Last Updated:
ಬೆಂಗಳೂರು ಸೃಷ್ಟಿ ಕಿರಣ್ ಕೇವಲ 8 ಟೂರ್ನಿಯಲ್ಲಿ ITF ಜೂನಿಯರ್ ಅಂಡರ್ 13 ವಿಶ್ವ ನಂ 1, 5 ITF ಪ್ರಶಸ್ತಿ, 25 ಸತತ ಗೆಲುವು, ITF J100 ಗ್ವಾಟೆಮಾಲಾ ರನ್ನರ್ ಅಪ್ ಆಗಿದ್ದಾರೆ
ಬೆಂಗಳೂರು: ನಮ್ಮ ಹೆಮ್ಮೆಯ ಬೆಂಗಳೂರಿನ (Bengaluru) 13 ವರ್ಷದ ಪೋರಿಯೊಬ್ಬಳು ಈಗ ವಿಶ್ವ ಟೆನಿಸ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾಳೆ. ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್ ಅವರಂತಹ ದಿಗ್ಗಜರನ್ನು ನೋಡಿದ್ದ ಭಾರತಕ್ಕೆ, ಈಗ ಹೊಸ ಆಶಾಕಿರಣವೊಂದು ಸಿಕ್ಕಿದೆ. ಈಕೆಯ ಸಾಧನೆ (Achievement) ಮತ್ತು ಪ್ರತಿದಿನದ ಕಠಿಣ ಪರಿಶ್ರಮದ ಬಗ್ಗೆ ಕೇಳಿದ್ರೆ, ನೀವೂ ಒಂದು ಕ್ಷಣ ಅಚ್ಚರಿಗೊಳಗಾಗೋದು ಖಂಡಿತ!
ಬೆಂಗಳೂರಿನ ಸೃಷ್ಟಿ ಕಿರಣ್ (Srishti Kiran) ಎಂಬ ಈ ಟೆನಿಸ್ ಪ್ರತಿಭೆ, ITF ಜೂನಿಯರ್ ಸರ್ಕ್ಯೂಟ್‌ನ ಅಂಡರ್-13 (Under-13) ವಿಭಾಗದಲ್ಲಿ ವಿಶ್ವದ ನಂಬರ್ 1 ಆಟಗಾರ್ತಿಯಾಗಿ ಹೊರಹೊಮ್ಮಿದ್ದಾಳೆ! ಇದು ಸಾಮಾನ್ಯ ಸಾಧನೆಯಲ್ಲ. ಆಕೆ ಆಡಿದ್ದು ಕೇವಲ 8 ರ‍್ಯಾಂಕಿಂಗ್ ಟೂರ್ನಿಗಳನ್ನು ಮಾತ್ರ. ಆದರೂ ಆಕೆಯ ರ‍್ಯಾಂಕಿಂಗ್ ಬರೋಬ್ಬರಿ 357ಕ್ಕೇರಿದೆ!
ಭಾರತೀಯ ಟೆನಿಸ್ ಅಂಗಳದ ಉದಯೋನ್ಮುಖ ತಾರೆ ಸೃಷ್ಟಿ ಅವರು ಪ್ರಸ್ತುತ ಸೀಸನ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಸತತ 5 ಐಟಿಎಫ್ (ITF) ಜೂನಿಯರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇತ್ತೀಚೆಗೆ ಗ್ವಾಟೆಮಾಲಾದಲ್ಲಿ ನಡೆದ ಪ್ರತಿಷ್ಠಿತ ITF J100 ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನ ಪಡೆಯುವ ಮೂಲಕ ತಮ್ಮ ಜಯಭೇರಿಯನ್ನು ಮುಂದುವರಿಸಿದ್ದಾರೆ.
ಈ ಸೀಸನ್‌ನಲ್ಲಿ ಸತತ 25 ಪಂದ್ಯಗಳನ್ನು ಗೆದ್ದು ಅಜೇಯ ರೆಕಾರ್ಡ್ ಬರೆದಿರುವ ಈ ಛಲಗಾತಿ, ಕೇವಲ ಗೆಲುವಿನ ಸುಂಟರಗಾಳಿಯನ್ನಷ್ಟೇ ಎಬ್ಬಿಸುತ್ತಿಲ್ಲ, ಬದಲಿಗೆ ಮೈದಾನದಲ್ಲಿ ತನ್ನ ವಯಸ್ಸಿಗಿಂತ ಹಿರಿಯ ಹಾಗೂ ಅನುಭವಿ ಆಟಗಾರ್ತಿಯರನ್ನೂ ಮಣ್ಣುಮುಕ್ಕಿಸಿ ಅಪ್ರತಿಮ ಸಾಮರ್ಥ್ಯ ತೋರುತ್ತಿದ್ದಾರೆ. ಸೃಷ್ಟಿ ಅವರ ಈ ಅಮೋಘ ಪ್ರದರ್ಶನ ಟೆನಿಸ್ ಲೋಕದಲ್ಲಿ ದೊಡ್ಡ ಭರವಸೆಯನ್ನು ಮೂಡಿಸಿದೆ.
ಇದರಲ್ಲಿ 3 ಗಂಟೆಗಳ ಕಾಲ ಟೆನಿಸ್ ಕೋರ್ಟ್‌ನಲ್ಲಿ ಸರ್ವ್, ವಾಲಿ ಹಾಗೂ ಫುಟ್‌ವರ್ಕ್‌ನಂತಹ ಪ್ರಮುಖ ಸ್ಕಿಲ್ಸ್‌ಗಳನ್ನು ಕರಗತ ಮಾಡಿಕೊಂಡರೆ, ಉಳಿದ 2 ಗಂಟೆಗಳನ್ನು ಜಿಮ್‌ನಲ್ಲಿ ಫಿಟ್‌ನೆಸ್ ಟ್ರೈನಿಂಗ್‌ಗಾಗಿ ಮೀಸಲಿಡುತ್ತಾರೆ. ಪ್ರಸ್ತುತ ಅವರು ಟೆನಿಸ್ ಅಡ್ವಾಂಟೇಜ್ ಅಕಾಡೆಮಿಯಲ್ಲಿ ಕೋಚ್ ಧ್ಯಾನ್ ಉತ್ತಪ್ಪ ಅವರ ಮಾರ್ಗದರ್ಶನದಲ್ಲಿ ಪಳಗುತ್ತಿದ್ದು, ಇದರೊಂದಿಗೆ ಅಮೆರಿಕದ ಫ್ಲೋರಿಡಾದ ಖ್ಯಾತ RPS ಅಕಾಡೆಮಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೋಚ್ ಗೇಬ್ ಜರಾಮಿಲ್ಲೊ ಅವರಿಂದಲೂ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ.
ಸೃಷ್ಟಿಯ ಈ ಭರ್ಜರಿ ಯಶಸ್ಸಿನ ಹಿಂದೆ ಆಕೆಯ ತಂದೆ ಕಿರಣ್ ಗೋಪಾಲರಾಜನ್ ಅವರ ಬಹುದೊಡ್ಡ ತ್ಯಾಗವಿದೆ. ಯೌವ್ವನದಲ್ಲಿ ತಾವೊಬ್ಬ ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ಕಿರಣ್, ಆ ಕನಸನ್ನು ಮಗಳ ಟೆನಿಸ್ ಬ್ಯಾಟ್ ಮೂಲಕ ನನಸು ಮಾಡುತ್ತಿದ್ದಾರೆ. ತಮ್ಮ ವ್ಯವಹಾರದ ನಡುವೆಯೂ ಮಗಳ ಟೆನಿಸ್ ಕೆರಿಯರ್‌ಗೆ ಮೊದಲ ಆದ್ಯತೆ ನೀಡಿದ್ದಾರೆ.
ಕನ್ನಡದ ಕುವರಿಯ ಜಾಗತಿಕ ಸಾಧನೆ
ಸದ್ಯದ ಆಕೆಯ 23-3 ಗೆಲುವಿನ ಸರಾಸರಿ ನೋಡಿದರೆ, ಮುಂಬರುವ ದಿನಗಳಲ್ಲಿ ಭಾರತಕ್ಕೆ ಫೆಡ್ ಕಪ್ (ಬಿಲ್ಲಿ ಜೀನ್ ಕಿಂಗ್ ಕಪ್) ತಂದುಕೊಡುವ ಭರವಸೆಯ ತಾರೆಯಾಗಿ ಸೃಷ್ಟಿ ಕಿರಣ್ ಮೂಡಿಬರುತ್ತಿದ್ದಾಳೆ. ಕೇವಲ ಬೆಂಗಳೂರಿಗೆ ಮಾತ್ರವಲ್ಲ, ಇಡೀ ಭಾರತವೇ ಹೆಮ್ಮೆಪಡುವಂತಹ ಭವಿಷ್ಯದ ತಾರೆ ಈಕೆ. ಈ ಕನ್ನಡದ ಕುವರಿಯ ಕ್ರೀಡಾ ಪಯಣ ಹೀಗೆಯೇ ಮುಂದುವರಿಯಲಿ, ಇನ್ನಷ್ಟು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿಯಲಿ ಎಂದು ಹಾರೈಸೋಣ!
Bangalore [Bangalore],Bangalore,Karnataka
Jun 11, 2026 12:47 PM IST













