Last Updated:
ಇಂಗ್ಲೆಂಡ್ ನೀಡಿದ್ದ 151 ರನ್ಗಳ ಸಾಧಾರಣ ಗುರಿಯನ್ನ ಆಸ್ಟ್ರೇಲಿಯಾ ತಂಡ ಕೇವಲ 17.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ ಆಸ್ಟ್ರೇಲಿಯಾ 7ನೇ ಬಾರಿಗೆ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ.
ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯಾ (Australia vs England) ತಂಡದ ಅಪ್ರತಿಮ ಅಧಿಪತ್ಯ ಮುಂದುವರಿದಿದೆ. ಕಾಂಗರೂಪಡೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿತು. ಇಂಗ್ಲೆಂಡ್ ನೀಡಿದ್ದ 151 ರನ್ಗಳ ಸಾಧಾರಣ ಗುರಿಯನ್ನ ಆಸ್ಟ್ರೇಲಿಯಾ ತಂಡ ಕೇವಲ 17.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ ಆಸ್ಟ್ರೇಲಿಯಾ 7ನೇ ಬಾರಿಗೆ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ. ಅತಿಥೇಯ ಇಂಗ್ಲೆಂಡ್ ತಂಡ 4ನೇ ಬಾರಿಗೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕಿ ಸೋಫಿ ಮೊಲಿನೆಕ್ಸ್ ಅವರ ತೀರ್ಮಾನವನ್ನು ಬೌಲರ್ಗಳು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಆರಂಭದಿಂದಲೇ ಆಕ್ರಮಣಕಾರಿ ದಾಳಿ ನಡೆಸಿದ ಆಸ್ಟ್ರೇಲಿಯಾ ಬೌಲರ್ಗಳು, ಇಂಗ್ಲೆಂಡ್ನ ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ಗೆ ದೊಡ್ಡ ಆಘಾತ ನೀಡಿದರು. ಇಂಗ್ಲೆಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯಿತು.
151 ರನ್ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ್ತಿ ಜಾರ್ಜಿಯಾ ವೋಲ್ 6 ಎಸೆತಗಳಲ್ಲಿ ಕೇವಲ 9 ರನ್ಗಳಿಸಿ ಲಾರೆನ್ ಬೆಲ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ್ತಿ ಬೆತ್ ಮೂನಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇಂಗ್ಲೆಂಡ್ ಬೌಲರ್ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದ ಮೂನಿ 49 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 64 ರನ್ ಸಿಡಿಸಿ ಜಯದ ಹಾದಿಯನ್ನು ಸುಲಭಗೊಳಿಸಿದರು. ಇವರಿಗೆ ಸಾಥ್ ನೀಡಿದ ಫೀಬಿ ಲಿಚ್ಫೀಲ್ಡ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿ ಗೆಲುವಿನ ರೂವಾರಿಯಾದರು. ಲಿಚ್ಫೀಲ್ಡ್ 35 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 48 ರನ್ಗಳಿಸಿದರು.
ಎಲಿಸ್ ಪೆರ್ರಿ 12 ಎಸೆತಗಳಲ್ಲಿ ಅಜೇಯ 13, ಗಾರ್ಡ್ನರ್ ಅಜೇಯ 3 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಇಂಗ್ಲೆಂಡ್ ಪರ ಚಾರ್ಲಿ ಡೀನ್, ಲಾರೆನ್ ಬೆಲ್ ಹಾಗೂ ಸೋಫೀ ಎಕ್ಲೆಸ್ಟೋನ್ ತಲಾ 1 ವಿಕೆಟ್ ಪಡೆದರು.
ಇಂಗ್ಲೆಂಡ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ್ತಿ ಆ್ಯಮಿ ಜೋನ್ಸ್ (8) ಹಾಗೂ ಡೇನಿಯಲ್ ವೇಟ್ (8) ಬೇಗನೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಅನುಭವಿ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ಆಸ್ಟ್ರೇಲಿಯಾ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಅವರು 53 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಅಜೇಯ 58 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅವರಿಗೆ ಉತ್ತಮ ಸಾಥ್ ನೀಡಿದ ಅಲೈಸ್ ಕ್ಯಾಪ್ಸೆ 23 ರನ್ ಕಾಣಿಕೆ ನೀಡಿದರು. ಹೀದರ್ ನೈಟ್ ಕೇವಲ 2 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ಇನ್ನಿಂಗ್ಸ್ನ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಯುವ ಆಟಗಾರ್ತಿ ಫ್ರೇಯಾ ಕೆಂಪ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದ ಕೆಂಪ್, ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಮನಮೋಹಕ ಸಿಕ್ಸರ್ ನೆರವಿನಿಂದ ಅಜೇಯ 44 ರನ್ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ತಂಡ 150ರ ಗಡಿ ದಾಟಲು ನೆರವಾದರು.
2026ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತನ್ನದೇ ದಾಖಲೆಯನ್ನ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಹೆಚ್ಚಿಸಿಕೊಂಡಿತು. ಆಸ್ಟ್ರೇಲಿಯಾ ಇದುವರೆಗೆ ಒಟ್ಟು 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. 2010, 2012, 2014, 2018, 2020, 2023 ಹಾಗೂ 2026ರಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Jul 05, 2026 11:26 PM IST













