Last Updated:
ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಡೆಯಲು ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನ ಕೈಗೊಂಡಿದೆ ಎಂದು ತಮಿಳುನಾಡು ಸರ್ಕಾರ ಘೋಷಿಸಿದೆ. ಇದಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು (ಜೂ.19): ಕರ್ನಾಟಕ ಸರ್ಕಾರದ ಮೇಕೆದಾಟು ಅಣೆಕಟ್ಟು ಯೋಜನೆ ತಡೆಯೋಕೆ ತಮಿಳುನಾಡು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ತಮಿಳುನಾಡು (Tamilnadu) ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮಾತಾಡಿದ್ದು, ಯಾವುದೇ ಕಾರಣಕ್ಕೂ ಮೇಕೆದಾಟು ಡ್ಯಾಂ ನಿರ್ಮಿಸಲು ಬಿಡುವುದಿಲ್ಲ ಎಂದಿದ್ದಾರೆ. ವಿಜಯ ನೇತೃತ್ವದ ಸರ್ಕಾರ ಮೇಕೆದಾಟು ಯೋಜನೆ ಅಡ್ಡಗಾಲು ಹಾಕಲು ಮುಂದಾಗಿದ್ದು, ಇದಕ್ಕೆ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ (DK Shivakumar) ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಡೆಯಲು ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನ ಕೈಗೊಂಡಿದೆ ಎಂದು ತಮಿಳುನಾಡು ಸರ್ಕಾರ ಘೋಷಿಸಿದೆ. ಟಿವಿಕೆ (TVK) ಸರ್ಕಾರದ ಮೊದಲ ವಿಧಾನಸಭೆ ಅಧಿವೇಶನದ ಆರಂಭದಲ್ಲಿ ಭಾಷಣ ಮಾಡಿದ ರಾಜ್ಯಪಾಲರು, ಕಾವೇರಿ ಜಲಾನಯನ ಪ್ರದೇಶವು ತಮಿಳುನಾಡಿನ ಅನ್ನದಾತ ಪ್ರದೇಶವಾಗಿದ್ದು, ಅಲ್ಲಿನ ರೈತರು ಕಾವೇರಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ ಎಂದ್ರು.
ತಮಿಳುನಾಡಿಗೆ ಕಾವೇರಿ ನೀರನ್ನು ಬಳಸುವ ಹಕ್ಕು ಅನಾದಿಕಾಲದಿಂದಲೂ ಇದೆ ಎಂದು ಹೇಳಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ತಮಿಳುನಾಡಿನ ಪರವಾಗಿದ್ದರೂ ಪ್ರತಿ ವರ್ಷವೂ ರಾಜ್ಯವು ತನ್ನ ಪಾಲಿನ ನೀರಿಗಾಗಿ ಹೋರಾಡಬೇಕಾದ ಪರಿಸ್ಥಿತಿ ಇದ್ದು. ಯಾವುದೇ ಕಾರಣಕ್ಕೂ ಮೇಕೆದಾಟು ಡ್ಯಾಂ ನಿರ್ಮಿಸಲು ಬಿಡಲ್ಲ ಎಂದಿದ್ದಾರೆ.
ಮೇಕೆದಾಟು ಅಣ್ಣೆಕಟ್ಟು ಯೋಜನೆಗೆ ತಮಿನಾಡು ಸರ್ಕಾರ ಅಡ್ಡಗಾಲು ಹಾಕ್ತಿರುವ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ನೆರೆಯ ರಾಜ್ಯಕ್ಕೆ 177 ಟಿಎಂಸಿ ಕಾವೇರಿ ನೀರನ್ನು ಬಿಡುಗಡೆ ಮಾಡಲು ರಾಜ್ಯವು ಬದ್ಧವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯದಂತೆ. ಈ ಯೋಜನೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಹಿತ ಅಡಗಿದೆ ಎಂದಿದ್ದಾರೆ.
ಒಂದೇ ಒಂದು ಬಕೆಟ್ ನೀರನ್ನ ಕೂಡ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗೆ ಮಾತ್ರ ಬಳಸಲಾಗುತ್ತೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ನಾವು ಕೃಷ್ಣಾದಿಂದ ನೀರನ್ನು ತರಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನಮ್ಮ ಮುಂದಿರುವ ಏಕೈಕ ಆಯ್ಕೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Jun 19, 2026 11:01 AM IST













