ (9) ಬೇಗ ಔಟ್ ಆದರು.
ಈ ಸಂದರ್ಭದಲ್ಲಿ ಒಂದಾದ ರಿಷಿ ಧವನ್ ಮತ್ತು ಸರೂಲ್ ಕನ್ವರ್ 5ನೇ ವಿಕೆಟ್ ಜೊತೆಯಾಟದಲ್ಲಿ 86 ರನ್ ಸೇರಿಸಿ ಚೇತರಿಕೆ ನೀಡಿದರು. ರಿಷಿ ಧವನ್ ಪಾಕಿಸ್ತಾನಿ ಬೌಲರ್‌ಗಳನ್ನು ಕೆಚ್ಚೆದೆಯಿಂದ ಎದುರಿಸಿದರು. ಕೇವಲ 32 ಎಸೆತಗಳಲ್ಲಿ ಅರ್ಧಶತಕ ತಲುಪಿದ ಅವರು, 33 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ, 2 ಸಿಕ್ಸರ್ಗಳಿದ್ದವು. ಇನ್ನೊಂದು ತುದಿಯಲ್ಲಿ ಅವರಿಗೆ ಸಾಥ್ ನೀಡಿದ ಕನ್ವರ್ 29 ಎಸೆತಗಳಲ್ಲಿ 46 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು, ಭಾರತವನ್ನು ಗೆಲುವಿನ ಹತ್ತಿರಕ್ಕೆ ತಂದು ವಿಕೆಟ್ ಒಪ್ಪಿಸಿದರು.
ಕನ್ವರ್ ವಿಕೆಟ್ ಬೀಳುತ್ತಿದ್ದಂತೆ ಭಾರತ ಮತ್ತೊಂದು ಸಣ್ಣ ಕುಸಿತ ಕಂಡಿತು. ಶಾದಬ್ ಜಕಾತಿ 4, ಫರ್ಮನ್ ಅಹ್ಮದ್ (0) ಕೂಡ ಹಿಂದಿಂದೆಯೇ ವಿಕೆಟ್ ಒಪ್ಪಿಸಿದರು. ಆದರೆ ಅನುರೀತ್ ಸಿಂಗ್ 6 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 16 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.
ಪಾಕಿಸ್ತಾನ ಪರ ಮೊಹಮ್ಮದ್ ಇರ್ಫಾನ್, ಅಲಿ ರಹತ್ ಮತ್ತು ಯಾಸಿರ್ ಶಾ ತಲಾ ಎರಡು ವಿಕೆಟ್ ಪಡೆದರೆ, ರಾಣಾ ಅನ್ವರ್ ಮತ್ತು ಇಮ್ರಾನ್ ನಜೀರ್ ತಲಾ ಒಂದು ವಿಕೆಟ್ ಪಡೆದರು.
Aug 02, 2026 10:54 PM IST














