Last Updated:
ಡ್ರಮ್ಮರ್ ದೇವ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯಾಗಿದ್ದರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪ್ರತಿಯೊಂದು ಆರ್ಸಿಬಿ ಪಂದ್ಯದಲ್ಲಿ ಡ್ರಮ್ ಬಾರಿಸಿ ಹುರಿದುಂಬಿಸುತ್ತಿದ್ದರು.
ಬೆಂಗಳೂರು: ಕನ್ನಡ ಸಂಗೀತ ಲೋಕದ ಪ್ರಸಿದ್ಧ ಡ್ರಮ್ಮರ್, ‘ಕನ್ನಡದ ಶಿವಮಣಿ’ ಎಂದೇ ಖ್ಯಾತಿಯಾಗಿದ್ದ ಡ್ರಮ್ಮರ್ ದೇವ (Drummer Deva) ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಡ್ರಮ್ಮರ್ ದೇವ ಅವರು ಗ್ಯಾಂಗ್ರಿನ್‌ನಿಂದ ಕಾಲು ಕಳೆದುಕೊಂಡಿದ್ದರು. ಇಂದು ತಮ್ಮ ಆರ್.ಆರ್. ನಗರದ ನಿವಾಸದಲ್ಲಿ ಡ್ರಮ್ಮರ್ ದೇವ ಅವರು ತಮ್ಮ 64ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಆರಂಭದಲ್ಲಿ ಕೇವಲ ಡ್ರಮ್ ಒರೆಸುವ ಕೆಲಸ ಮಾಡುತ್ತಿದ್ದ ಡ್ರಮ್ಮರ್ ದೇವ ಅವರು, ತಮ್ಮ ಕಠಿಣ ಪರಿಶ್ರಮ ಮತ್ತು ಸಂಗೀತದ ಮೇಲಿನ ಪ್ರೀತಿಯಿಂದಾಗಿ ಅಪ್ರತಿಮ ಡ್ರಮ್ಮರ್ ಆಗಿ ಬೆಳೆದರು. ಬಳಿಕ ಸಂಗೀತ ಲೋಕದ ದಿಗ್ಗಜ ಇಳಯರಾಜ ಸೇರಿದಂತೆ ಹಲವು ಪ್ರಮುಖ ಸಂಗೀತ ನಿರ್ದೇಶಕರ ಜೊತೆ ಇವರು ಕಾರ್ಯನಿರ್ವಹಿಸಿದ್ದಾರೆ. ಡ್ರಮ್ಮರ್ ದೇವಾ ಅವರು ‘5 ಈಡಿಯಟ್ಸ್’ ಮತ್ತು ‘ಪ್ರೀತಿ ನೀ ಹೀಂಗ್ಯಾಕೆ’ ಸೇರಿದಂತೆ ಕನ್ನಡದ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಹಂಸಲೇಖ ಮತ್ತು ಸಾಧು ಕೋಕಿಲ ಅವರ ಆರ್ಕೆಸ್ಟ್ರಾ ಸೇರಿದಂತೆ ಹಲವು ಸ್ಟೇಜ್ ಶೋಗಳಲ್ಲಿ ಡ್ರಮ್ ಬಾರಿಸಿದ್ದಾರೆ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಡ್ರಮ್ಮರ್ ದೇವ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯಾಗಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪ್ರತಿಯೊಂದು ಆರ್.ಸಿ.ಬಿ ಪಂದ್ಯದಲ್ಲಿ ಡ್ರಮ್ ಬಾರಿಸಿ ಹುರಿದುಂಬಿಸುತ್ತಿದ್ದರು. ತಮ್ಮ ಎಲೆಕ್ಟ್ರಿಕ್ ಬೀಟ್ಸ್ ಮತ್ತು ಡ್ರಮ್ಸ್ ಮೂಲಕ ಸ್ಟೇಡಿಯಂನಲ್ಲಿ ಅಭಿಮಾನಿಗಳನ್ನು ರಂಜಿಸಿದ್ದರು.
(ವರದಿ: ಆನಂದ್ ಸಾಲುಂಡಿ, ನ್ಯೂಸ್18 ಕನ್ನಡ, ಬೆಂಗಳೂರು)














