Last Updated:
ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 220 ರನ್ಗಳ ಬೃಹತ್ ಮೊತ್ತ ಕಲೆಯಾಕಿದೆ.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ (India vs West Indies) ವಿರುದ್ಧ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ (Team India) 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 223 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅಭಿಷೇಕ್ ಶರ್ಮಾ (Abhishek Sharma) ಸಿಡಿಸಿದ ಸ್ಫೋಟಕ ಅರ್ಧಶತಕ ಈ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡು 250 ರನ್ಗಳಿಗೂ ಹೆಚ್ಚು ರನ್ಗಳಿಸುವ ಅವಕಾಶ ಕಳೆದುಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಭಾರತ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ಕಳೆದ ಪಂದ್ಯದಲ್ಲಿ 82 ರನ್ಗಳಿಸಿದ್ದ ಸಂಜು ಸ್ಯಾಮ್ಸನ್ ಕೇವಲ 3 ರನ್ಗಳಿಸಿ ಔಟ್ ಆದರು. ಆದರೆ ಎಂದಿನಂತೆ ಸ್ಫೋಟಕ ಆಟವಾಡಿದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಒಟ್ಟಾರೆ ಈ ಪಂದ್ಯದಲ್ಲಿ ಅವರು 30 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ಗಳ ಸಹಿತ 69 ರನ್ಗಳಿಸುವ ಮೂಲಕ ದೊಡ್ಡ ಮೊತ್ತವನ್ನ ಕಲೆ ಹಾಕಲು ನೆರವಾದರು.
ಒಂದು ಹಂತದಲ್ಲಿ ಭಾರತ ತಂಡ 8 ಓವರ್ಗಳಲ್ಲಿ 100 ರ ಗಡಿ ದಾಟಿ 250ಕ್ಕೂ ಹೆಚ್ಚು ಮೊತ್ತ ಗಳಿಸುವ ಮುನ್ಸೂಚನೆ ನೀಡಿತ್ತು. ಆದರೆ 2 ಓವರ್ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. 8 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 109 ರನ್ಗಳಿಸಿದ್ದ ಭಾರತ 10 ಓವರ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು 125 ರನ್ಗಳಿಸಿತ್ತು. ಇಶಾನ್ ಕಿಶನ್ 18 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 37, ನಾಯಕ ಶ್ರೇಯಸ್ ಅಯ್ಯರ್ 1 ಹಾಗೂ ಅಭಿಷೇಕ್ ಶರ್ಮಾ 69 ರನ್ಗಳಿಸಿ ಸತತ 2 ಓವರ್ಗಳಲ್ಲಿ ಪೆವಿಲಿಯನ್ ಸೇರಿಕೊಂಡರು.
11ನೇ ಓವರ್ನಲ್ಲಿ ನಮನ್ ಧೀರ್ ಕೂಡ ಕೇವಲ 5 ಎಸೆತಗಳಲ್ಲಿ 10 ರನ್ಗಳಿಸಿ ಔಟ್ ಆದರು. ಈ ಹಂತದಲ್ಲಿ ತಿಲಕ್ ವರ್ಮಾ ಹಾಗೂ ನಿತೀಶ್ ಕುಮಾರ್ ರೆಡ್ಡಿ 37 ರನ್ಗಳ ಚೇತರಿಕೆ ಜೊತೆಯಾಟ ನೀಡಿದರು. ಆದರೆ ನಿತೀಶ್ ಕೂಡ ರನ್ಗಳಿಸುವ ಆತುರದಲ್ಲಿ 14 ಎಸೆತಗಳಲ್ಲಿ 21 ರನ್ಗಳಿಸಿ ನಿರ್ಗಮಿಸಿದರು. ಕೊನೆಯ ಬ್ಯಾಟಿಂಗ್ ಜೋಡಿಯಾಗಿದ್ದ ಅಕ್ಷರ್ ಪಟೇಲ್ ಹಾಗೂ ತಿಲಕ್ ವರ್ಮಾ 25 ರನ್ ಸೇರಿಸಿದರು. ತಿಲಕ್ ವರ್ಮಾ (28) ವಿಚಿತ್ರ ರನ್ಔಟ್ಗೆ ಬಲಿಯಾದರು. ಅಕ್ಷರ್ ಹೊಡೆದ ಚೆಂಡು ಬೌಂಡರಿ ದಾಟಿದೆ ಎಂದು ಭಾವಿಸಿದ ತಿಲಕ್ ರನ್ ಓಡುವ ಬದಲಿಗೆ ನಡೆದುಕೊಂಡು ಬಂದರು. ಆದರೆ ಚೆಂಡನ್ನ ಪಡೆದ ಕೀಪರ್ ಶಾಯ್ ಹೋಪ್ ಬೌಲರ್ ಕೈಗೆ ಚೆಂಡನ್ನ ನೀಡಿದರು. ಬೌಲರ್ ಬೇಲ್ಸ್ ಎಗರಿಸಿ ರನ್ ಔಟ್ ಅಪೀಲ್ ಮಾಡಿದರು. ಚೆಂಡು ಬೌಂಡರಿ ದಾಟುವ ಮುನ್ನ ಫೀಲ್ಡರ್ ತಡೆದಿದ್ದರಿಂದ, ತಿಲಕ್ ರನ್ ಪೂರ್ಣಗೊಳಿಸದ ಕಾರಣ ರನ್ ಔಟ್ ಆದರು.
ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ 38ಕ್ಕೆ2, ಶಮರ್ ಜೋಸೆಫ್ 54ಕ್ಕೆ2, ಶಮರ್ ಸ್ಪ್ರಿಂಗರ್ 50ಕ್ಕೆ2, ಗುಡಕೇಶ್ ಮೋಟಿ 37ಕ್ಕೆ1, ಕೀಮೋ ಪಾಲ್ 38ಕ್ಕೆ1 ವಿಕೆಟ್ ಪಡೆದರು.














