Last Updated:
Narendra Modi: ಸ್ವಿಟ್ಜರ್ಲ್ಯಾಂಡ್ ಜಗತ್ತಿನಾದ್ಯಂತ ತನ್ನ ಚೀಸ್ ಪರಂಪರೆಗೆ ಹೆಸರುವಾಸಿಯಾಗಿದೆ. ಅಂತಹ ದೇಶದ ಅಧ್ಯಕ್ಷರಿಗೆ ಭಾರತದ ಉತ್ತಮ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ನೀಡುವುದು, ಭಾರತದ ಕೃಷಿ ಮತ್ತು ಆಹಾರ ಸಂಸ್ಕರಣಾ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.
ನವದೆಹಲಿ: ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಅವರು ಸ್ವಿಸ್ ಅಧ್ಯಕ್ಷ (Swiss President) ಗೈ ಪಾರ್ಮೆಲಿನ್ (Guy Parmelin) ಅವರೊಂದಿಗೆ ನಡೆದ ಪ್ರಮುಖ ಭೇಟಿಯ ಸಂದರ್ಭದಲ್ಲಿ ಮೂರು ಪ್ರೀಮಿಯಂ ಭಾರತೀಯ ಚೀಸ್ಗಳನ್ನು (cheese) ಉಡುಗೊರೆಯಾಗಿ ನೀಡಿದ್ದಾರೆ. ಸ್ವಿಟ್ಜರ್ಲ್ಯಾಂಡ್ (Switzerland) ಜಗತ್ತಿನಾದ್ಯಂತ ತನ್ನ ಚೀಸ್ ಪರಂಪರೆಗೆ ಹೆಸರುವಾಸಿಯಾಗಿದೆ. ಅಂತಹ ದೇಶದ ಅಧ್ಯಕ್ಷರಿಗೆ ಭಾರತದ ಉತ್ತಮ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ನೀಡುವುದು, ಭಾರತದ ಕೃಷಿ ಮತ್ತು ಆಹಾರ ಸಂಸ್ಕರಣಾ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.
ಉಡುಗೊರೆಯಾಗಿ ನೀಡಿದ ಮೂರು ಚೀಸ್ಗಳು ಗುಲ್ಮರ್ಗ್, ಕೋಣಾರ್ಕ್ ಮತ್ತು ಯೆಯೂರ್. ಇವುಗಳನ್ನು ಸ್ವಿಟ್ಜರ್ಲ್ಯಾಂಡ್ನ ವಿಶ್ವಪ್ರಸಿದ್ಧ ಚೀಸ್ ಸಂಪ್ರದಾಯಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ಭಾರತದ ಸ್ವಂತ ಉನ್ನತ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ತೋರಿಸುವ ಉದ್ದೇಶದಿಂದ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಗುಲ್ಮರ್ಗ್ ಫ್ರೆಂಚ್ ಶೈಲಿಯ ಬ್ರೀ ಚೀಸ್. ಇದು ಹೃದಯಾಕಾರದ, ಮೃದುವಾದ ಹಾಗೂ ಕ್ರೀಮಿ ರಚನೆಯನ್ನು ಹೊಂದಿದೆ. ಪಾಶ್ಚರೀಕೃತ ಹಸುವಿನ ಹಾಲಿನಿಂದ ತಯಾರಿಸಲಾಗುವ ಈ ಚೀಸ್ ಹಿಮಬಿಳಿ ಕೆನೆ ಹೊಂದಿದ್ದು, ಮಣ್ಣಿನ ಮತ್ತು ಅಣಬೆಯಂತಹ ಸುವಾಸನೆಯನ್ನು ನೀಡುತ್ತದೆ. 2026ರ ಬ್ರೆಜಿಲ್ನ ಮುಂಡಿಯಲ್ ಡು ಕೆಯ್ಜೊ ಸ್ಪರ್ಧೆಯಲ್ಲಿ ಇದು ಸೂಪರ್ ಗೋಲ್ಡ್ ಪ್ರಶಸ್ತಿ ಪಡೆದಿದೆ.

ಕೋಣಾರ್ಕ್ ಫ್ರೆಂಚ್ ಟೋಮ್ ಶೈಲಿಯಿಂದ ಸ್ಫೂರ್ತಿ ಪಡೆದ ಗ್ರಾಮೀಣ ನೈಸರ್ಗಿಕ ಕೆನೆಯ ಚೀಸ್. ಮಣ್ಣಿನ ಮತ್ತು ರುಚಿಕರವಾದ ಸುವಾಸನೆಯೊಂದಿಗೆ ನಿಂಬೆಯಂಥ ರುಚಿಯನ್ನು ಹೊಂದಿರುವ ಇದು 2023ರಲ್ಲಿ ನಾರ್ವೆಯಲ್ಲಿ ನಡೆದ ವಿಶ್ವ ಚೀಸ್ ಪ್ರಶಸ್ತಿಗಳಲ್ಲಿ ಚಿನ್ನದ ಪದಕವನ್ನು ಪಡೆದಿದೆ. 2025ರಲ್ಲಿ ಸ್ವಿಟ್ಜರ್ಲ್ಯಾಂಡ್ನಲ್ಲೇ ಬೆಳ್ಳಿ ಪದಕವನ್ನೂ ಗಳಿಸಿದೆ.

ಮೂರನೇ ಉಡುಗೊರೆ ಯೆಯೂರ್. ಇದು ಸ್ವಿಸ್ ಗ್ರುಯೇರ್ನಿಂದ ಪ್ರೇರಣೆ ಪಡೆದ ಪರ್ವತ ಶೈಲಿಯ ಚೀಸ್. ಸುಮಾರು ಎಂಟರಿಂದ ಒಂಬತ್ತು ತಿಂಗಳು ಹಳೆಯದಾಗಿಸಿದ ನಂತರ ಇದು ಬಾದಾಮಿ, ಸಿಹಿ ಮತ್ತು ಗಿಡಮೂಲಿಕೆಗಳ ಸುವಾಸನೆಯನ್ನು ಅಭಿವೃದ್ಧಿಪಡಿಸುತ್ತದೆ. ಅದರ ಕೆನೆಯ ಮೇಲೆ ಗುಲಾಬಿ ದಳಗಳು ಮತ್ತು ಸೋಂಪನ್ನು ಅಲಂಕರಿಸಲಾಗಿದ್ದು, ಭಾರತೀಯ ಪದಾರ್ಥಗಳನ್ನು ಆಲ್ಪೈನ್ ಪರಂಪರೆಯೊಂದಿಗೆ ಬೆಸೆಯುತ್ತದೆ. ಫಾಂಡ್ಯೂ ಮತ್ತು ಗ್ರಿಲ್ ಆದ ಖಾದ್ಯಗಳಿಗೆ ಇದು ಸೂಕ್ತವೆಂದು ಹೇಳಲಾಗಿದೆ.

ಈ ಉಡುಗೊರೆಗಳನ್ನು ಇಬ್ಬರು ನಾಯಕರು ವ್ಯಾಪಕ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ನೀಡಲಾಯಿತು. ಮಾತುಕತೆಗಳು ಭಾರತ–ಸ್ವಿಟ್ಜರ್ಲ್ಯಾಂಡ್ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದವು. ವ್ಯಾಪಾರ, ಹೂಡಿಕೆ, ಚಲನಶೀಲತೆ ಮತ್ತು ನಿರ್ಣಾಯಕ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು.
ಸ್ಲಿಸ್ ಅಧ್ಯಕ್ಷ ಪಾರ್ಮೆಲಿನ್ ಅವರು ಸೋಮವಾರ ಭಾರತಕ್ಕೆ ಮೂರು ದಿನಗಳ ಭೇಟಿಯನ್ನು ಆರಂಭಿಸಿದರು. ಈ ವರ್ಷ ಫೆಬ್ರವರಿಯಲ್ಲಿ ಎಐ ಇಂಪ್ಯಾಕ್ಟ್ ಸಮ್ಮೇಳನಕ್ಕೆ ಬಂದ ನಂತರ ಇದು ಅವರ ಎರಡನೇ ಭೇಟಿ. ನವದೆಹಲಿ ತಲುಪಿದ ಬಳಿಕ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ ಪಡೆದು, ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಿದರು.














