ಆದರೆ ಇದೀಗ ಈ ಜೋಡಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದು, ವಿವಾಹವಾಗಿದ್ದಾರೆ. ಮದುವೆಯ ಬಳಿಕ ವಿಜಯ್ ದೇವರಕೊಂಡ ತಮ್ಮ ಎಂಟು ವರ್ಷಗಳ ಸಂಬಂಧದ ಬಗ್ಗೆ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನ್ಯೂಸ್ ಬುಕ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ತಮ್ಮ ಮತ್ತು ರಶ್ಮಿಕಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಎಂಟು ವರ್ಷಗಳ ಹಿಂದೆ ಇಬ್ಬರೂ ಸಹನಟರಾಗಿ ಭೇಟಿಯಾದರು. ಆರಂಭದಲ್ಲಿ ಆಪ್ತ ಸ್ನೇಹಿತರಾಗಿದ್ದ ಅವರು, ನಂತರ ಪ್ರೀತಿಯಲ್ಲಿ ಬಿದ್ದಿದ್ದು, ಇದೀಗ ಪತಿ-ಪತ್ನಿಯಾಗಿದ್ದೇವೆ ಎಂದು ವಿಜಯ್ ಹೇಳಿದ್ದಾರೆ.
ನಮ್ಮ ಸಂಬಂಧವನ್ನು ನಾವು ಜಗತ್ತಿನಿಂದ ಮುಚ್ಚಿಡಲು ಯಾವುದೇ ಕಣ್ಣಾಮುಚ್ಚಾಲೆ ಆಟವಾಡುತ್ತಿರಲಿಲ್ಲ. ಆದರೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಜಗತ್ತಿನ ಮುಂದೆ ಮಾತನಾಡಲು ನನಗೆ ಎಂದಿಗೂ ಮನಸ್ಸಿರಲಿಲ್ಲ. ಇದು ನನ್ನ ವೈಯಕ್ತಿಕ ಜೀವನ. ಹಾಗಿರುವಾಗ ನನ್ನ ಜೀವನದ ಬಗ್ಗೆ ಜಗತ್ತಿನೊಂದಿಗೆ ಏಕೆ ಚರ್ಚಿಸಬೇಕು? ಎಂದು ವಿಜಯ್ ಹೇಳಿರುವುದಾಗಿ ವರದಿಯಾಗಿದೆ.
ರಶ್ಮಿಕಾಳನ್ನು ಮದುವೆಯಾಗಬೇಕು ಎಂಬ ನಿರ್ಧಾರ ಹೇಗೆ ಬಂದಿತು ಎಂಬುದನ್ನೂ ವಿಜಯ್ ದೇವರಕೊಂಡ ಸಂದರ್ಶನದಲ್ಲಿ ವಿವರಿಸಿದ್ದಾರೆ. ಜೀವನದ ಸಣ್ಣ ಸಣ್ಣ ಸಂದರ್ಭಗಳಲ್ಲೂ ರಶ್ಮಿಕಾಳ ಅನುಪಸ್ಥಿತಿ ತಮ್ಮ ಗಮನಕ್ಕೆ ಬರಲು ಆರಂಭವಾಗಿತ್ತು ಎಂದು ಹೇಳಿದ್ದಾರೆ.
ಇಬ್ಬರೂ ಒಂದೇ ಫಿಟ್ನೆಸ್ ತರಬೇತುದಾರರ ಬಳಿ ವ್ಯಾಯಾಮ ಮಾಡುತ್ತಿದ್ದರು. ಒಟ್ಟಿಗೆ ಊಟ ಮಾಡುವುದು ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಕೆಲವೊಮ್ಮೆ ಒಬ್ಬರೇ ಊಟಕ್ಕೆ ಕುಳಿತಾಗ, ರಶ್ಮಿಕಾ ತಮ್ಮೊಂದಿಗೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವನೆ ಮೂಡುತ್ತಿತ್ತು ಎಂದು ವಿಜಯ್ ಹೇಳಿದ್ದಾರೆ.
ರಶ್ಮಿಕಾ ತಮ್ಮ ಜೀವನದಲ್ಲಿ ಎಷ್ಟು ಮಹತ್ವದ ವ್ಯಕ್ತಿಯಾಗಿದ್ದಾರೆ ಎಂಬುದು ಕಳೆದ ವರ್ಷದಲ್ಲಿ ಮತ್ತಷ್ಟು ಸ್ಪಷ್ಟವಾಯಿತು ಎಂದು ವಿಜಯ್ ಹೇಳಿದ್ದಾರೆ. ತಮ್ಮ ಜೀವನದಲ್ಲಿ ರಶ್ಮಿಕಾ ವಿಶೇಷ ಸ್ಥಾನ ಪಡೆದಿದ್ದಾರೆ ಎಂಬ ಅರಿವು ಮೂಡಿದ ಕ್ಷಣದಲ್ಲೇ ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ನಿಜ ಜೀವನದಲ್ಲೂ ಒಟ್ಟಿಗೆ ಇರುವುದರಿಂದ ಅಭಿಮಾನಿಗಳ ಸಂತಸ ಮತ್ತಷ್ಟು ಹೆಚ್ಚಾಗಿದೆ. ಆನ್‌ಸ್ಕ್ರೀನ್‌ನಲ್ಲಿ ಇವರಿಬ್ಬರ ಜೋಡಿಯನ್ನು ಇಷ್ಟಪಟ್ಟಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಅವಕಾಶ ಸಿಗುತ್ತಿದೆ.
ಮದುವೆಯ ಬಳಿಕ ವಿಜಯ್ ಮತ್ತು ರಶ್ಮಿಕಾ ‘ರಣಬಾಲಿ’ ಸಿನಿಮಾದಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ಈ ಚಿತ್ರವನ್ನು ದಸರಾ ಸಂದರ್ಭದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಹೀಗಾಗಿ ನಿಜ ಜೀವನದ ಜೋಡಿ ತೆರೆ ಮೇಲೆ ಯಾವ ರೀತಿಯಲ್ಲಿ ಮೋಡಿ ಮಾಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.













