Last Updated:
ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲು ‘ಏಕ ಗವಾಕ್ಷಿ’ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಕೇವಲ 21 ದಿನಗಳಲ್ಲಿ ಅನುಮೋದನೆ ನೀಡಲಾಗುತ್ತಿದೆ.
ಹೂಡಿಕೆದಾರರು (Investors) ಕೇವಲ ರಾಜ್ಯಗಳ (State) ನಡುವಿನ ಪೈಪೋಟಿಯನ್ನು ನೋಡುವುದಿಲ್ಲ. ಬದಲಾಗಿ ಎಲ್ಲಿ ಉತ್ತಮ ಮೂಲಸೌಕರ್ಯ ಮತ್ತು ಸುಲಭವಾಗಿ ವ್ಯಾಪಾರ ಮಾಡುವ ವಾತಾವರಣ (Ease of doing business) ಇದೆಯೋ ಅಂತಹ ಸ್ಥಳಗಳನ್ನು ಆಯ್ಕೆ ಮಾಡುತ್ತಾರೆ ಎಂದು ತೆಲಂಗಾಣದ (Telangana) ಐಟಿ ಮತ್ತು ಕೈಗಾರಿಕಾ ಸಚಿವ ಡಿ. ಶ್ರೀಧರ್ ಬಾಬು (D. Sridhar Babu) ಹೇಳಿದರು.
‘ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, “ಪ್ರತಿ ರಾಜ್ಯವೂ ತನ್ನದೇ ಆದ ಸಂಪನ್ಮೂಲಗಳನ್ನು ಹೊಂದಿದ್ದು, ಹೂಡಿಕೆದಾರರಿಗೆ ವಿಶಿಷ್ಟ ಪ್ರಯೋಜನಗಳನ್ನು ಒದಗಿಸುತ್ತವೆ. ಈ ನಿಟ್ಟಿನಲ್ಲಿ ನಾವು ಕರ್ನಾಟಕವನ್ನು ಒಂದು ಆರೋಗ್ಯಕರ ಪ್ರತಿಸ್ಪರ್ಧಿಯಾಗಿ (Healthy competitor) ನೋಡುತ್ತೇವೆ. ಯಾವುದೇ ಹೂಡಿಕೆದಾರರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಯಾ ರಾಜ್ಯಗಳಲ್ಲಿ ಲಭ್ಯವಿರುವ ಭೂಮಿ, ನುರಿತ ಮಾನವ ಸಂಪನ್ಮೂಲ ಹಾಗೂ ಮೂಲಸೌಕರ್ಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ” ಎಂದು ತಿಳಿಸಿದರು.
ಜಾಗತಿಕ ಮಟ್ಟದ ಕೈಗಾರಿಕೆಗಳಿಗೆ ಅಗತ್ಯವಿರುವ ನುರಿತ ಕಾರ್ಯಪಡೆಯನ್ನು ಸೃಷ್ಟಿಸಲು ತೆಲಂಗಾಣ ಸರ್ಕಾರವು ಕಳೆದ ಎರಡು-ಮೂರು ವರ್ಷಗಳಿಂದ ವಿಶೇಷ ಗಮನ ಹರಿಸಿದೆ. ಹೈದರಾಬಾದ್ ನಗರವು ಸಂಪರ್ಕ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆ ಮಾಡಿದೆ. ನಗರದ ‘ಹೊರ ವರ್ತುಲ ರಸ್ತೆ’ಯಿಂದಾಗಿ (ORR) ಹೈದರಾಬಾದ್‌ನಾದ್ಯಂತ ಕೇವಲ 40 ರಿಂದ 50 ನಿಮಿಷಗಳಲ್ಲಿ ಸಂಚರಿಸಬಹುದು. ಅಲ್ಲದೆ, ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೂ ಆಪ್ಟಿಕಲ್ ಫೈಬರ್ ಸಂಪರ್ಕವನ್ನು ಯಶಸ್ವಿಯಾಗಿ ವಿಸ್ತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜಾಗತಿಕ ಕಂಪನಿಗಳಿಗೆ ತೆಲಂಗಾಣ ಆದ್ಯತೆಯ ತಾಣವಾಗಿದೆ. ಭಾರತದಲ್ಲಿರುವ ಒಟ್ಟು ಗ್ರೀನ್‌ಫೀಲ್ಡ್ ಗ್ಲೋಬಲ್ ಕ್ಯಾಪಾಬಿಲಿಟಿ ಸೆಂಟರ್‌ಗಳ (GCC) ಪೈಕಿ ಶೇ. 40ರಷ್ಟು ಕೇವಲ ಹೈದರಾಬಾದ್‌ನಲ್ಲೇ ಇವೆ. ಸಾಫ್ಟ್‌ವೇರ್, ಏರೋಸ್ಪೇಸ್, ರಕ್ಷಣೆ, ಔಷಧ, ಆತಿಥ್ಯ ಮತ್ತು ಬ್ಯೂಟಿ ಟೆಕ್ ಸೇರಿದಂತೆ 10ಕ್ಕೂ ಹೆಚ್ಚು ಉದ್ಯಮ ವಲಯಗಳ ಕೇಂದ್ರಗಳು ಇಲ್ಲಿವೆ. ಅದರಲ್ಲೂ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ವಲಯವು ನಗರದಲ್ಲಿ ತ್ವರಿತಗತಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲು ‘ಏಕ ಗವಾಕ್ಷಿ’ (Single Window) ಕ್ಲಿಯರೆನ್ಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಕೇವಲ 21 ದಿನಗಳಲ್ಲಿ ಅನುಮೋದನೆ ನೀಡಲಾಗುತ್ತಿದೆ. ಒಂದು ವೇಳೆ ನಿಗದಿತ ಸಮಯದ ಚೌಕಟ್ಟಿನೊಳಗೆ ಅನುಮತಿ ಸಿಗದಿದ್ದರೆ, ಆ ಅರ್ಜಿಗಳನ್ನು ‘ಅನುಮೋದಿಸಲಾಗಿದೆ’ ಎಂದೇ ಪರಿಗಣಿಸಲಾಗುತ್ತದೆ ಎಂಬ ಮಹತ್ವದ ಅಂಶವನ್ನು ಅವರು ಹೇಳಿದರು.
ಇದೆಲ್ಲದರ ನಡುವೆ, ವಿಶೇಷವಾಗಿ ಸೆಮಿಕಂಡಕ್ಟರ್ ಹೂಡಿಕೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರವು ತೆಲಂಗಾಣದ ಬಗ್ಗೆ ‘ಮಲತಾಯಿ ಧೋರಣೆ’ ಅನುಸರಿಸುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಹೈದರಾಬಾದ್ ನಗರವು ಈಗಾಗಲೇ ಹಲವು ಪ್ರಮುಖ ಚಿಪ್ ವಿನ್ಯಾಸ ಕಂಪನಿಗಳಿಗೆ ನೆಲೆಯಾಗಿದೆ. ಹೀಗಾಗಿ ಸೆಮಿಕಂಡಕ್ಟರ್ ಉತ್ಪಾದನಾ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತೆಲಂಗಾಣದಂತಹ ರಾಜ್ಯಗಳಿಗೂ ಸಮಾನ ನೀತಿ ಬೆಂಬಲವನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರದಿಂದ ಪ್ರೋತ್ಸಾಹ ಸಿಕ್ಕರೆ, ರಾಜ್ಯಗಳು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಉದಯೋನ್ಮುಖ ಕ್ಷೇತ್ರಗಳಲ್ಲಿ ಮತ್ತಷ್ಟು ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಶ್ರೀಧರ್ ಬಾಬು ಅಭಿಪ್ರಾಯಪಟ್ಟರು.














