Last Updated:
ಮುಂಬೈನ ಕೆಫೆಯೊಂದರಲ್ಲಿ ಇಬ್ಬರೂ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇದುವರೆಗೆ ಹೊರಬಂದಿಲ್ಲ.
ಬಾಲಿವುಡ್ ಹಾಗೂ ಕ್ರಿಕೆಟ್ ಲೋಕದ ಸೆಲೆಬ್ರಿಟಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹೊಸ ಹೊಸ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಕೆಲವೊಮ್ಮೆ ಒಂದೇ ಸ್ಥಳದಲ್ಲಿ ಕಾಣಿಸಿಕೊಂಡರೂ ಅವರ ವೈಯಕ್ತಿಕ ಜೀವನದ ಬಗ್ಗೆ ಊಹಾಪೋಹಗಳು ಆರಂಭವಾಗುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ನಟಿ ಮೃಣಾಲ್ ಠಾಕೂರ್ (Mrunal Thakur) ಮತ್ತು ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಸುತ್ತುವರಿದಿದೆ.
ಮುಂಬೈನ ಕೆಫೆಯೊಂದರಲ್ಲಿ ಇಬ್ಬರೂ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇದುವರೆಗೆ ಹೊರಬಂದಿಲ್ಲ.
ಇತ್ತೀಚೆಗೆ ಮುಂಬೈನ ಬಾಂದ್ರಾ ವೆಸ್ಟ್ನಲ್ಲಿರುವ ಬೂಜೀ ಕೆಫೆಯಲ್ಲಿ ಚಿತ್ರೀಕರಿಸಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಭಾರತದ ಉದಯೋನ್ಮುಖ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಹಾಗೂ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಒಂದೇ ಕೆಫೆಯಲ್ಲಿ ಕಾಣಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ ಇಬ್ಬರೂ ಒಟ್ಟಿಗೆ ಕುಳಿತಿರುವುದು ಅಥವಾ ಮಾತನಾಡುತ್ತಿರುವುದು ಕಾಣಿಸಿಲ್ಲ. ಯಶಸ್ವಿ ಜೈಸ್ವಾಲ್ ಕೆಫೆಯಿಂದ ಹೊರಬರುತ್ತಿರುವ ದೃಶ್ಯವಿದ್ದರೆ, ಮೃಣಾಲ್ ಠಾಕೂರ್ ಕೆಫೆಯೊಳಗಿರುವ ದೃಶ್ಯ ಕಾಣಿಸುತ್ತದೆ. ಆದರೂ ಒಂದೇ ಸ್ಥಳದಲ್ಲಿ ಇಬ್ಬರೂ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಆದರೆ ಇನ್ನು ಅನೇಕರು ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಒಂದೇ ಕೆಫೆಯಲ್ಲಿ ಕಾಣಿಸಿಕೊಂಡರೆ ಅದನ್ನೇ ಡೇಟಿಂಗ್ ಎಂದು ಹೇಳುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಅದನ್ನೇ ಆಧಾರವಾಗಿಸಿಕೊಂಡು ವೈಯಕ್ತಿಕ ಸಂಬಂಧಗಳ ಬಗ್ಗೆ ತೀರ್ಮಾನಿಸುವುದು ಸೂಕ್ತವಲ್ಲ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇಬ್ಬರ ವಯಸ್ಸಿನ ಅಂತರದ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಅವರಿಗೆ 24 ವರ್ಷವಾಗಿದ್ದರೆ, ಮೃಣಾಲ್ ಠಾಕೂರ್ ಅವರಿಗೆ 33 ವರ್ಷ. ಇದನ್ನು ಉಲ್ಲೇಖಿಸಿ ಹಲವರು ಡೇಟಿಂಗ್ ವದಂತಿಯನ್ನು ಪ್ರಶ್ನಿಸಿದ್ದಾರೆ.
ಮೃಣಾಲ್ ಠಾಕೂರ್ ಅವರ ವೈಯಕ್ತಿಕ ಜೀವನದ ಬಗ್ಗೆ ಈ ಹಿಂದೆ ಕೂಡ ಹಲವು ವದಂತಿಗಳು ಹರಿದಾಡಿದ್ದವು. ವಿಶೇಷವಾಗಿ ತಮಿಳು ನಟ ಧನುಷ್ ಅವರೊಂದಿಗೆ ನಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ಸಮಯದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ನಂತರ ಇಬ್ಬರೂ ದೂರವಾಗಿದ್ದಾರೆ ಎಂಬ ಸುದ್ದಿಗಳೂ ಕೇಳಿಬಂದಿದ್ದರೂ, ಆ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿರಲಿಲ್ಲ.
ಸದ್ಯ ವೈರಲ್ ಆಗಿರುವ ಕೆಫೆ ವಿಡಿಯೋ ಕುರಿತು ಯಶಸ್ವಿ ಜೈಸ್ವಾಲ್ ಅಥವಾ ಮೃಣಾಲ್ ಠಾಕೂರ್ ಯಾರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಯಾಗಿದ್ದು, ಅದಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ.
Bangalore [Bangalore],Bangalore,Karnataka
Jul 28, 2026 10:17 AM IST














