Rohit-Kohli: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರಿಸಿದ್ದಾಯ್ತು! ರೋಹಿತ್-ಕೊಹ್ಲಿ ಮತ್ತೆ ಕಣಕ್ಕಿಳಿಯೋದು ಯಾರ ವಿರುದ್ಧ? ಯಾವಾಗ? ಇಲ್ಲಿದೆ ಮಾಹಿತಿ | ಕ್ರೀಡಾ ಸುದ್ದಿ | ACTPnews

ವಿರಾಟ್ ಕೊಹ್ಲಿ -ರೋಹಿತ್ ಶರ್ಮಾ (ANI)


Last Updated:


ಬಿಸಿಸಿಐನ ಹಿರಿಯ ಪುರುಷರ ಆಯ್ಕೆ ಸಮಿತಿಯು ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಭಾರತ ತಂಡವನ್ನು ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಪ್ರಸ್ತುತ ವಿಶ್ವದ ನಂ.1 ಒನ್‌ಡೇ ತಂಡವಾಗಿರುವ ಭಾರತದ ಪರ ಇತ್ತೀಚಿನ ಪಂದ್ಯಗಳಲ್ಲಿ ರೋಹಿತ್ ಮತ್ತು ಕೊಹ್ಲಿ ನೀಡಿರುವ ಭರ್ಜರಿ ಪ್ರದರ್ಶನವನ್ನು ಗಮನಿಸಿದರೆ, ಏಕದಿನ ಸರಣಿಗೆ ಇವರಿಬ್ಬರ ಆಯ್ಕೆ ಖಚಿತವಾಗಿದೆ.

 ವಿರಾಟ್ ಕೊಹ್ಲಿ -ರೋಹಿತ್ ಶರ್ಮಾ (ANI)
ವಿರಾಟ್ ಕೊಹ್ಲಿ -ರೋಹಿತ್ ಶರ್ಮಾ (ANI)

ನ್ಯೂ ಚಂಡೀಗಢದಲ್ಲಿ ಶನಿವಾರ (ಅಕ್ಟೋಬರ್ 3) ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ಐದು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಇದರೊಂದಿಗೆ ಮುಕ್ತಾಯಗೊಂಡ ಮೂರು ಪಂದ್ಯಗಳ ಈ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Rohit Sharma and Virat Kohli) ಕಣಕ್ಕಿಳಿದಿದ್ದರು. ಈ ತವರಿನ ಸರಣಿಯಲ್ಲಿ ಆತಿಥೇಯ ಭಾರತ ತಂಡದ ಪರವಾಗಿ ರೋಹಿತ್ ಶರ್ಮಾ ಮೂರು ಪಂದ್ಯಗಳಿಂದ ಕ್ರಮವಾಗಿ 32, 101 ಮತ್ತು 92 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದರು. ಇನ್ನೊಂದೆಡೆ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಅಜೇಯ 139 ರನ್ ಚಚ್ಚಿದರೆ, ಉಳಿದೆರಡು ಪಂದ್ಯಗಳಲ್ಲಿ ಕ್ರಮವಾಗಿ 29 ಮತ್ತು ಗೋಲ್ಡನ್ ಡಕ್ ಆಗಿ ನಿರಾಶೆ ಅನುಭವಿಸಿದ್ದರು. ಇದೀಗ ಈ ಸರಣಿ ಮುಗಿದಿರುವುದರಿಂದ, ಈ ಇಬ್ಬರು ದಿಗ್ಗಜರು ಕಣಕ್ಕಿಳಿಯುವುದು ಯಾವಾಗ? ಯಾರ ವಿರುದ್ಧ ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.

ಒಂದು ತಿಂಗಳು ಮೈದಾನದಿಂದ ದೂರ

ತವರಿನ ಅಭಿಮಾನಿಗಳ ಮುಂದೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಈ ಜೋಡಿಯು ಮುಂದಿನ ಒಂದು ತಿಂಗಳ ಕಾಲ ಒನ್‌ಡೇ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ಮುಂದಿನ 30 ದಿನಗಳವರೆಗೆ ಭಾರತ ತಂಡಕ್ಕೆ ಯಾವುದೇ ಏಕದಿನ ಪಂದ್ಯಗಳು ನಿಗದಿಯಾಗಿಲ್ಲ. ಏಕದಿನ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳ ಪಟ್ಟಿಯಲ್ಲಿರುವ ಭಾರತದ ಈ ಇಬ್ಬರು ಮಾಜಿ ನಾಯಕರು, ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಮತ್ತೆ ಒನ್‌ಡೇ ಕ್ರಿಕೆಟ್‌ಗೆ ಮರಳಲಿದ್ದಾರೆ.

ಕಿವೀಸ್ ಪ್ರವಾಸಕ್ಕೆ ತೆರಳಲಿರುವ ಭಾರತ

ಭಾರತ ತಂಡವು ಇದೇ ತಿಂಗಳ ಕೊನೆಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಐದು ಟಿ20, ಐದು ಒನ್‌ಡೇ ಮತ್ತು ಎರಡು ಟೆಸ್ಟ್ ಪಂದ್ಯಗಳ ಸುದೀರ್ಘ ಸರಣಿಯನ್ನು ಆಡಲಿದೆ. ಈ ವಿದೇಶಿ ಪ್ರವಾಸವು ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಐದು ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಟಿ20 ಸರಣಿಯ ಮುಕ್ತಾಯದ ನಂತರ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐದು ಪಂದ್ಯಗಳ 50 ಓವರ್‌ಗಳ ಏಕದಿನ ಸರಣಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.

ಏಕದಿನ ಸರಣಿ ವೇಳಾಪಟ್ಟಿ ಹೀಗಿದೆ

ಈ ಬಹುನಿರೀಕ್ಷಿತ ಒನ್‌ಡೇ ಸರಣಿಯ ಮೊದಲ ಪಂದ್ಯವು ನವೆಂಬರ್ 4 ರಂದು ಬುಧವಾರ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ಭಾರತೀಯ ಕಾಲಮಾನ ಬೆಳಿಗ್ಗೆ 07:30 ಕ್ಕೆ ಆರಂಭವಾಗಲಿದೆ. ತದನಂತರ ನವೆಂಬರ್ 7 ರಂದು ಶನಿವಾರ ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ಎರಡನೇ ಒನ್‌ಡೇ, ನವೆಂಬರ್ 10 ರಂದು ಮಂಗಳವಾರ ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಮೂರನೇ ಒನ್‌ಡೇ ಪಂದ್ಯಗಳು ನಡೆಯಲಿವೆ. ಸರಣಿಯ ಕೊನೆಯ ಎರಡು ಪಂದ್ಯಗಳು ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ಕ್ರಮವಾಗಿ ನವೆಂಬರ್ 13 ರಂದು ಶುಕ್ರವಾರ (ನಾಲ್ಕನೇ ಒನ್‌ಡೇ) ಮತ್ತು ನವೆಂಬರ್ 15 ರಂದು ಭಾನುವಾರ (ಐದನೇ ಒನ್‌ಡೇ) ಬೆಳಿಗ್ಗೆ 07:30 ಕ್ಕೆ ಜರುಗಲಿವೆ.

ಶತಕಕ್ಕಾಗಿ ಕಾಯುತ್ತಿರುವ ರೋಹಿತ್

ಬಿಸಿಸಿಐನ ಹಿರಿಯ ಪುರುಷರ ಆಯ್ಕೆ ಸಮಿತಿಯು ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಭಾರತ ತಂಡವನ್ನು ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಪ್ರಸ್ತುತ ವಿಶ್ವದ ನಂ.1 ಒನ್‌ಡೇ ತಂಡವಾಗಿರುವ ಭಾರತದ ಪರ ಇತ್ತೀಚಿನ ಪಂದ್ಯಗಳಲ್ಲಿ ರೋಹಿತ್ ಮತ್ತು ಕೊಹ್ಲಿ ನೀಡಿರುವ ಭರ್ಜರಿ ಪ್ರದರ್ಶನವನ್ನು ಗಮನಿಸಿದರೆ, ಏಕದಿನ ಸರಣಿಗೆ ಇವರಿಬ್ಬರ ಆಯ್ಕೆ ಖಚಿತವಾಗಿದೆ. ಪ್ರಸ್ತುತ ಐಸಿಸಿ ಒನ್‌ಡೇ ಬ್ಯಾಟಿಂಗ್ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ, ನ್ಯೂಜಿಲೆಂಡ್ ನೆಲದಲ್ಲಿ ಇದುವರೆಗೆ 14 ಒನ್‌ಡೇ ಪಂದ್ಯಗಳನ್ನು ಆಡಿದ್ದು 13 ಇನ್ನಿಂಗ್ಸ್‌ಗಳಲ್ಲಿ 437 ರನ್ ಗಳಿಸಿದ್ದಾರೆ. ಅವರು ನ್ಯೂಜಿಲೆಂಡ್‌ನಲ್ಲಿ ಇನ್ನು ಯಾವುದೇ ಒನ್‌ಡೇ ಶತಕ ಬಾರಿಸದಿದ್ದರೂ, 4 ಅರ್ಧಶತಕಗಳನ್ನು ಸಿಡಿಸಿದ್ದಾರೆ ಮತ್ತು ಅಲ್ಲಿ ಅವರ ಗರಿಷ್ಠ ಸ್ಕೋರ್ 87 ರನ್ ಆಗಿದೆ. ರೋಹಿತ್ ಅವರ ಒನ್‌ಡೇ ಬ್ಯಾಟಿಂಗ್ ಸರಾಸರಿ 36.41, ಸ್ಟ್ರೈಕ್ ರೇಟ್ 72.95 ರಷ್ಟಿದೆ. ಈ ವೇಳೆ ಅವರು 28 ಬೌಂಡರಿ ಹಾಗೂ 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಅದ್ಭುತ ದಾಖಲೆ ಹೊಂದಿರುವ ಕೊಹ್ಲಿ

ಮತ್ತೊಂದೆಡೆ ವಿರಾಟ್ ಕೊಹ್ಲಿ ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗಿಂತ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ ಅಲ್ಲಿ 13 ಒನ್‌ಡೇ ಪಂದ್ಯಗಳನ್ನು ಆಡಿದ್ದು, 13 ಇನ್ನಿಂಗ್ಸ್‌ಗಳಿಂದ 49.66 ರ ಸರಾಸರಿಯಲ್ಲಿ ಒಟ್ಟು 596 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ನೆಲದಲ್ಲಿ 1 ಶತಕ ಮತ್ತು 4 ಅರ್ಧಶತಕಗಳನ್ನು ಸಿಡಿಸಿರುವ ಕೊಹ್ಲಿ ಅವರ ಗರಿಷ್ಠ ಸ್ಕೋರ್ 123 ರನ್ ಆಗಿದೆ. ಅಲ್ಲಿ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 91.41 ಆಗಿದ್ದು, ಒಟ್ಟು 55 ಬೌಂಡರಿ ಹಾಗೂ 10 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಈ ಪ್ರಮುಖ ವಿದೇಶಿ ಸರಣಿಯಲ್ಲಿ ಭಾರತದ ಉಳಿದ ಬಹುತೇಕ ಆಟಗಾರರಿಗೆ ನ್ಯೂಜಿಲೆಂಡ್ ಪಿಚ್‌ಗಳಲ್ಲಿ ಆಡಿದ ಹೆಚ್ಚಿನ ಅನುಭವ ಇಲ್ಲದಿರುವುದರಿಂದ, ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಭಾರತ ತಂಡದ ಯಶಸ್ಸಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed