Last Updated:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿರುವ ರುಚಿಕಾ ಸಿಂಗ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿರುವ ರುಚಿಕಾ ಸಿಂಗ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ. ಈ ತನಿಖೆಯ ನಡುವೆ, ಸಿಎನ್‌ಎನ್-ನ್ಯೂಸ್18 (CNN-News18) ವರದಿಗಾರ್ತಿ ಸ್ಮೃತಿ ಮಿಶ್ರಾ ಅವರು ರುಚಿಕಾ ಸಿಂಗ್ ಕೆಲಕಾಲ ನೇಲ್ ಆರ್ಟ್ (ಉಗುರು ಕಲೆ) ಕಲಿಯುತ್ತಿದ್ದ ಸಲೂನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಸಲೂನ್ ಮಾಲೀಕರು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ರುಚಿಕಾ ಸಿಂಗ್ ಎಂದಿಗೂ ತಮ್ಮ ಸಲೂನ್‌ನಲ್ಲಿ ಕೆಲಸಗಾರರಾಗಿ ಉದ್ಯೋಗದಲ್ಲಿ ಇರಲಿಲ್ಲ, ಬದಲಿಗೆ ಕೇವಲ ನೇಲ್ ಆರ್ಟ್ ಕಲಿಯಲು ಬರುತ್ತಿದ್ದರು. ರುಚಿಕಾ ಸುಮಾರು ಎರಡು ವಾರಗಳ ಕಾಲ ಸಲೂನ್‌ನಲ್ಲಿ ನೇಲ್ ಆರ್ಟ್ ಕಲಿಯುತ್ತಿದ್ದರು. ಆದರೆ ಅವರ ನಿಜ ಹೆಸರಿನಲ್ಲಿ ಅಲ್ಲ, ಮೆನ್ಶಿಲ್ ಎಂಬ ನಕಲಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಟಿ.ಪಿ. ತ್ರಿಪಾಠಿ ಹೇಳಿದ್ದಾರೆ. ಸಲೂನ್‌ನಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕಾದ ಆಧಾರ್ ಕಾರ್ಡ್‌ನಂತಹ ಯಾವುದೇ ಅಧಿಕೃತ ಗುರುತಿನ ಚೀಟಿಗಳನ್ನು ಅವರು ನೀಡಿರಲಿಲ್ಲ.
ಗುರುತಿನ ಪುರಾವೆಗಾಗಿ ಆಧಾರ್ ಕಾರ್ಡ್ ಕೇಳಿದಾಗ ರುಚಿಕಾ ನೀಡಲು ಒಪ್ಪಲಿಲ್ಲ. ಇದರಿಂದಾಗಿ ಜೂನ್ 9ರಂದು ಅವರನ್ನು ಸಲೂನ್‌ನಿಂದ ವಜಾಗೊಳಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಮೋದಿ ವಿರುದ್ಧ ರುಚಿಕಾ ಬಳಸಿರುವ ಭಾಷೆಯನ್ನು ತ್ರಿಪಾಠಿ ತೀವ್ರವಾಗಿ ಖಂಡಿಸಿದ್ದಾರೆ. ಭಾರತದ ಪ್ರಧಾನಮಂತ್ರಿಯ ವಿರುದ್ಧ ಅಂತಹ ಅಸಭ್ಯ ಭಾಷೆ ಬಳಸುವುದು ಸ್ವೀಕಾರಾರ್ಹವಲ್ಲ. ಆಕೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
“ನೋಡಿ, ಯಾರೂ ಇಂತಹ ನಡವಳಿಕೆಯನ್ನು ಬೆಂಬಲಿಸಬಾರದು. ಯಾರಾದರೂ ನಿಂದನಾತ್ಮಕ ಅಥವಾ ಆಕ್ಷೇಪಾರ್ಹ ಭಾಷೆಯನ್ನು ಬಳಸಿದರೆ, ಆ ವ್ಯಕ್ತಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಇದು ಖಂಡನೀಯ. ಅವರು ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ, ಯಾರು ಜವಾಬ್ದಾರರೋ ಅವರಿಗೆ ಸಾಧ್ಯವಾದಷ್ಟು ಕಠಿಣ ಶಿಕ್ಷೆಯಾಗಬೇಕು.”
ರುಚಿಕಾ ಅವರ ತಾಯಿ ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆಂದು ಸಲೂನ್‌ನಲ್ಲಿ ರುಚಿಕಾ ಸಹದ್ಯೋಗಿ ಶಾಲಿನಿ ತಿಳಿಸಿದ್ದಾರೆ. ಶಾಲಿನಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ತಾಯಿ, “ಈ ಇಡೀ ಘಟನೆಯಿಂದ ನಮಗೆ ತೀವ್ರ ನಾಚಿಕೆ ಮತ್ತು ದುಃಖವಾಗಿದೆ” ಎಂದು ಹೇಳಿಕೊಂಡಿದ್ದಾರೆ.
ಸಲೂನ್‌ನ ಸಿಬ್ಬಂದಿಯಾದ ಶಾಲಿನಿ ಮಾತನಾಡಿ, ರುಚಿಕಾ ಅವರ ತಾಯಿಯ ಮೂಲಕ ತಮಗೆ ಮೊದಲು ಆಕೆಯ ಪರಿಚಯವಾಯಿತು. ಆಕೆಯ ತಾಯಿ ತನ್ನ ಮಗಳಿಗೆ ನೇಲ್ ಆರ್ಟ್ ಕಲಿಸಲು ಬಯಸಿದ್ದರು. ‘ನಿಜ ಹೇಳಬೇಕೆಂದರೆ, ಮೊದಮೊದಲು ನಾನು ಆಕೆಯನ್ನು ವೈಯಕ್ತಿಕವಾಗಿ ಭೇಟಿಯಾಗಿರಲಿಲ್ಲ. ಆಕೆಯ ತಾಯಿ ನನ್ನ ಬಳಿ ಬಂದು, ನಾನು ಸಿಂಗಲ್ ಪೇರೆಂಟ್, ದಯವಿಟ್ಟು ನನ್ನ ಮಗಳಿಗೆ ಏನಾದರೂ ಕೆಲಸ ಕಲಿಸಿಕೊಡಿ” ಎಂದು ಕೇಳಿಕೊಂಡರು ಎಂದು ತಿಳಿಸಿದ್ದಾರೆ.
ಮಾತು ಮುಂದುವರಿಸಿದ ಶಾಲಿನಿ ಅವರು ರುಚಿಕಾ ಸ್ವತಃ ಮಾಧ್ಯಮ ಮತ್ತು ಸಾರ್ವಜನಿಕರ ಮುಂದೆ ಬಂದು ತನ್ನ ಕೃತ್ಯಕ್ಕಾಗಿ ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
Ruchika Singh: ಪಿಎಂ ಮೋದಿಗೆ ನಿಂದಿಸಿ ವೈರಲ್ ಆದ ರುಚಿಕಾ ಸಿಂಗ್ ಬಗ್ಗೆ ಶಾಕಿಂಗ್ ವಿಚಾರ ಬಹಿರಂಗ! ಆಕೆ ಕೆಲಸ ಮಾಡುತ್ತಿದ್ದ ಸಲೂನ್ ಮಾಲೀಕ ಹೇಳಿದ್ದೇನು?














