Last Updated:
ಯೋಜನೆ ಆರಂಭಗೊಂಡು ಕೆಲವೇ ದಿನಗಳಲ್ಲಿ, ಈರೋಡ್‌ನ ಖಾಸಗಿ ಬಸ್ ಮಾಲೀಕ ಕಲಾಮಣಿ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಚೆನ್ನೈ: ಅಕ್ಟೋಬರ್ 2 ರಂದು ತಮಿಳುನಾಡು ಸಿಎಂ ವಿಜಯ್ ಮಹಿಳೆಯರಿಗಾಗಿ ವಿಸ್ತರಿಸಲಾದ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೆ ತಂದಿದ್ದರು. ಇದನ್ನು ವೆಟ್ರಿ ಪಯಣಂ ಯೋಜನೆ (Vetri payanam) ಎಂದು ಮರುನಾಮಕರಣ ಮಾಡಿದ್ದರು. ಈ ಯೋಜನೆಯಡಿ ತಮಿಳುನಾಡಿನ ಮಹಿಳೆಯರು ಕೇವಲ ಸ್ಥಳೀಯ ಬಸ್‌ಗಳಲ್ಲದೆ, ವಿವಿಧ ಜಿಲ್ಲೆಗಳ ನಡುವೆ ಸಂಚರಿಸುವ ಸರ್ಕಾರಿ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆದ್ರೆ, ಈ ಯೋಜನೆ ಪ್ರಶ್ನಿಸಿ ಚೆನ್ನೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ಅಕ್ಟೋಬರ್ 5 ಅಂದ್ರೆ ಸೋಮವಾರ ನಡೆಯಲಿದೆ.
ವೆಟ್ರಿ ಪಯಣಂ ಯೋಜನೆಯನ್ನು ಸಿಎಂ ವಿಜಯ್ ಅವರು ಅಧಿಕೃತವಾಗಿ ಆರಂಭಿಸಿದ್ದರು. ಈ ಯೋಜನೆಯ ಮೂಲಕ ತಮಿಳುನಾಡಿನಾದ್ಯಂತ ಸಂಚರಿಸುವ 12,600ಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಯೋಜನೆ ಆರಂಭಗೊಂಡು ಕೆಲವೇ ದಿನಗಳಲ್ಲಿ, ಈರೋಡ್‌ನ ಖಾಸಗಿ ಬಸ್ ಮಾಲೀಕ ಕಲಾಮಣಿ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಉಚಿತ ಬಸ್ ಪ್ರಯಾಣ ಯೋಜನೆಯಿಂದ ಖಾಸಗಿ ಬಸ್‌ಗಳ ಆದಾಯ ಕಡಿಮೆಯಾಗಿದ್ದು, ಇದರಿಂದ ಮಾಲೀಕರು ತಮ್ಮ ಉದ್ಯಮವನ್ನೇ ಕೈಬಿಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅರ್ಜಿಯಲ್ಲಿ ಸಲ್ಲಿಕೆ ಮಾಡಿದ್ದಾರೆ.
ಇದಲ್ಲದೆ, ಮಹಿಳಾ ಪ್ರಯಾಣಿಕರಿಂದ ಮಾತ್ರ ಶುಲ್ಕ ವಸೂಲಿ ಮಾಡದೆ ಇರುವುದು ಸಂವಿಧಾನ ಖಾತರಿಪಡಿಸಿರುವ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದೂ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ, ಯೋಜನೆಯ ಫಲಾನುಭವಿಗಳ ಪ್ರಯಾಣ ವೆಚ್ಚವಾಗಿ ವರ್ಷಕ್ಕೆ ಸುಮಾರು ₹6,000 ಕೋಟಿ ಮೊತ್ತವನ್ನು ಸರ್ಕಾರವೇ ಭರಿಸುತ್ತಿದೆ. ಇದೇ ರೀತಿಯಲ್ಲಿ ಪರಿಹಾರಧನ ನೀಡುವ ಮೂಲಕ ಖಾಸಗಿ ಬಸ್‌ಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಖಾಸಗಿ ಬಸ್ ಮಾಲೀಕರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ, ಸರ್ಕಾರ ಆ ಬೇಡಿಕೆಯನ್ನು ಅಂಗೀಕರಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಹಿಂದಿನ ಡಿಎಂಕೆ ಆಡಳಿತದ ಅವಧಿಯಲ್ಲಿ ಮಹಿಳೆಯರು ಸಾಮಾನ್ಯ ನಗರ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ‘ಮಹಿಳಾ ಉದಯ ಪ್ರಯಾಣ ಯೋಜನೆ’ಯನ್ನು ಪರಿಚಯಿಸಲಾಗಿತ್ತು. ಈ ಯೋಜನೆಯ ವಿಸ್ತರಣೆಯಾಗಿ, ಮುಖ್ಯಮಂತ್ರಿ ವಿಜಯ್ ಅವರು ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್ ಮತ್ತು ಡಿಲಕ್ಸ್ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡಲು ವೆಟ್ರಿ ಯಾತ್ರಾ ಯೋಜನೆಯನ್ನು ವಿಧಾನಸಭೆಯಲ್ಲಿ ಘೋಷಿಸಿದ್ದರು.














