[ad_1]
Last Updated:
ಆರ್ಥಿಕ ಹಿಂಜರಿತ ಮತ್ತು ತೀವ್ರ ಬೆಳವಣಿಗೆಯ ಸಮಯದಲ್ಲಿ ದೇಶದ ಆರ್ಥಿಕತೆಯನ್ನು ಸ್ಥಿರವಾಗಿಡಲು ಸಹಾಯ ಮಾಡುವ ‘ಸ್ಥೂಲ ಆರ್ಥಿಕ ಸ್ಥಿರೀಕರಣದ ಲಘು ಆರ್ಥಿಕ ತಳಹದಿ’ (microeconomic foundations of macroeconomic stabilisation) ಕುರಿತಾದ ಸಂಶೋಧನೆಗಾಗಿ ಈ ಇಬ್ಬರು ಅಮೆರಿಕಾದ ಆರ್ಥಿಕ ತಜ್ಞರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿದೆ.
ಅಮೆರಿಕಾದ ಅರ್ಥಶಾಸ್ತ್ರಜ್ಞರಾದ ರಾಬರ್ಟ್ ಇ. ಹಾಲ್ ಮತ್ತು ಮೈಕೆಲ್ ವುಡ್ಫೋರ್ಡ್ ಅವರಿಗೆ 2026ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ. ಆರ್ಥಿಕ ಹಿಂಜರಿತ ಮತ್ತು ತೀವ್ರ ಬೆಳವಣಿಗೆಯ ಸಮಯದಲ್ಲಿ ದೇಶದ ಆರ್ಥಿಕತೆಯನ್ನು ಸ್ಥಿರವಾಗಿಡಲು ಸಹಾಯ ಮಾಡುವ ‘ಸ್ಥೂಲ ಆರ್ಥಿಕ ಸ್ಥಿರೀಕರಣದ ಲಘು ಆರ್ಥಿಕ ತಳಹದಿ’ (microeconomic foundations of macroeconomic stabilisation) ಕುರಿತಾದ ಸಂಶೋಧನೆಗಾಗಿ ಇವರಿಬ್ಬರಿಗೆ ಈ ಅತ್ಯುನ್ನತ ಗೌರವ ನೀಡಲಾಗಿದೆ.
ಇವರು ಅಭಿವೃದ್ಧಿಪಡಿಸಿದ ಮಾಡೆಲ್ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕುಗಳು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಹಣಕಾಸಿನ ಕ್ರಮಗಳು, ಆರ್ಥಿಕತೆಯಲ್ಲಿ ಉಂಟಾಗುವ ಏರಿಳಿತಗಳನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಇವರ ಸಂಶೋಧನೆ ತೋರಿಸುತ್ತದೆ. ಇದು ಆರ್ಥಿಕ ಹಿಂಜರಿತದ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ಮಾರುಕಟ್ಟೆ ಅತಿಯಾಗಿ ಕಾವೇರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಸುಲಭವಾಗಿ ಹೇಳುವುದೆಂದರೆ ಯಾವಾಗ ಬಡ್ಡಿದರಗಳನ್ನು ಬದಲಾಯಿಸಬೇಕು ಮತ್ತು ಯಾವಾಗ ಬಜೆಟ್ ನಿಯಂತ್ರಿಸಬೇಕು ಎಂಬ ಸರಿಯಾದ ನಿರ್ಧಾರಗಳು, ದೇಶದ ಆರ್ಥಿಕತೆಯು ದಿಢೀರ್ ಕುಸಿಯದಂತೆ ಅಥವಾ ಅತಿಯಾದ ಹಣದುಬ್ಬರಕ್ಕೆ ಸಿಲುಕದಂತೆ ಕಾಪಾಡುತ್ತವೆ ಎಂದು ಇವರ ಸಂಶೋಧನೆ ನಿರೂಪಿಸುತ್ತದೆ.
ಸುಮಾರು ಒಂದು ಶತಮಾನದ ಹಿಂದೆ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರ ಸಿದ್ಧಾಂತಗಳ ಆಧಾರದ ಮೇಲೆ ಆರ್ಥಿಕ ಸ್ಥಿರೀಕರಣವನ್ನು ಮಾಡಲಾಗುತ್ತಿತ್ತು. ಆದರೆ, 1970ರ ದಶಕದ ತೈಲ ಬಿಕ್ಕಟ್ಟುಗಳು ಈ ಹಳೆಯ ಕೀನ್ಸಿಯನ್ ಮಾದರಿಗಳಲ್ಲಿದ್ದ ಲೋಪದೋಷಗಳನ್ನು ಎತ್ತಿ ತೋರಿಸಿದವು. ಆ ಸಮಯದಲ್ಲಿ ಆರ್ಥಿಕತೆಯನ್ನು ಸ್ಥಿರಗೊಳಿಸುವ ಪ್ರಯತ್ನಗಳು ನಿರುದ್ಯೋಗವನ್ನು ಕಡಿಮೆ ಮಾಡುವಲ್ಲಿ ವಿಫಲವಾದವು ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಹಣದುಬ್ಬರ ತೀವ್ರಗೊಳ್ಳಲು ಕಾರಣವಾದವು.
ಇದಕ್ಕೆ ಪರಿಹಾರವಾಗಿ, ಹಾಲ್ ಮತ್ತು ವುಡ್ಫೋರ್ಡ್ ಕೇವಲ ಹಣದುಬ್ಬರ ಮತ್ತು ಉತ್ಪಾದನೆಯಂತಹ ದೊಡ್ಡ ಅಂಕಿ-ಅಂಶಗಳ ಮೇಲೆ ಅವಲಂಬಿತವಾಗದೆ, ಲಘು ಆರ್ಥಿಕ ತಳಹದಿಯ (Microeconomic foundations) ಆಧಾರದ ಮೇಲೆ ಹೊಸ ಮಾದರಿಗಳನ್ನು ಸೃಷ್ಟಿಸಿದರು.
ವೈಯಕ್ತಿಕ ನಿರ್ಧಾರಗಳ ಪ್ರಭಾವ: ಈ ಇಬ್ಬರು ಅರ್ಥಶಾಸ್ತ್ರಜ್ಞರ ವಿಧಾನವು ವೈಯಕ್ತಿಕ ಕುಟುಂಬಗಳು ಮತ್ತು ವ್ಯಾಪಾರ ಸಂಸ್ಥೆಗಳು ತೆಗೆದುಕೊಳ್ಳುವ ನಿರ್ಧಾರಗಳು ಹೇಗೆ ಒಟ್ಟಾರೆಯಾಗಿ ದೇಶದ ಆರ್ಥಿಕತೆಯನ್ನು ರೂಪಿಸುತ್ತವೆ ಎಂಬುದನ್ನು ಪರಿಶೀಲಿಸುತ್ತದೆ.
ದೂರದೃಷ್ಟಿಯ ಚಿಂತನೆ: ಈ ಮಾದರಿಗಳ ಮುಖ್ಯ ವೈಶಿಷ್ಟ್ಯವೆಂದರೆ, ಸಾಮಾನ್ಯ ಕುಟುಂಬಗಳು ಮತ್ತು ವ್ಯಾಪಾರಗಳು ತಮ್ಮ ಉಳಿತಾಯ ಮತ್ತು ಬೆಲೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಮುಂಚಿತವಾಗಿಯೇ ಊಹಿಸುತ್ತವೆ.
ಆದ್ದರಿಂದ, ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕುಗಳು ತಮ್ಮ ನೀತಿ ಯೋಜನೆಗಳನ್ನು ಮುಂಚಿತವಾಗಿ ಸ್ಪಷ್ಟವಾಗಿ ಪ್ರಕಟಿಸುವುದರ ಮೂಲಕ ಸಾರ್ವಜನಿಕರ ನಿರೀಕ್ಷೆಗಳನ್ನು ಧನಾತ್ಮಕವಾಗಿ ಬದಲಾಯಿಸಬಹುದು ಮತ್ತು ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸಬಹುದು.
“ಈ ಪ್ರಶಸ್ತಿ ವಿಜೇತರ ಸಂಶೋಧನೆಯು ಇಂದು ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಮತ್ತು ಸರ್ಕಾರಗಳು ಬಳಸುವ ಆರ್ಥಿಕ ಮಾದರಿಗಳಿಗೆ ಸ್ಥಿರವಾದ ಸೈದ್ಧಾಂತಿಕ ತಳಹದಿಯನ್ನು ಒದಗಿಸಿದೆ. ಇದರಿಂದಾಗಿ ಇಂಧನ ಬಿಕ್ಕಟ್ಟು ಅಥವಾ ಗ್ರಾಹಕರ ಬಳಕೆಯಲ್ಲಾಗುವ ಹಠಾತ್ ಬದಲಾವಣೆಗಳಂತಹ ಆರ್ಥಿಕ ಆಘಾತಗಳನ್ನು ಎದುರಿಸಲು ನಾವು ಇಂದು ಉತ್ತಮವಾಗಿ ಸಜ್ಜಾಗಿದ್ದೇವೆ” ಎಂದು ಆರ್ಥಿಕ ವಿಜ್ಞಾನದ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾದ ಜಾನ್ ಹ್ಯಾಸ್ಲರ್ ಹೇಳಿದ್ದಾರೆ.
[ad_2]
Source link














