Last Updated:
TMC To Merge With NCP: TMCಗೆ ಗುಡ್ ಬೈ NCPಗೆ ಹಾಯ್ ಹಾಯ್; ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ ಸೇರಿ, ಮೋದಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ 20 TMC ಸಂಸದರು.
ದೆಹಲಿ: ಪಶ್ಚಿಮ ಬಂಗಾಳದ (West Bengal) ರಾಜಕೀಯ ವಲಯದಲ್ಲಿ ಅತ್ಯಂತ ಭಾರಿ ರಾಜಕೀಯ ಕ್ರಾಂತಿಯೊಂದು ಸಂಭವಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ (Trinamool Congress Party) ಒಳಗೆ ಭುಗಿಲೆದ್ದಿದ್ದ ಬಂಡಾಯದ ಜ್ವಾಲೆ ಈಗ ದೊಡ್ಡ ತಿರುವು ಪಡೆದುಕೊಂಡಿದೆ. ಅದರಂತೆ, ಟಿಎಂಸಿ ಪಕ್ಷದ (TMC Party) ಅತೃಪ್ತ ಸಂಸದರ ದೊಡ್ಡ ಬಣವೊಂದು ಅಧಿಕೃತವಾಗಿ ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿಯೊಂದಿಗೆ ವಿಲೀನಗೊಳ್ಳಲು ಮುಂದಾಗಿದೆ. ಈ ಮೂಲಕ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಭಾಗವಾಗಲಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿ ಕಾಕೋಲಿ ಘೋಷ್ ನೇತೃತ್ವದ ಅತೃಪ್ತ ಸಂಸದರ ಬಣ ತಾವು ರಾಷ್ಟ್ರೀಯತಾವಾದಿ ನಾಗರಿಕ ಪಕ್ಷ ಅರ್ಥಾತ್ ನ್ಯಾಷನಲಿಸ್ಟ್ ಸಿಟಿಜನ್ ಆಫ್ ಇಂಡಿಯಾ ಜೊತೆ ವಿಲೀನಗೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಈ ಕುರಿತು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ಅಧಿಕೃತ ಪತ್ರವನ್ನು ಕೂಡ ಸಲ್ಲಿಕೆ ಮಾಡಲಾಗಿದೆ. ತಾವು ಟಿಎಂಸಿ ಪಕ್ಷದ ಒಟ್ಟು ಬಲದ ಮೂರನೇ ಎರಡರಷ್ಟು ಭಾಗವನ್ನು ಪ್ರತಿನಿಧಿಸುತ್ತಿರುವುದಾಗಿ ಬಂಡಾಯ ವಾದಿಸಿರುವ ಸಂಸದರು, “ಹಾಲಿ ಸಂಸದರಾಗಿ ಆಯ್ಕೆಯಾಗಿರುವ ತಾವು ತೃಣಮೂಲ ಕಾಂಗ್ರೆಸ್ ಕಾರ್ಯವೈಖರಿ ಮತ್ತು ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದು, ಪ್ರತ್ಯೇಕವಾಗಿ ಕುಳಿತುಕೊಳ್ಳಲು ಸಂಸತ್ತಿನಲ್ಲಿ ಅವಕಾಶ ನೀಡುವಂತೆ” ಒತ್ತಾಯಿಸಿದ್ದಾರೆ.
ಈ ಮಹತ್ವದ ವಿಲೀನ ಪ್ರಕ್ರಿಯೆಯ ಬೆನ್ನಲ್ಲೇ ಬಂಡಾಯ ನಾಯಕರ ಗುಂಪು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ತಮ್ಮ ಬೇಷರತ್ತಾದ ಬೆಂಬಲವನ್ನು ಘೋಷಿಸಲು ನಿರ್ಧರಿಸಿದೆ. ಪ್ರಧಾನಮಂತ್ರಿಯವರ ಸಮರ್ಥ ನಾಯಕತ್ವದಲ್ಲಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದಾಗಿ ಕೇಂದ್ರ ಸರ್ಕಾರಕ್ಕೆ ಸಂಸತ್ತಿನಲ್ಲಿ ಮತ್ತಷ್ಟು ಬಲ ಬಂದಂತಾಗಲಿದ್ದು, ಬಂಗಾಳದ ರಾಜಕೀಯ ಸಮೀಕರಣಗಳು ಸಂಪೂರ್ಣವಾಗಿ ಬದಲಾಗಲಿವೆ.
ಇಲ್ಲಿಯವರೆಗೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ರಾಷ್ಟ್ರೀಯತಾವಾದಿ ನಾಗರಿಕ ಪಕ್ಷವು ಅತ್ಯಂತ ಸಣ್ಣ, ಪ್ರಾದೇಶಿಕ ಮತ್ತು ಗುರುತಿಸಿಕೊಳ್ಳದ ರಾಜಕೀಯ ಪಕ್ಷವಾಗಿ ಉಳಿದುಕೊಂಡಿತ್ತು. ಭಾರತೀಯ ಚುನಾವಣಾ ಆಯೋಗದಲ್ಲಿ ನೋಂದಾಯಿಸಲ್ಪಟ್ಟಿರುವ ಈ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ದೊಡ್ಡ ಅಸ್ತಿತ್ವ ಇರಲಿಲ್ಲ. ಪ್ರಸ್ತುತ ಭಾರತೀಯ ಸಂಸತ್ತಿನ ಉಭಯ ಸದನಗಳಲ್ಲೂ ಈ ಪಕ್ಷದ ಯಾವುದೇ ಸಂಸದರು ಇರಲಿಲ್ಲ.
ಆದರೆ, ನಾಮಮಾತ್ರದ ಚುನಾವಣಾ ಚಟುವಟಿಕೆಗಳು ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ಕೆಲವು ಗಡಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಐತಿಹಾಸಿಕವಾಗಿ ಈ ಪಕ್ಷವು ಯಾವುದೇ ದೊಡ್ಡ ಚುನಾವಣಾ ಯಶಸ್ಸನ್ನು ಅಥವಾ ಪ್ರಮುಖ ಸ್ಥಾನಗಳನ್ನು ಗೆದ್ದ ಇತಿಹಾಸ ಹೊಂದಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಭಾರಿ ಸಂಖ್ಯೆಯ ಬಂಡಾಯ ಸಂಸದರು ಈ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ನೀಡುವ ನಿರ್ಧಾರ ಪ್ರಕಟಿಸಿದ ತಕ್ಷಣವೇ ಈ ಪ್ರಾದೇಶಿಕ ಪಕ್ಷವು ದೇಶಾದ್ಯಂತ ಸುದ್ದಿ ಮಾಡತೊಡಗಿತು.!
ಟಿಎಂಸಿ ಪಕ್ಷದ ಒಳಗಿನ ದಂಗೆಯು ಕೇವಲ ಕಾಕೋಲಿ ಘೋಷ್ ಅವರಿಗೆ ಮಾತ್ರ ಸೀಮಿತವಾಗಿಲ್ಲ ಎನ್ನಲಾಗುತ್ತಿದ್ದು, ಯೂಸುಫ್ ಪಠಾಣ್ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಸಂಸದರು ಮಮತಾ ಬ್ಯಾನರ್ಜಿ ಅವರ ನಡೆಗಳ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಂಸದರು ಬಂಡಾಯ ಬಣದ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಮತ್ತೊಂದೆಡೆ ಸುಶ್ಮಿತಾ ದೇವ್ ಅವರಂತಹ ನಾಯಕರು ಕೂಡ ತೃಣಮೂಲ ಕಾಂಗ್ರೆಸ್ ತೊರೆದು ಅಸ್ಸಾಂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವುದು ಪಕ್ಷದ ಸರಣಿ ವಿಭಜನೆಯ ಮುನ್ಸೂಚನೆಯನ್ನು ನೀಡಿದೆ.
New Delhi,Delhi
Jun 14, 2026 11:14 PM IST













