IND vs AFG: ಮಿಂಚಿದ ದುಬೆ, ಗುರ್ನೂರ್, ಅಬ್ಬರಿಸಿದ ಗಿಲ್-ರಾಹುಲ್! ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸುಲಭ ತುತ್ತಾದ ಅಫ್ಘಾನ್ | ಕ್ರೀಡಾ ಸುದ್ದಿ | ACTPnews

ಅಜೇಯ 84 ರನ್​ಗಳಿಸಿದ ಕೆಎಲ್ ರಾಹುಲ್


Last Updated:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 25 ಓವರ್​​ಗಳಲ್ಲಿ 194 ರನ್​ಗಳಿಸಿ ಸರ್ವಪತನಗೊಂಡಿತ್ತು. 195 ರನ್​ಗಳ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ 22.5 ಓವರ್​ಗಳಲ್ಲಿ ಗುರಿ ತಲುಪಿತು.

ಅಜೇಯ 84 ರನ್​ಗಳಿಸಿದ ಕೆಎಲ್ ರಾಹುಲ್
ಅಜೇಯ 84 ರನ್​ಗಳಿಸಿದ ಕೆಎಲ್ ರಾಹುಲ್

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ODI ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಸುಲಭ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ನಾಲ್ಕು ಗಂಟೆಗಳ ಕಾಲ ವಿಳಂಬವಾಯಿತು. ನಂತರ ಪಂದ್ಯವನ್ನು ಪ್ರತಿ ತಂಡಕ್ಕೆ 25 ಓವರ್‌ಗಳಿಗೆ ಇಳಿಸಿ ನಡೆಸಲಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 25 ಓವರ್​​ಗಳಲ್ಲಿ 194 ರನ್​ಗಳಿಸಿ ಸರ್ವಪತನಗೊಂಡಿತ್ತು. 195 ರನ್​ಗಳ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ 22.5 ಓವರ್​ಗಳಲ್ಲಿ ಗುರಿ ತಲುಪಿತು. ನಾಯಕ ಗಿಲ್ ಅಜೇಯ 84 ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅಜೇಯ 39 ರನ್​ಗಳಿಸಿದರೆ, ಇಶಾನ್ ಕಿಶನ್ 34 ರನ್​ಗಳಿಸಿ ಗೆಲುವಿನ ರೂವಾರಿಗಳಾದರು.

195 ರನ್​​​ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು.  5.4 ಓವರ್​​ಗಳಲ್ಲಿ 46 ರನ್​ಗಳಿಸಿ ರೋಹಿತ್ ಶರ್ಮಾ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು.  16 ಎಸೆತಗಳಲ್ಲಿ 16 ರನ್​ಗಳಿಸಿದ ರೋಹಿತ್ ಶರ್ಮಾ ರನ್​ಔಟ್ ಆದರು. ನಂತರ ಬಂದ ಇಶಾನ್ ಕಿಶನ್​ 2ನೇ ವಿಕೆಟ್ ಜೊತೆಯಾಟದಲ್ಲಿ ಗಿಲ್ ಜೊತೆಗೂಡಿ 70 ರನ್ಗಳಿಸಿ ಚೇತರಿಕೆ ನೀಡಿದರು. ಇಶಾನ್ ಕಿಶನ್ ಕೇವಲ 22 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 34 ರನ್​ಗಳಿಸಿ ರಶೀದ್ ಖಾನ್ ಬೌಲಿಂಗ್​​​ನಲ್ಲಿ ಬೌಲ್ಡ್ ಆದರು.  ನಂತರ ಬಂದ ಉಪನಾಯಕ ಶ್ರೇಯಸ್ ಅಯ್ಯರ್ 15 ಎಸೆತಗಳಲ್ಲಿ 12 ರನ್​ಗಳಿಸಿ ಔಟ್ ಆದರು.

ಫಿನಿಷಿಂಗ್ ಟಚ್ ಕೊಟ್ಟ ರಾಹುಲ್-ಗಿಲ್

5ನೇ ಕ್ರಮಾಂಕದಲ್ಲಿ ಬಂದ ಕೆಎಲ್ ರಾಹುಲ್​ ನಾಯಕ ಗಿಲ್ ಜೊತೆಗೂಡಿ 4ನೇ ವಿಕೆಟ್​ಗೆ ಮುರಿಯದ 53 ರನ್​ಗಳ ಜೊತೆಯಾಟ ಆಡಿದರು. ಅಬ್ಬರಿಸಿದ ರಾಹುಲ್ ಕೇವಲ19 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​​ಗಳ ಸಹಿತ ಅಜೇಯ 39 ರನ್​ಗಳಿಸಿದರು. ಶುಭ್​ಮನ್ ಗಿಲ್ 66 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 84  ರನ್​ಗಳಿಸಿ ಗೆಲುವಿನ ರೂವಾರಿಯಾದರು. ಅಫ್ಘಾನಿಸ್ತಾನ ಪರ ರಶೀದ್ ಖಾನ್ ಹಾಗೂ ಜಿಯಾವುರ್ ರೆಹ್ಮಾನ್ ಶರೀಫಿ ತಲಾ 1 ವಿಕೆಟ್ ಪಡೆದರು.

ಕಳಪೆ ಆರಂಭ ಪಡೆದ ಅಫ್ಘಾನ್

ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನದ ಆರಂಭ ಕಳಪೆಯಾಗಿತ್ತು. ಐದು ಓವರ್ ಗಳ ಪವರ್ ಪ್ಲೇನಲ್ಲಿ ಅಫ್ಘಾನಿಸ್ತಾನ 27 ರನ್ ಸೇರಿಸಿ ಮೂರು ವಿಕೆಟ್ ಕಳೆದುಕೊಂಡಿತು. ಎರಡನೇ ಓವರ್ ನಲ್ಲಿ ಗುರ್ನೂರ್ ಇಬ್ರಾಹಿಂ ಜದ್ರಾನ್ (1) ವಿಕೆಟ್ ಪಡೆದರೆ. ಮೂರನೇ ಓವರ್​ನಲ್ಲಿ ಅರ್ಷದೀಪ್ ಸಿಂಗ್ ಸೆದಿಕುಲ್ಲಾ ಅಟಲ್ (0) ಮತ್ತು ಐದನೇ ಓವರ್ ನಲ್ಲಿ ರಹಮತ್ ಶಾ (4) ವಿಕೆಟ್ ಪಡೆದು ಆಘಾತನ ನೀಡಿದರು.

ಸ್ಫೋಟಕ ಶತಕ ಸಿಡಿಸಿದ ಗುರ್ಬಾಜ್

ಆದರೆ ನಂತರ ರಹಮಾನುಲ್ಲಾ ಗುರ್ಬಾಜ್ ತಂಡವನ್ನ ಏಕಾಂಗಿಯಾಗಿ ಮುನ್ನಡೆಸಿಕೊಂಡು ಹೋದರು. ಭಾರತದ ಅನಾನುಭವಿ ಬೌಲಿಂಗ್ ದಾಳಿಯನ್ನ ಧ್ವಂಸ ಮಾಡಿದ ಗುರ್ಬಾಜ್​ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು. ಒಟ್ಟಾರೆ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 102 ರನ್​ಗಳಿಸಿದರು. ಗುರ್ಬಾಜ್ ನಾಲ್ಕನೇ ವಿಕೆಟ್​ಗೆ ಹಶ್ಮತುಲ್ಲಾ ಶಾಹಿದಿ ಜೊತೆ 116 ರನ್ ಗಳ ಜೊತೆಯಾಟ ನೀಡಿದರು. 16ನೇ ಓವರ್ ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಗುರ್ಬಾಜ್ ಬೌಲ್ಡ್ ಆದರು.

ಮಿಂಚಿದ ಪದಾರ್ಪಣೆ ಬೌಲರ್ಸ್

ಭಾರತದ ಪರ ಇಂದೇ ಮೊದಲ ಏಕದಿನ ಪಂದ್ಯವನ್ನಾಡಿದ ಗುರ್ನೂರ್ ಬ್ರಾರ್ 27ಕ್ಕೆ3  ಹಾಗೂ ಹರ್ಷ್ ದುಬೆ 47ಕ್ಕೆ3 ಮಿಂಚಿನ ಪ್ರದರ್ಶನ ನೀಡಿದರು. ಅರ್ಷದೀಪ್ ಸಿಂಗ್ 27ಕ್ಕೆ2 ಹಾಗೂ  ನಿತೀಶ್ ಕುಮಾರ್ ರೆಡ್ಡಿ 31ಕ್ಕೆ2 ನಿರ್ಣಾಯಕ  ವಿಕೆಟ್ ಪಡೆದು ಅಫ್ಘಾನ್ ತಂಡ 200ರ ಗಡಿ ದಾಟದಂತೆ ತಡೆದರು.

ಭಾರತ ಈ ಗೆಲುವಿನ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಎರಡನೇ ಪಂದ್ಯ ಲಖನೌನ ಏಕಾನ ಮೈದಾನದಲ್ಲಿ ಬುಧವಾರ ನಡೆಯಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed