Last Updated:
ತಂತ್ರಜ್ಞಾನ ಮತ್ತು ಡಿಜಿಟಲ್ ಬಳಕೆಯ ಮೂಲಕ ಆರ್ಥಿಕ ಅವಕಾಶಗಳನ್ನು ಹೇಗೆ ವಿಸ್ತರಿಸಬಹುದು ಎಂಬುವುದನ್ನು ಚರ್ಚಿಸಲು, ಈ ಸಮಿಟ್ ರಾಷ್ಟ್ರ ಹಾಗೂ ಸರ್ಕಾರದ ಮುಖ್ಯಸ್ಥರು, ಜಾಗತಿಕ ಸಂಸ್ಥೆಗಳು ಮತ್ತು ಉದ್ಯಮ ವಲಯದ ನಾಯಕರನ್ನು ಒಂದೆಡೆ ಸೇರಿಸಿತು.
ನ್ಯೂಯಾರ್ಕ್(ಸೆ.22): ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರು ನ್ಯೂಯಾರ್ಕ್ನಲ್ಲಿ ನಡೆದ ಸೆಮಾಫೋರ್ನ ‘ದಿ ನೆಕ್ಸ್ಟ್ 3 ಬಿಲಿಯನ್’ ಸಮಿಟ್ನಲ್ಲಿ ಭಾಗವಹಿಸಿ ಮಾತನಾಡಿದರು. ತಂತ್ರಜ್ಞಾನ ಮತ್ತು ಡಿಜಿಟಲ್ ಬಳಕೆಯ ಮೂಲಕ ಆರ್ಥಿಕ ಅವಕಾಶಗಳನ್ನು ಹೇಗೆ ವಿಸ್ತರಿಸಬಹುದು ಎಂಬುವುದನ್ನು ಚರ್ಚಿಸಲು, ಈ ಸಮಿಟ್ ರಾಷ್ಟ್ರ ಹಾಗೂ ಸರ್ಕಾರದ ಮುಖ್ಯಸ್ಥರು, ಜಾಗತಿಕ ಸಂಸ್ಥೆಗಳು ಮತ್ತು ಉದ್ಯಮ ವಲಯದ ನಾಯಕರನ್ನು ಒಂದೆಡೆ ಸೇರಿಸಿತು.
ಈ ಕಾರ್ಯಕ್ರಮದಲ್ಲಿ ಕೀನ್ಯಾ ಅಧ್ಯಕ್ಷ ಡಾ. ವಿಲಿಯಂ ಸಮೋಯಿ ರುಟೋ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದ ಪ್ರಧಾನಿ ಜುಡಿತ್ ಸುಮಿನ್ವಾ, ವಿಶ್ವ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕಿ ಡಾ. ಎನ್ಗೋಜಿ ಒಕೊನ್ಜೊ-ಇವೆಲಾ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಸೇರಿದಂತೆ ಹಲವು ಜಾಗತಿಕ ನಾಯಕರು ಭಾಗವಹಿಸಿದ್ದರು.
ಸೆಮಾಫೋರ್ ಸಹ-ಸಂಸ್ಥಾಪಕ ಮತ್ತು ಸಿಇಒ ಜಸ್ಟಿನ್ ಬಿ. ಸ್ಮಿತ್ ಅವರೊಂದಿಗೆ ನಡೆದ ಸಂವಾದದಲ್ಲಿ ಶ್ರೀ ಶ್ರೀ ರವಿಶಂಕರ್ ಅವರು ಆರ್ಥಿಕ ಬೆಳವಣಿಗೆಯನ್ನು ಆಂತರಿಕ ಸುಖದಿಂದ ಪ್ರತ್ಯೇಕಿಸಲಾಗುವುದಿಲ್ಲ ಎಂದು ಹೇಳಿದರು. ಅಂತಾರಾಷ್ಟ್ರೀಯ ಶಾಂತಿ ದಿನದ ಮರುದಿನ ಮಾತನಾಡಿದ ಅವರು ಸಮೃದ್ಧಿ ಶಾಂತಿಯೊಂದಿಗೆ ಬರುತ್ತದೆ. ಶಾಂತಿ ಇಲ್ಲದಿದ್ದರೆ ಸಮೃದ್ಧಿ ಇರುವುದಿಲ್ಲ ಎಂದು ತಿಳಿಸಿದರು.
ಅಮೆರಿಕಾ ಸೇರಿದಂತೆ ಪ್ರತಿಯೊಂದು ದೇಶದಲ್ಲೂ ಹಣವಂತರು ಮತ್ತು ಬಡವರ ನಡುವೆ ಅಂತರವಿದೆ ಎಂದು ತಿಳಿಸಿದ ಅವರು, ಜನರು ‘ಸಂತ್ರಸ್ತ ಮನೋಭಾವ’ದಿಂದ ಹೊರಬಂದು ಸ್ವಂತ ಪ್ರಗತಿಯನ್ನು ಕೈಗೆತ್ತಿಕೊಳ್ಳಬೇಕು. ಈ ಸಂದರ್ಭದಲ್ಲಿ ಇತ್ತ ಸಂಪತ್ತು ಇರುವವರು ಸಹಾನುಭೂತಿ ಮತ್ತು ಹಂಚಿಕೊಳ್ಳುವ ಮೌಲ್ಯವನ್ನು ಮತ್ತೆ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು. ಜಾಗತಿಕ ದಕ್ಷಿಣದಲ್ಲಿ ಸಂಪನ್ಮೂಲಗಳು ಕೆಳಮಟ್ಟಕ್ಕೆ ತಲುಪದಿರುವುದಕ್ಕೆ ಭ್ರಷ್ಟಾಚಾರವೇ ಪ್ರಮುಖ ಕಾರಣ ಎಂದೂ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಗ್ರಾಮೀಣ ಭಾರತದಲ್ಲಿ ಆರ್ಟ್ ಆಫ್ ಲಿವಿಂಗ್ ಕೇಂದ್ರದ ಸಮೀಪ 500 ನಿರುದ್ಯೋಗಿ ಯುವಕರು ಸರ್ಕಾರ ನೀಡಿದ 200 ಯೋಜನೆಗಳನ್ನು ನಿರಾಕರಿಸಿದ್ದ ಘಟನೆಯನ್ನು ಅಬರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಎರಡು ತಿಂಗಳ ಉದ್ಯಮಶೀಲತಾ ತರಬೇತಿ ನಂತರ ಅವರ ಮನೋಭಾವ ಬದಲಾಯಿತು. ಇದೇ ಮಾದರಿಯನ್ನು ಕೀನ್ಯಾ, ಘಾನಾ, ನೈಜೀರಿಯಾ, ಬೋಟ್ಸ್ವಾನಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ಆಫ್ರಿಕನ್ ರಾಷ್ಟ್ರಗಳಿಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.
ಕೆಲಸದ ಸ್ಥಳದಲ್ಲಿ ಒತ್ತಡವು ಸಂವಹನವನ್ನು ಹಾಳುಮಾಡುತ್ತದೆ, ಈ ಮೂಲಕ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಅಲ್ಲದೇ ಅನಿಶ್ಚಿತ ಸಮಯದಲ್ಲಿ ಜನರಿಗೆ ಸೇರಿದ ಭಾವನೆ ಮತ್ತು ಭದ್ರತೆ ಅಗತ್ಯ ಎಂದೂ ಒತ್ತಿ ಹೇಳಿದರು.
ಇನ್ನು ಎಐ ಕುರಿತು ಕೇಳಿದಾಗ ಉತ್ತರಿಸಿದ ಅವರು “ಬುದ್ಧಿಮತ್ತೆ, ಕೃತಕ ಬುದ್ಧಿಮತ್ತೆ, ಮತ್ತು ಪರಮ ಬುದ್ಧಿಮತ್ತೆ ಹೀಗೆ ಒಟ್ಟಾರೆಯಾಗಿ ಇವುಗಳ ಅನುಪಸ್ಥಿತಿ ಇದೆ”. ಆದರೆ ಇವುಗಳಲ್ಲಿ ಆಯ್ಕೆ ಕೊಟ್ಟರೆ ನಾನು ಮೂರನೇದನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳಿದರು. ಇನ್ನು ಶ್ರೀ ಶ್ರೀ ರವಿಶಂಕರ್ ಅವರು consciousness ಕ್ಷೇತ್ರದಲ್ಲಿ ವೈಜ್ಞಾನಿಕ ಅನ್ವೇಷಣೆಯನ್ನು ಮುಂದುವರಿಸಲು ಇನ್ಸ್ಟಿಟ್ಯೂಟ್ ಆಫ್ ಅಬ್ಸಲ್ಯೂಟ್ ಇಂಟೆಲಿಜೆನ್ಸ್ ಅನ್ನು ಸಹ ಸ್ಥಾಪಿಸಿದ್ದಾರೆ ಎಂಬುವುದು ಉಲ್ಲೇಖನೀಯ.














