Last Updated:
ಬುಧವಾರ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಹರಾಜಿನಲ್ಲಿ ಪೋಲಾರ್ಡ್ ಅವರನ್ನು ಜೆಎಸ್‌ಕೆ 90,162 ಯುಎಸ್‌ಡಿ ನೀಡಿ ತನ್ನದಾಗಿಸಿಕೊಂಡಿದೆ. ಪೊಲಾರ್ಡ್ ಎಂಐ ಕೇಪ್ಟೌನ್ ಪರ ಆಡಿದ್ದರು.
ಎಸ್‌ಎ20 (SA20) ಸೀಸನ್ 5ರ ಆಟಗಾರರ ಹರಾಜಿನಲ್ಲಿ 18 ವರ್ಷದ ಯುವ ಕ್ರಿಕೆಟಿಗ ಜೇಸನ್ ರೌಲ್ಸ್ ಹೈಲೈಟ್ ಆಗಿದ್ದಾರೆ. ಬುಧವಾರ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಹರಾಜಿನಲ್ಲಿ ಈ ದಕ್ಷಿಣ ಆಫ್ರಿಕಾದ ಉದಯೋನ್ಮುಖ ಆಟಗಾರನನ್ನು ಜೊಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ (JSK) ತಂಡವು ಭಾರಿ ಪೈಪೋಟಿಯ ನಡುವೆ 1,74,248 ಯುಎಸ್‌ಡಿ (1.68 ಕೋಟಿ) ನೀಡಿ ಖರೀದಿಸಿತು. ಇದರೊಂದಿಗೆ ಜೇಸನ್ ರೌಲ್ಸ್ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಆಟಗಾರ ಎನಿಸಿಕೊಂಡರು. ಜನವರಿ 2027 ರಿಂದ ಆರಂಭವಾಗಲಿರುವ ಐದನೇ ಸೀಸನ್‌ಗಾಗಿ ನಾಲ್ಕು ಫ್ರಾಂಚೈಸಿಗಳು ಈ ಹರಾಜಿನ ಮೂಲಕ ತಮ್ಮ ತಂಡಗಳನ್ನು ಪೂರ್ಣಗೊಳಿಸಿವೆ.
ಸೇಂಟ್ ಡೇವಿಡ್ಸ್ ಮಾರಿಸ್ಟ್ ಇನಾಂಡಾ ಶಾಲೆಯ ವಿದ್ಯಾರ್ಥಿ ಹಾಗೂ ‘ಸ್ಕೂಲ್ಸ್ ಎಸ್‌ಎ20’ ಪದವೀಧರನಾದ ಜೇಸನ್ ರೌಲ್ಸ್‌ನನ್ನು ಖರೀದಿಸಲು ಜೊಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ಮತ್ತು ಎಂಐ ಕೇಪ್ ಟೌನ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಜೆಎಸ್‌ಕೆ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇಂಟರ್ನ್ಯಾಷನಲ್ ಕ್ರಿಕೆಟ್‌ನ ಹಲವು ದೊಡ್ಡ ಹೆಸರುಗಳಿಗಿಂತಲೂ ಈ ಯುವ ಆಟಗಾರನಿಗೆ ಹೆಚ್ಚು ಬೆಲೆ ಸಿಕ್ಕಿರುವುದು, ಎಸ್‌ಎ20 ವ್ಯವಸ್ಥೆಯಲ್ಲಿ ದಕ್ಷಿಣ ಆಫ್ರಿಕಾದ ಯುವ ಆಟಗಾರರಿಗೆ ಫ್ರಾಂಚೈಸಿಗಳು ನೀಡುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
ಇದೇ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ (Du Plessis) ತಮ್ಮ ಹಳೆಯ ತಂಡಕ್ಕೆ ಮರಳಿದ್ದಾರೆ. 42 ವರ್ಷದ ಡು ಪ್ಲೆಸಿಸ್ ಅವರನ್ನು ಎಂಐ ಕೇಪ್ ಟೌನ್ ವಿರುದ್ಧದ ಬಿಡ್ಡಿಂಗ್ ಯುದ್ಧದ ನಂತರ ಜೋಬರ್ಗ್ ಸೂಪರ್ ಕಿಂಗ್ಸ್ 1,62,286 ಯುಎಸ್‌ಡಿ (₹1.57 ಕೋಟಿ) ನೀಡಿ ಖರೀದಿಸಿತು. ಮೊದಲ ನಾಲ್ಕು ಸೀಸನ್‌ಗಳನ್ನು ಜೆಎಸ್‌ಕೆ ತಂಡದಲ್ಲೇ ಕಳೆದಿದ್ದ ಡು ಪ್ಲೆಸಿಸ್, ಈಗ ವೆಸ್ಟ್ ಇಂಡೀಸ್‌ನ ಟಿ20 ದೈತ್ಯ ಕೀರಾನ್ ಪೋಲಾರ್ಡ್ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ. ಪೋಲಾರ್ಡ್ ಅವರನ್ನು ಜೆಎಸ್‌ಕೆ 90,162 ಯುಎಸ್‌ಡಿ (₹87 ಲಕ್ಷ) ನೀಡಿ ತನ್ನದಾಗಿಸಿಕೊಂಡಿದೆ.
ಎಂಐ ಕೇಪ್ ಟೌನ್ ತಂಡವು ಕೂಡ ಹರಾಜಿನಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡಿದೆ. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವಿಯಾನ್ ಮುಲ್ಡರ್ ಅವರನ್ನು 1,56,274 ಯುಎಸ್‌ಡಿಗೆ (1.51 ಕೋಟಿ ರೂ) ಮತ್ತು ವೆಸ್ಟ್ ಇಂಡೀಸ್ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಅವರನ್ನು 90,162 ಯುಎಸ್‌ಡಿಗೆ (87 ಲಕ್ಷ) ಖರೀದಿಸಿದೆ. ಮತ್ತೊಂದೆಡೆ, ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ದಕ್ಷಿಣ ಆಫ್ರಿಕಾದ ಮಾಜಿ ಟಾಪ್-ಆರ್ಡರ್ ಬ್ಯಾಟರ್ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅವರನ್ನು 30,053 ಯುಎಸ್‌ಡಿಗೆ (₹29 ಲಕ್ಷ) ಖರೀದಿಸಿ ತನ್ನ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಿಕೊಂಡಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾದ ಟೆಸ್ಟ್ ಮತ್ತು ಒಡಿಐ ನಾಯಕ ತೆಂಬಾ ಬವುಮಾ (11 ಲಕ್ಷ ರೂ) ಕೂಡ ಕ್ಯಾಪಿಟಲ್ಸ್ ತಂಡದಲ್ಲಿ ಆಡಲಿದ್ದಾರೆ.
ಮೂರು ಬಾರಿಯ ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ತನ್ನ ಬಲಿಷ್ಠ ತಂಡವನ್ನು ಪೂರ್ಣಗೊಳಿಸಲು ದಕ್ಷಿಣ ಆಫ್ರಿಕಾದ ಎಡಗೈ ವೇಗಿ ನಾಂದ್ರೆ ಬರ್ಗರ್ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಕ್ರೇಗ್ ಓವರ್ಟನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಎಂಐ ಕೇಪ್ ಟೌನ್ ತಂಡವು ನ್ಯೂಜಿಲೆಂಡ್‌ನ ಖ್ಯಾತ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಮರಳಿ ತಂಡಕ್ಕೆ ತಂದಿದೆ. ಜೊಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡವು ಅಮೆರಿಕಾದ ಬ್ಯಾಟರ್ ಆಂಡ್ರಿಸ್ ಗೌಸ್ ಮತ್ತು ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜಾರಬಾನಿ ಅವರನ್ನು ಖರೀದಿಸುವ ಮೂಲಕ ಲೀಗ್‌ನ ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ವಿಸ್ತರಿಸಿದೆ.
ಎಸ್‌ಎ20 ಸೀಸನ್ 5 ಟೂರ್ನಿಯು ಜನವರಿ 17, 2027 ರಿಂದ ಪ್ರಾರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.














