Last Updated:
ಇತ್ತೀಚಿಗೆ ಭಾರತ ಅಂಡರ್ 19 ತಂಡದ ಪರ ಆಡಿದ್ದ ಸೆಹ್ವಾಗ್ ಮಗ ಆರ್ಯವೀರ್ ಸೆಹ್ವಾಗ್ ಅವರಿಗೆ ಕೇವಲ 18ನೇ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿ ಸಿಕ್ಕಿದೆ.. ಅವರು ದೇಶಿ ಕ್ರಿಕೆಟ್‌ನಲ್ಲಿ ದೆಹಲಿಯ ಅಂಡರ್-19 ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ಲೆಜೆಂಡರಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ (Virender Sehwag) ಅವರ ಪುತ್ರ ಆರ್ಯವೀರ್ ಸೆಹ್ವಾಗ್ (Aaryaveer Sehwag) ಈಗ ಅಂಡರ್-19 ತಂಡದ ನಾಯಕರಾಗಿದ್ದಾರೆ. ಮುಂಬರುವ ಪ್ರತಿಷ್ಠಿತ ವಿನೂ ಮಂಕಡ್ ಟ್ರೋಫಿ (Vinoo Mankad Trophy) ಟೂರ್ನಿಗಾಗಿ ಆರ್ಯವೀರ್ ದೆಹಲಿ ತಂಡವನ್ನ ಮುನ್ನಡೆಸಲಿದ್ದಾರೆ. ಈ ಮೂಲಕ ಸೆಹ್ವಾಗ್ ಮಗ ಆರ್ಯವೀರ್ ಸೆಹ್ವಾಗ್ ಅವರಿಗೆ ಕೇವಲ 18ನೇ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿ ಸಿಕ್ಕಂತಾಗಿದೆ. ಅವರು ದೇಶಿ ಕ್ರಿಕೆಟ್‌ನಲ್ಲಿ ದೆಹಲಿಯ ಅಂಡರ್-19 ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ಅಧಿಕೃತವಾಗಿ ಪ್ರಕಟಿಸಿದೆ.
ವಿನೂ ಮಂಕಡ್ ಟ್ರೋಫಿ 2026 ರ ಈ ಟೂರ್ನಿಯು ಇದೇ ತಿಂಗಳು ಅಕ್ಟೋಬರ್‌ನಿಂದ ಪ್ರಾರಂಭವಾಗಲಿದ್ದು, ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿದೆ. ಈ ಟೂರ್ನಿಗಾಗಿ ಡಿಡಿಸಿಎ ಜೂನಿಯರ್ ಪುರುಷರ ಆಯ್ಕೆ ಸಮಿತಿಯ ಸಭೆಯಲ್ಲಿ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಆರ್ಯವೀರ್ ಅವರನ್ನು ನಾಯಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ.
ಆರ್ಯವೀರ್ ಇತ್ತೀಚೆಗಷ್ಟೇ ಭಾರತ ತಂಡದ ಪರವಾಗಿ ಆಡಿದ ಅನುಭವವನ್ನು ಹೊಂದಿದ್ದಾರೆ. ಅವರು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ಭಾರತ ಅಂಡರ್-19 ತಂಡದ ಪರವಾಗಿ ಚೊಚ್ಚಲ ಪಂದ್ಯ ಆಡಿದ್ದರು. ಮೂರು ಏಕದಿನ ಪಂದ್ಯಗಳ ಆ ಸರಣಿಯಲ್ಲಿ ಆರ್ಯವೀರ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದರು. ಅವರು ಮೊದಲ ಪಂದ್ಯದಲ್ಲಿ 28 ರನ್‌ಗಳ ಇನ್ನಿಂಗ್ಸ್ ಆಡಿದರೆ, ಎರಡನೇ ಪಂದ್ಯದಲ್ಲಿ 47 ರನ್ ಗಳಿಸಿದ್ದರು. ಮೂರನೇ ಮತ್ತು ಕೊನೆಯ ಪಂದ್ಯದಲ್ಲೂ ಆರ್ಯವೀರ್ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭವನ್ನು ಪಡೆದಿದ್ದರೂ, ದುರದೃಷ್ಟವಶಾತ್ 34 ರನ್ ಗಳಿಸಿ ಔಟ್ ಆಗಿದ್ದರು.
ಅಂಡರ್-19 ತಂಡದ ಯಶಸ್ಸಿನ ಜೊತೆಗೆ ಆರ್ಯವೀರ್ ಅವರಿಗೆ ಹಿರಿಯರ ಮಟ್ಟದಲ್ಲಿ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ (DPL) ಆಡಿದ ಅನುಭವವೂ ಇದೆ. 18 ವರ್ಷದ ಆರ್ಯವೀರ್ ಸೆಹ್ವಾಗ್ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ಭಾಗವಾಗಿದ್ದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸೀಸನ್‌ನಲ್ಲಿ ಆರ್ಯವೀರ್ ಅವರಿಗೆ ವೆಸ್ಟ್ ಡೆಲ್ಲಿ ಪರವಾಗಿ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತಾದರೂ, ಅದರಲ್ಲಿ ಅವರು ಕೇವಲ 24 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಆರ್ಯವೀರ್ ಸೆಹ್ವಾಗ್ (ನಾಯಕ), ಅರ್ನವ್ ಬುಗ್ಗಾ (ಉಪನಾಯಕ), ತನ್ಮಯ್ ಚೌಧರಿ, ಧನ್ಯ ನಕ್ಡಾ, ಉದಯ್ ಚಾವ್ಲಾ, ಗರ್ವ್ ಕುಮಾರ್, ಅಭಿರಾಜ್ ಗಗನ್ ಸಿಂಗ್ (ವಿಕೆಟ್ ಕೀಪರ್), ತರುಣ್ ಸಿಂಗ್ (ವಿಕೆಟ್ ಕೀಪರ್), ಆರ್ಯನ್ ಶರ್ಮಾ, ಓಜಸ್‌ದೀಪ್ ಸಿಂಗ್, ಕಿರೀಟ್ ಕೌಶಿಕ್, ವರುಣ್ ವಂಜಾನಿ, ರುದ್ರ ದೇವ್ ಯಾದವ್, ಪ್ರದ್ಯುಮ್ನ ಸಾನನ್, ಪಾರ್ಥ್ ರಾಜ್, ಶಂತನು ಯಾದವ್.














