Last Updated:
ಐಸಿಸಿ ಟಿ20 ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಯುವ ಸೆನ್ಸೇಷನ್ ಮತ್ತು ಎಡಗೈ ಓಪನರ್ ಇಶಾನ್ ಕಿಶನ್ಯ ಶಸ್ವಿಯಾಗಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ ಸಹ ಎಡಗೈ ಬೌಲರ್ ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.
ಐಸಿಸಿ ಪುರುಷರ ಟಿ20 ಬ್ಯಾಟಿಂಗ್ (T20 Ranking) ಶ್ರೇಯಾಂಕದಲ್ಲಿ ಭಾರತದ ಯುವ ಆಟಗಾರರು ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಟೀಮ್ ಇಂಡಿಯಾದ ಯುವ ಸೆನ್ಸೇಷನ್ ಮತ್ತು ಎಡಗೈ ಓಪನರ್ ಇಶಾನ್ ಕಿಶನ್ (Ishan Kishan) ಯಶಸ್ವಿಯಾಗಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ ಸಹ ಎಡಗೈ ಬೌಲರ್ ಅಭಿಷೇಕ್ ಶರ್ಮಾ (Abhishek Sharma) ಎರಡನೇ ಸ್ಥಾನದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಆದರೆ ಟೀಮ್ ಇಂಡಿಯಾ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ 2022ರ ಬಳಿಕ ತೀರ ಹಿನ್ನಡೆ ಅನುಭವಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಈ ಶ್ರೇಯಾಂಕದಲ್ಲಿ ಗಮನಾರ್ಹ ಹೊಡೆತವನ್ನು ಅನುಭವಿಸಿದ್ದಾರೆ. 2022ರಲ್ಲಿ ಟಾಪ್ 10ಕ್ಕೆ ಎಂಟ್ರಿಕೊಟ್ಟಿದ್ದ ಸೂರ್ಯಕುಮಾರ್ ಯಾದವ್ 4 ವರ್ಷಗಳ ಬಳಿಕ ಐದು ಸ್ಥಾನಗಳು ಕುಸಿತ ಕಂಡು 13ನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು ಪ್ರಸ್ತುತ 687 ರೇಟಿಂಗ್ ಪಾಯಿಂಟ್ಗಳನ್ನು ಹೊಂದಿದ್ದಾರೆ. ಟಿ20 ವಿಶ್ವಕಪ್ನಲ್ಲಿ ನಾಯಕನಾಗಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ಸೂರ್ಯಕುಮಾರ್ ನಾಯಕತ್ವ ಕಳೆದುಕೊಂಡಿರುವುದರ ಜೊತೆಗೆ ತಂಡದಿಂದಲೂ ಹೊರಬಿದ್ದಿದ್ದಾರೆ.
ಇತ್ತೀಚಿನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಯುವ ಇಂಗ್ಲಿಷ್ ಬ್ಯಾಟ್ಸ್ಮನ್ ಜೇಕಬ್ ಬೆಥೆಲ್ ಭಾರಿ ಏರಿಕೆ ಕಂಡಿದ್ದಾರೆ. ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ ಅಜೇಯ 76 ರನ್ ಗಳಿಸುವ ಮೂಲಕ ಬೆಥೆಲ್ ತಮ್ಮ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಈ ಅದ್ಭುತ ಪ್ರದರ್ಶನವು ಅವರಿಗೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿಯನ್ನು ಗಳಿಸಿಕೊಟ್ಟಿದ್ದಲ್ಲದೆ, ಶ್ರೇಯಾಂಕದಲ್ಲಿ ಏಳು ಸ್ಥಾನಗಳನ್ನು ಏರಿ ವೃತ್ತಿಜೀವನದ ಅತ್ಯುತ್ತಮ ಎಂಟನೇ ಸ್ಥಾನವನ್ನು ತಲುಪಲು ಕಾರಣವಾಗಿದೆ. ಪ್ರಸ್ತುತ 708 ರೇಟಿಂಗ್ ಪಾಯಿಂಟ್ಗಳನ್ನು ಹೊಂದಿರುವ ಇಂಗ್ಲಿಷ್ ಬ್ಯಾಟ್ಸ್ಮನ್ ತಮ್ಮ ತಂಡದ ಸಹ ಆಟಗಾರ ಜೋಸ್ ಬಟ್ಲರ್ಗಿಂತ ಕೇವಲ ಒಂದು ಪಾಯಿಂಟ್ ಹಿಂದಿದ್ದಾರೆ.
ಇನ್ನು ಭಾರತೀಯ ಆಟಗಾರರು ಬೌಲಿಂಗ್ ವಿಭಾಗದಲ್ಲೂ ನಿರಾಶೆ ಅನುಭವಿಸಿದ್ದಾರೆ. ಭಾರತದ ಪ್ರಮುಖ ಬೌಲರ್ಗಳಾದ ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ತಲಾ ಎರಡು ಸ್ಥಾನ ಕುಸಿದು ಕ್ರಮವಾಗಿ 5, 8 ಮತ್ತು 17 ನೇ ಸ್ಥಾನಗಳಿಗೆ ಇಳಿದಿದ್ದಾರೆ. ಆದರೆ, ಇಂಗ್ಲೆಂಡ್ನ ಹಿರಿಯ ಲೆಗ್-ಸ್ಪಿನ್ನರ್ ಆದಿಲ್ ರಶೀದ್ ಐಸಿಸಿ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಟ್ರೆಂಟ್ ಬ್ರಿಡ್ಜ್ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಎರಡು ನಿರ್ಣಾಯಕ ವಿಕೆಟ್ಗಳನ್ನು ಪಡೆದ ನಂತರ, ಅವರು ಒಂದು ಸ್ಥಾನ ಏರಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ.
ಐಸಿಸಿ ಪುರುಷರ ಟಿ20 ಆಲ್ರೌಂಡರ್ಗಳ ಪಟ್ಟಿಯಲ್ಲಿ, ಭಾರತದ ಹಾರ್ದಿಕ್ ಪಾಂಡ್ಯ ಒಂದು ಸ್ಥಾನ ಕುಸಿದು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಇದಕ್ಕೆ ವಿರುದ್ಧವಾಗಿ, ಇಂಗ್ಲೆಂಡ್ನ ಆಲ್ರೌಂಡರ್ ವಿಲ್ ಜಾಕ್ಸ್ ಆರು ಸ್ಥಾನಗಳನ್ನು ಯಶಸ್ವಿಯಾಗಿ ಏರಿ ಏಳನೇ ಸ್ಥಾನವನ್ನು ತಲುಪಿದರು. ಭಾರತ ವಿರುದ್ಧದ ನಡೆಯುತ್ತಿರುವ ಸರಣಿಯ 2ನೇ ಪಂದ್ಯದಲ್ಲಿ ತಿಲಕ್ ವರ್ಮಾ ಮತ್ತು ವೈಭವ್ ಸೂರ್ಯವಂಶಿ ಅವರ ವಿಕೆಟ್ಗಳನ್ನು ಪಡೆಯುವ ಮೂಲಕ ಅಮೂಲ್ಯ ಕೊಡುಗೆ ನೀಡಿ ಜ್ಯಾಕ್ಸ್ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದಾರೆ.













