Drishyam 3: ಅಜಯ್ ದೇವಗನ್ ‘ದೃಶ್ಯಂ 3’ಗೆ ಬಿಗ್ ಸಕ್ಸಸ್; ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಸಿನಿಮಾ! | | ACTPnews

Drishyam 3: ಅಜಯ್ ದೇವಗನ್ 'ದೃಶ್ಯಂ 3'ಗೆ ಬಿಗ್ ಸಕ್ಸಸ್; ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಸಿನಿಮಾ! |


ಎರಡೇ ದಿನದಲ್ಲಿ 100 ಕೋಟಿ ದಾಟಿದ ಸಿನಿಮಾ

ಅಭಿಷೇಕ್ ಪಾಠಕ್ ನಿರ್ದೇಶನದ ದೃಶ್ಯಂ 3 ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡನೇ ದಿನವೂ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಮುಂದುವರಿದಿದ್ದು, ಭಾರತದಲ್ಲಿ ಎರಡು ದಿನಗಳ ಒಟ್ಟು ಗಳಿಕೆ 115.50 ಕೋಟಿ ರೂಪಾಯಿಗೆ ತಲುಪಿದೆ.

ಸ್ಯಾಕ್ನಿಲ್ಕ್ ವರದಿ ಪ್ರಕಾರ, ಶನಿವಾರ ಅಂದರೆ ಅಕ್ಟೋಬರ್ 3ರಂದು ಸಿನಿಮಾ ಭಾರತದಲ್ಲಿ 53.50 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಗಳಿಕೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರೂ, ಚಿತ್ರ 100 ಕೋಟಿ ರೂಪಾಯಿ ಗಡಿ ದಾಟಲು ಇದು ಸಾಕಷ್ಟು ನೆರವಾಗಿದೆ.

ಹಲವು ಕಡೆಗಳಲ್ಲಿ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಭಾನುವಾರವಾದ ಅಕ್ಟೋಬರ್ 4ರಂದು ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ವಾರಾಂತ್ಯದ ಕೊನೆಯ ದಿನ ಚಿತ್ರಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾದರೆ, ಮೂರನೇ ದಿನವೇ ಭಾರತದಲ್ಲಿ 150 ಕೋಟಿ ರೂಪಾಯಿ ಗಡಿ ದಾಟುವ ಸಾಧ್ಯತೆಯೂ ಇದೆ.

ವಿಶ್ವದಾದ್ಯಂತ 177 ಕೋಟಿ ರೂಪಾಯಿ ಗಳಿಕೆ

ಭಾರತೀಯ ಬಾಕ್ಸಾಫೀಸ್‌ನಲ್ಲಿ ಎರಡು ದಿನಗಳಲ್ಲಿ 115.50 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿರುವ ದೃಶ್ಯಂ 3, ವಿಶ್ವದಾದ್ಯಂತವೂ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡು ದಿನಗಳಲ್ಲಿ ಚಿತ್ರದ ವಿಶ್ವದಾದ್ಯಂತದ ಗಳಿಕೆ 177.10 ಕೋಟಿ ರೂಪಾಯಿ ತಲುಪಿದೆ ಎಂದು ವರದಿಯಾಗಿದೆ.

ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಚಿತ್ರದ ಗಳಿಕೆ ಮತ್ತಷ್ಟು ವೇಗ ಪಡೆಯುವ ಸಾಧ್ಯತೆಯಿದೆ. ಅಜಯ್ ದೇವಗನ್ ಅಭಿಮಾನಿಗಳಷ್ಟೇ ಅಲ್ಲದೆ, ದೃಶ್ಯಂ ಸರಣಿಯ ಹಿಂದಿನ ಎರಡು ಸಿನಿಮಾಗಳನ್ನು ಇಷ್ಟಪಟ್ಟಿರುವ ಪ್ರೇಕ್ಷಕರೂ ಮೂರನೇ ಭಾಗವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: Luxury Car: ಮೂರು ಮುಕ್ಕಾಲು ಕೋಟಿಯ ಕಾರು ಖರೀದಿಸಿದ ಬಾಲಿವುಡ್ ನಟ! ಶಾರುಖ್ ಅಲ್ಲ, ಸಲ್ಮಾನ್ ಖಾನ್ ಅಲ್ಲ

ದೃಶ್ಯಂ 3 ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತೊಮ್ಮೆ ವಿಜಯ್ ಸಲಗಾಂವ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಟಬು, ಶ್ರಿಯಾ ಸರನ್, ಇಶಿತಾ ದತ್ತಾ, ಮೃಣಾಲ್ ಜಾಧವ್, ಪ್ರಕಾಶ್ ರಾಜ್, ಜೈದೀಪ್ ಅಹ್ಲಾವತ್, ಕಮಲೇಶ್ ಸಾವಂತ್, ರಜತ್ ಕಪೂರ್, ಸೌರಭ್ ಶುಕ್ಲಾ, ಸಂವೇದನಾ ಸುವಾಲ್ಕಾ ಮತ್ತು ನೇಹಾ ಜೋಷಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಿಂದಿಯ ದೃಶ್ಯಂ 3 ಅನ್ನು ಈ ಫ್ರಾಂಚೈಸಿಯ ಕೊನೆಯ ಭಾಗ ಎಂದು ಹೇಳಲಾಗುತ್ತಿದೆ. ವಿಜಯ್ ಸಲಗಾಂವ್ಕರ್ ಕುಟುಂಬ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕುವ ಕಥೆಯನ್ನು ಸಿನಿಮಾ ಮುಂದುವರಿಸುತ್ತದೆ. ಈಗಾಗಲೇ ಮೊದಲ ಎರಡು ಭಾಗಗಳಿಂದ ಜನಪ್ರಿಯವಾಗಿರುವ ಈ ಫ್ರಾಂಚೈಸಿಯ ಅಂತಿಮ ಅಧ್ಯಾಯ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಹಿಂದಿಯ ದೃಶ್ಯಂ 3 ಕಥೆ ಮೂಲ ಮಲಯಾಳಂ ದೃಶ್ಯಂ 3 ಚಿತ್ರಕ್ಕಿಂತ ಭಿನ್ನವಾಗಿದೆ ಎನ್ನಲಾಗಿದೆ. ಕಥೆಯಲ್ಲಿ ಮಾಡಲಾಗಿರುವ ಬದಲಾವಣೆಗಳು ಹಿಂದಿ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ ಎಂಬ ಮಾತು ಕೇಳಿಬರುತ್ತಿದೆ. ಇದೇ ಕಾರಣದಿಂದ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದ್ದು, ಬಿಡುಗಡೆಯಾದ ಎರಡೇ ದಿನಗಳಲ್ಲಿ 100 ಕೋಟಿ ರೂಪಾಯಿ ಕ್ಲಬ್‌ಗೆ ಸೇರುವಲ್ಲಿ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ.

ಸದ್ಯ ದೃಶ್ಯಂ 3 ಅಜಯ್ ದೇವಗನ್ ವೃತ್ತಿಜೀವನದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗುವತ್ತ ಸಾಗುತ್ತಿದೆ. ಭಾನುವಾರದ ಗಳಿಕೆ ಹೊರಬಂದ ಬಳಿಕ ಸಿನಿಮಾ 150 ಕೋಟಿ ರೂಪಾಯಿ ಗಡಿ ದಾಟಿದೆಯೇ ಎಂಬುದು ಮತ್ತಷ್ಟು ಸ್ಪಷ್ಟವಾಗಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed