Last Updated:
ಇದೇ ವೇಳೆ ವಿಜಯ್ ದೇವರಕೊಂಡ, ರಶ್ಮಿಕಾ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಅಭಿನಯದ ಬಹುನಿರೀಕ್ಷಿತ ರಣಬಾಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 16ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ಈ ಸಿನಿಮಾದಲ್ಲಿ ಮದುವೆಯ ಬಳಿಕ ಈ ಜೋಡಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಚಿತ್ರದ ಪ್ರಚಾರದ ಭಾಗವಾಗಿ ಇಬ್ಬರೂ ಪ್ರಖರ್ ಗುಪ್ತಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ್ದು, ಈ ವೇಳೆ ಪ್ರೀತಿ ಮತ್ತು ಸಂಬಂಧದ ಕುರಿತು ಹಂಚಿಕೊಂಡ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ.
ಪಾಡ್‌ಕ್ಯಾಸ್ಟ್‌ನಲ್ಲಿ ಪ್ರೀತಿಯ ಬಗ್ಗೆ ಚರ್ಚೆ ನಡೆಯುವಾಗ, ಪ್ರೀತಿ ತಾನಾಗಿಯೇ ಸಾಗುವ ಪ್ರಯಾಣದಂತಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, ಪ್ರೀತಿ ಸಹಜವಾಗಿರಬೇಕು ಎಂಬುದನ್ನು ಒಪ್ಪಿಕೊಂಡರೂ, ನಾವು ಪ್ರೀತಿಸುವ ವ್ಯಕ್ತಿಗಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು ಎಂದು ಹೇಳಿದ್ದಾರೆ.
ಹೊರಗಿನವರಿಗಾಗಿ ನಾವು ಸಾಕಷ್ಟು ಪ್ರಯತ್ನ ಮಾಡುತ್ತೇವೆ. ಆದರೆ ನಮ್ಮ ಮನೆಯವರ ವಿಷಯದಲ್ಲಿ ಅದೇ ಕಾಳಜಿ ಕೆಲವೊಮ್ಮೆ ಕಡಿಮೆಯಾಗುತ್ತದೆ. ಮದುವೆಯಾದ ನಂತರ ಅಥವಾ ಜೀವನದಲ್ಲಿ ಜವಾಬ್ದಾರಿಗಳು ಹೆಚ್ಚಾದಾಗ, ಒಬ್ಬರನ್ನೊಬ್ಬರು ವಿಚಾರಿಸುವಂತಹ ಸಣ್ಣ ಸಣ್ಣ ಅಭ್ಯಾಸಗಳು ನಿಂತುಹೋಗಬಹುದು. ಆದರೆ ಸಂಬಂಧದಲ್ಲಿದ್ದರೂ, ಮದುವೆಯಾಗಿದ್ದರೂ ಅಥವಾ ಮಕ್ಕಳಿದ್ದರೂ ಪರಸ್ಪರ ಕಾಳಜಿ ತೋರಿಸುವ ಪ್ರಯತ್ನ ಮುಂದುವರಿಯಬೇಕು ಎಂದು ರಶ್ಮಿಕಾ ಹೇಳಿದ್ದಾರೆ.
ಇದೇ ವೇಳೆ ವಿಜಯ್ ದೇವರಕೊಂಡ, ರಶ್ಮಿಕಾ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ದಿನಕ್ಕೆ ಕನಿಷ್ಠ 10ರಿಂದ 15 ಬಾರಿ ಐ ಲವ್ ಯೂ ಎಂದು ಹೇಳುತ್ತಾರೆ ಎಂದು ವಿಜಯ್ ತಿಳಿಸಿದ್ದಾರೆ. ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುವುದು ಮುಖ್ಯ ಎಂದು ರಶ್ಮಿಕಾ ಆಗಾಗ್ಗೆ ಹೇಳುತ್ತಾರೆ. ತಾನು ಆ ಪ್ರೀತಿಯನ್ನು ಸದಾ ಅನುಭವಿಸುತ್ತೇನೆ ಎಂದು ವಿಜಯ್ ಹೇಳಿದ್ದಾರೆ.
ರಣಬಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜಯಮ್ಮ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1854ರಿಂದ 1878ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಹೊಂದಿರುವ ಈ ಸಿನಿಮಾ ಪಿರಿಯಾಡಿಕ್ ಆಕ್ಷನ್ ಡ್ರಾಮಾ ಆಗಿದೆ. ಹೋರಾಟ ಮತ್ತು ಭರ್ಜರಿ ಆಕ್ಷನ್ ದೃಶ್ಯಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ.
ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವೇಗ ನೀಡಿರುವ ಎಂದಯ್ಯ ಸಾಮಿ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ವಿಜಯ್ ಮತ್ತು ರಶ್ಮಿಕಾ ಅವರ ಕೆಮಿಸ್ಟ್ರಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಟೋಬರ್ 16ರಂದು ರಣಬಾಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಈ ಜೋಡಿಯ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.














