Last Updated:
ಐಪಿಎಲ್ 2026 ರ ಸೀಸನ್ ಗೂ ಮುನ್ನ ಭಾರತದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡರು. ಈ ವಿಷಯಕ್ಕೆ ಸಂಜು ಸ್ಯಾಮ್ಸನ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.
ಸಂಜು ಸ್ಯಾಮ್ಸನ್ (Sanju Samson ) ಐಪಿಎಲ್ (IPL) 2026ಕ್ಕೆ ಮುನ್ನ ರಾಜಸ್ಥಾನ ರಾಯಲ್ಸ್ (RR) ತಂಡವನ್ನು ಬಿಟ್ಟು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಸೇರಿದರು. ಇದಕ್ಕೆ ಸಂಜು ಈಗ ಪ್ರತಿಕ್ರಿಯೆ ನೀಡಿದ್ದಾರೆ. ಅವರು 11 ಸೀಸನ್‌ಗಳ ಕಾಲ ರಾಜಸ್ಥಾನ ತಂಡಕ್ಕಾಗಿ ಆಡಿದ್ದರು. ಅವರಿಗೆ ತಂಡವನ್ನು ಬಿಡುವುದು ಸುಲಭವಾಗಿರಲಿಲ್ಲ. ಆದರೂ ಸ್ಯಾಮ್ಸನ್ ಹೊಸ ಸವಾಲುಗಳನ್ನು ಎದುರಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಜಿಯೋಸ್ಟಾರ್‌ನ ‘ಸೂಪರ್‌ಸ್ಟಾರ್’ ಸಂದರ್ಶನದಲ್ಲಿ ಸಂಜು ಸ್ಯಾಮ್ಸನ್ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಿಡುವುದು ದೊಡ್ಡ ಅಪಾಯ. ಒಮ್ಮೆ ತಂಡಕ್ಕೆ ಹೇಳಿದ ಮೇಲೆ ಹಿಂದಕ್ಕೆ ಹೋಗುವುದು ಸಾಧ್ಯವಿಲ್ಲ. 2025 ರಲ್ಲಿ ರಾಜಸ್ಥಾನ್ ತಂಡದೊಂದಿಗೆ ನನ್ನ ಪ್ರಯಾಣವನ್ನು ಮುಗಿಸಲು ನಿರ್ಧರಿಸಿದೆ. ಈ ಬಗ್ಗೆ ನನ್ನ ಕುಟುಂಬ, ವಿಶೇಷವಾಗಿ ಹೆಂಡತಿಯೊಂದಿಗೆ ಮೂರು ವಾರ ಚರ್ಚಿಸಿದೆ. ಕೊನೆಗೆ ಇದು ಸರಿಯಾದ ನಿರ್ಧಾರ ಎನಿಸಿತು ಎಂದು ಹೇಳಿದ್ದಾರೆ.
ನಾನು ಯಾವಾಗಲೂ ಹೊಸದಾಗಿ ಪ್ರಾರಂಭಿಸಲು ಸಿದ್ಧ. ಚೆಪಾಕ್‌ನ ನಿಧಾನ ಪಿಚ್ ನನ್ನ ಬ್ಯಾಟಿಂಗ್‌ಗೆ ಸರಿಯಿಲ್ಲ ಎಂದು ಅನೇಕರು ಹೇಳಿದರು. ಅದು ನನ್ನ ಮನಸ್ಸಿಗೂ ಬಂದಿತು. ಆದರೆ ನಾನು ನನಗೆ ಹೇಳಿಕೊಂಡೆ, “ನಿನಗೆ ಈಗ 30 ವರ್ಷ. ಹೊಸ ಪರಿಸ್ಥಿತಿಗೆ ತಕ್ಕಂತೆ ಆಟವನ್ನು ಬದಲಾಯಿಸು.” ಅದೇ ಆತ್ಮವಿಶ್ವಾಸದಿಂದ ಈ ಋತುವನ್ನು ಪ್ರಾರಂಭಿಸಿದೆ ಎಂದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಯಶಸ್ಸಿಗಿಂತ ವೈಫಲ್ಯಗಳೇ ಹೆಚ್ಚು. ನಾನು ಸಿಎಸ್‌ಕೆ ತಂಡಕ್ಕಾಗಿ ಮೊದಲ ಮೂರು ಪಂದ್ಯಗಳಲ್ಲಿ ಚೆನ್ನಾಗಿ ಆಡಲು ಸಾಧ್ಯವಾಗಲಿಲ್ಲ. ವಿಶ್ವಕಪ್ ಫೈನಲ್‌ನಲ್ಲಿ ಆಡಿದ ನಂತರವೂ ಐಪಿಎಲ್‌ನಲ್ಲಿ ಅದೇ ರೀತಿ ಆಡಲು ಸಾಧ್ಯವಾಗಲಿಲ್ಲ. ಆದರೆ ತಂಡದ ಅಧಿಕಾರಿಗಳು ಮತ್ತು ಆಟಗಾರರು ನನ್ನ ಬಗ್ಗೆ ಒಂದು ಶೇಕಡಾ ಕೂಡ ಬದಲಾಗಲಿಲ್ಲ. ಇದು ನನಗೆ ತುಂಬಾ ಧೈರ್ಯ ಕೊಟ್ಟಿತು.
ಅಭ್ಯಾಸದ ವೇಳೆ ಮಹಿ ಭಯ್ಯಾ ನನ್ನ ಹತ್ತಿರ ಬಂದು, ‘ಎಲ್ಲಾ ಸರಿಯಾಗುತ್ತದೆ. ನೀನು ಈಗ ಇರುವಂತೆಯೇ ಆಡು’ ಎಂದು ಹೇಳಿದರು. ಆ ಸಣ್ಣ ಮಾತು ನನಗೆ ದೊಡ್ಡ ಪಾಠವಾಯಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶತಕ ಹೊಡೆದು ನನ್ನ ಫಾರ್ಮ್ ಮತ್ತೆ ಪ್ರಾರಂಭವಾಯಿತು ಎಂದು ಸಂಜು ತಮ್ಮ ಐಪಿಎಲ್ ಯಶಸ್ಸಿನ ಬಗ್ಗೆ ಮಾತಾನಾಡಿದ್ದಾರೆ.














