Last Updated:
ಒಂದು ಕಾಲದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ವ್ಯಕ್ತಿ ಇಂದು ಅನಾಥ ಶವವಾಗಿದ್ದಾರೆ. ತನ್ನ ಜೀವನದ ಕಡೆಗಾಲವನ್ನು ವೃದ್ಧಾಶ್ರಮದಲ್ಲಿ ಕಳೆದ ವ್ಯಕ್ತಿ ಕೊನೆಗೆ ಅಂತ್ಯಸಂಸ್ಕಾರಕ್ಕೂ ಮಕ್ಕಳು ಬರಲಿಲ್ಲ.
ಒಂದು ಕಾಲದಲ್ಲಿ ಮುಂಬೈನ ಬೃಹತ್ ಜವಳಿ ಉದ್ಯಮದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ವ್ಯಕ್ತಿ, ಇದೀಗ ಯಾರು ಇಲ್ಲದ ಹಾಗೇ ಅನಾಥ ಶವವಾಗುವ ಸ್ಥಿತಿ ಬಂದೊದಗಿದೆ. ತನ್ನ ಜೀವನದ ಕೊನೆಯಲ್ಲಿ ವೃದ್ಧಾಶ್ರಮದಲ್ಲಿ ಒಂಟಿಯಾಗಿ ಪ್ರಾಣ ಬಿಟ್ಟಿದ್ದಾರೆ. ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮವೊಂದರಲ್ಲಿ 74 ವರ್ಷದ ಶಿವಚರಣ್ ರಾಮರತನ್ ಗುಪ್ತಾ ಅವರು ನಿಧನರಾಗಿದ್ದಾರೆ. ಮಕ್ಕಳು ಇದ್ದರೂ ಇಲ್ಲದಂತೆ ಅಂತ್ಯಸಂಸ್ಕಾರ ನಡೆದಿದೆ.
ಇವರ ಈ ಅಂತ್ಯ, ಆಧುನಿಕ ಸಮಾಜದಲ್ಲಿ ಹೆತ್ತವರ ಸ್ಥಾನಮಾನ ಮತ್ತು ಕುಟುಂಬ ಸಂಬಂಧಗಳ ಕಠೋರ ವಾಸ್ತವವನ್ನು ತೋರಿಸಿದೆ. ಕೋಟಿ ಕೋಟಿ ಸಂಪಾದನೆ ಮಾಡುವಾಗ, ವಯಸ್ಸಿನಲ್ಲಿದ್ದಾಗ ಬೇಕಾದ ತಂದೆ ಈಗ ಕೊನೆಗಾಲದಲ್ಲಿ ಮಕ್ಕಳಿಗೆ ಬೇಡವಾದರು.
ಶಿವಚರಣ್ ಗುಪ್ತಾ ಅವರು ಮುಂಬೈನಲ್ಲಿ ಯಶಸ್ವಿ ಜವಳಿ ಉದ್ಯಮಿಯಾಗಿದ್ದರು. ಕಾಲಕ್ರಮೇಣ ವ್ಯವಹಾರದಲ್ಲಿ ಹಿನ್ನಡೆಯಾಗಿ, ಕುಟುಂಬದಿಂದ ದೂರವಾದರು. ಅವರು ತಮ್ಮ ಪತ್ನಿಯೊಂದಿಗೆ ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮಕ್ಕೆ ಬಂದು ಸೇರಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಅವರ ಪತ್ನಿಯೂ ಅದೇ ವೃದ್ಧಾಶ್ರಮದಲ್ಲಿ ನಿಧನರಾಗಿದ್ದರು. ಪತ್ನಿಯ ಅಗಲಿಕೆಯ ನಂತರ ಸಂಪೂರ್ಣವಾಗಿ ಒಂಟಿಯಾಗಿದ್ದ ಶಿವಚರಣ್, ಕಳೆದ ಮೂರು ವರ್ಷಗಳಿಂದ ವೃದ್ಧಾಶ್ರಮವನ್ನೇ ತಮ್ಮ ಮನೆಯನ್ನಾಗಿಸಿಕೊಂಡಿದ್ದರು. ಅಲ್ಲೇ ಅವರು ಕೂಡ ಕೊನೆಯುಸಿರೆಳೆದರು.
ಶಿವಚರಣ್ ನಿಧನರಾದ ತಕ್ಷಣ ವೃದ್ಧಾಶ್ರಮದ ಆಡಳಿತ ಮಂಡಳಿ ಮುಂಬೈನಲ್ಲಿ ನೆಲೆಸಿರುವ ಅವರ ಮೂವರು ಹೆಣ್ಣುಮಕ್ಕಳನ್ನು ಸಂಪರ್ಕಿಸಿದೆ. ಆದರೆ ಮೃತದೇಹವನ್ನು ಮುಂಬೈಗೆ ತರಲು ಅಥವಾ ತಾವು ಸೋನಿಪತ್‌ಗೆ ಬರಲು ಹೆಣ್ಣುಮಕ್ಕಳು ನಿರಾಕರಿಸಿದ್ದಾರೆ. ಕೊನೆಗೆ ಆನ್‌ಲೈನ್ ಮೂಲಕ 5,100 ರೂಪಾಯಿ ಕಳುಹಿಸಿದ ಮಕ್ಕಳು, ಸೋನಿಪತ್‌ನಲ್ಲೇ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸುವಂತೆ ಆಡಳಿತ ಮಂಡಳಿಗೆ ವಿನಂತಿಸಿದ್ದಾರೆ.
ವೃದ್ಧಾಶ್ರಮದ ನಿರ್ದೇಶಕ ಆನಂದ್ ಕುಮಾರ್ ಅವರು ಸ್ವತಃ ನಿಂತು ಅಂತ್ಯಕ್ರಿಯೆಯ ವ್ಯವಹಾರಗಳನ್ನು ನೆರವೇರಿಸಿದರು. ಹೆಣ್ಣುಮಕ್ಕಳಿಗೆ ವೀಡಿಯೊ ಕರೆ ಮೂಲಕ ಪ್ರಕ್ರಿಯೆಯನ್ನು ತೋರಿಸಿದರು. ತಂದೆಯ ಚಿತೆ ಉರಿಯುತ್ತಿದ್ದಾಗ ಫೋನ್‌ನಲ್ಲಿದ್ದ ಮಗಳು, ‘ಈ ಅಂತ್ಯಕ್ರಿಯೆ ಮುಗಿಯಲು ಇನ್ನು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?’ ಎಂದು ಪದೇ ಪದೇ ಕೇಳುತ್ತಿದ್ದಳು. ಇದು ಅಲ್ಲಿದ್ದವರ ಕಣ್ಣುಗಳಲ್ಲಿ ನೀರು ತರಿಸಿತ್ತು. ಚಿತಾಭಸ್ಮವನ್ನು ಸಂಗ್ರಹಿಸಲು ಬರಬೇಕೆಂದು ಕೇಳಿಕೊಂಡಾಗಲೂ, ‘ನೋಡೋಣ, ಆದ್ರೆ ಬರ್ತೀವಿ’ ಎಂಬ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಹೊರಬಂದಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆತ್ತ ತಂದೆ-ತಾಯಿಯನ್ನು ಕಡೆಗಣಿಸುವ ಇಂತಹ ಮನೋಭಾವ ಸರಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ‘ಹಿರಿಯ ನಾಗರಿಕರ ಮತ್ತು ಪೋಷಕರ ಪೋಷಣೆ ಹಾಗೂ ಕಲ್ಯಾಣ ಕಾಯ್ದೆ-2007’ ಜಾರಿಯಲ್ಲಿದೆ. ಆದರೂ ಅನೇಕ ವೃದ್ಧರು ಮಕ್ಕಳಿಂದ ಕಾನೂನಾತ್ಮಕ ಅಥವಾ ಭಾವನಾತ್ಮಕ ಬೆಂಬಲ ಸಿಗದೆ ವೃದ್ಧಾಶ್ರಮಗಳಲ್ಲಿ ಜೀವನ ಕಳೆಯುತ್ತಿದ್ದಾರೆ.
ಈ ಘಟನೆ ಕುಟುಂಬ ಸಂಬಂಧಗಳು ದುರ್ಬಲಗೊಳ್ಳುತ್ತಿರುವುದನ್ನು ತೋರಿಸುತ್ತದೆ. ಹೆತ್ತವರು ಮಕ್ಕಳಿಗಾಗಿ ಜೀವನವಿಡೀ ಶ್ರಮಿಸುತ್ತಾರೆ. ವಯಸ್ಸಾದಾಗ ಅವರಿಗೆ ಆರೈಕೆ ಮತ್ತು ಗೌರವ ಸಿಗುವುದು ಅಗತ್ಯ. ಹಣ ಕಳುಹಿಸುವುದು ಮಾತ್ರ ಸಾಕಾಗುವುದಿಲ್ಲ. ಭಾವನಾತ್ಮಕ ಬೆಂಬಲ ಮತ್ತು ಹಾಜರಿ ಮುಖ್ಯ. ವೃದ್ಧಾಶ್ರಮದ ಆಡಳಿತ ಮಂಡಳಿ ತಂದೆಯ ಅಂತ್ಯಕ್ರಿಯೆಯನ್ನು ಗೌರವದಿಂದ ನೆರವೇರಿಸಿದೆ. ಆದರೆ ಮಕ್ಕಳು ದೈಹಿಕವಾಗಿ ಹಾಜರಾಗದಿರುವುದು ಸಮಾಜದಲ್ಲಿ ಚರ್ಚೆಗೆ ಕಾರಣವಾಗಿದೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಕುಟುಂಬಗಳು ಜಾಗರೂಕತೆ ವಹಿಸಬೇಕು.
Panipat,Haryana














