Last Updated:
Cyber Crime: ರಾಜಕೀಯ ಗಣ್ಯರೇ ಸೈಬರ್ ಖದೀಮರ ಬಲೆಗೆ ಬೀಳುತ್ತಿರುವ ಆತಂಕಕಾರಿ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ಅದರಂತೆ, ಭಾರತದ ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಅವರ ಪುತ್ರ ನರೇಶ್ ಗುಜ್ರಾಲ್ ಭಾರಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ನರೇಶ್ ಗುಜ್ರಾಲ್ ಅವರ ಹೆಸರಿನಲ್ಲಿ ವಂಚಕರು ಬರೋಬ್ಬರಿ ₹7.8 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ದೆಹಲಿ: ರಾಜಕೀಯ ಗಣ್ಯರೇ ಸೈಬರ್ ಖದೀಮರ ಬಲೆಗೆ ಬೀಳುತ್ತಿರುವ ಆತಂಕಕಾರಿ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ಅದರಂತೆ, ಭಾರತದ ಮಾಜಿ ಪ್ರಧಾನಿ (Prime Minister) ಇಂದರ್ ಕುಮಾರ್ ಗುಜ್ರಾಲ್ (Inder Kumar Gujral) ಅವರ ಪುತ್ರ ನರೇಶ್ ಗುಜ್ರಾಲ್ (Naresh Gujral) ಭಾರಿ ಸೈಬರ್ ವಂಚನೆಗೆ (Cyber Fraud) ಒಳಗಾಗಿದ್ದಾರೆ. ಮಾಜಿ ರಾಜ್ಯಸಭಾ (Rajya Sabha) ಸದಸ್ಯರೂ ಆಗಿರುವ ನರೇಶ್ ಗುಜ್ರಾಲ್ ಅವರ ಹೆಸರಿನಲ್ಲಿ ವಂಚಕರು ಬರೋಬ್ಬರಿ ₹7.8 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ಜೂನ್ 12 ರಿಂದ ಜೂನ್ 16 ರ ನಡುವೆ ಈ ವ್ಯವಸ್ಥಿತ ಸೈಬರ್ ದರೋಡೆ ನಡೆದಿದೆ. ನರೇಶ್ ಗುಜ್ರಾಲ್ ಅವರು ದೆಹಲಿಯಲ್ಲಿ ಇಲ್ಲದ ಸಮಯವನ್ನು ಹೊಂಚುಹಾಕಿ ವಂಚಕರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ನರೇಶ್ ಗುಜ್ರಾಲ್ ಅವರ ಒಡೆತನದ ಗಾರ್ಮೆಂಟ್ಸ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯನ್ನು ಗುರಿಯಾಗಿಸಿಕೊಂಡು ವಂಚಕರು ಜಾಲ ಹೆಣೆದಿದ್ದರು.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ವಾಟ್ಸ್ಆ್ಯಪ್ ಮೆಸೇಜಿಂಗ್ ಆ್ಯಪ್ನಲ್ಲಿ ನರೇಶ್ ಗುಜ್ರಾಲ್ ಅವರ ಪ್ರೊಫೈಲ್ ಚಿತ್ರವನ್ನು ಬಳಸಿ ವಂಚಕರು ನಕಲಿ ಖಾತೆಯೊಂದನ್ನು ಸೃಷ್ಟಿಸಿದ್ದರು. ನಂತರ ಆ ಖಾತೆಯಿಂದ ಕಂಪನಿಯ ಸಿಎಫ್ಒಗೆ, “ತಾವು ತುರ್ತು ವ್ಯವಹಾರದ ನಿಮಿತ್ತ ಬ್ಯುಸಿಯಾಗಿದ್ದು, ತಕ್ಷಣವೇ ಕೆಲವು ಬ್ಯಾಂಕ್ ಖಾತೆಗಳಿಗೆ ದೊಡ್ಡ ಮೊತ್ತದ ಹಣ ವರ್ಗಾಯಿಸಬೇಕು” ಎಂದು ಸೂಚಿಸಿದ್ದಾರೆ. ಪ್ರೊಫೈಲ್ ಚಿತ್ರವನ್ನು ನೋಡಿ ಅದು ತಮ್ಮ ಮಾಲೀಕರೇ ಎಂದು ನಂಬಿದ ಸಿಎಫ್ಒ, ಯಾವುದೇ ಮರುಪರಿಶೀಲನೆ ನಡೆಸದೆ ನಾಲ್ಕು ಪ್ರತ್ಯೇಕ RTGS ವಹಿವಾಟುಗಳ ಮೂಲಕ ಒಟ್ಟು ₹7.8 ಕೋಟಿ ಹಣವನ್ನು ವರ್ಗಾಯಿಸಿದ್ದರು.
ಜೂನ್ 16 ರಂದು ಕಂಪನಿಯ ಮತ್ತೊಬ್ಬ ಉದ್ಯೋಗಿಗೆ ಅನುಮಾನ ಬಂದು, ನರೇಶ್ ಗುಜ್ರಾಲ್ ಅವರ ಪುತ್ರಿ ದೀಕ್ಷಾ ಗುಜ್ರಾಲ್ ಅವರನ್ನು ಸಂಪರ್ಕಿಸಿದ್ದಾರೆ. “ನಿಮ್ಮ ತಂದೆ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಲು ಕೇಳುತ್ತಿದ್ದಾರೆಯೇ?” ಎಂದು ವಿಚಾರಿಸಿದ್ದಾರೆ. ತಕ್ಷಣವೇ ದೀಕ್ಷಾ ಅವರು ವಿದೇಶದಲ್ಲಿದ್ದ ತಮ್ಮ ತಂದೆಯನ್ನು ಸಂಪರ್ಕಿಸಿ ಮಾಹಿತಿ ಪಡೆದಾಗ, ತಾವು ಯಾವುದೇ ಹಣ ವರ್ಗಾವಣೆಗೆ ಸೂಚಿಸಿಲ್ಲ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ತಕ್ಷಣವೇ ಕುಟುಂಬಸ್ಥರು ದೆಹಲಿ ಪೊಲೀಸರ ಸೈಬರ್ ವಿಭಾಗಕ್ಕೆ ಇ-ಎಫ್ಐಆರ್ ದಾಖಲಿಸಿದ್ದಾರೆ.
ಏತನ್ಮಧ್ಯೆ, ದೂರು ದಾಖಲಾಗುತ್ತಿದ್ದಂತೆ ದೆಹಲಿ ಪೊಲೀಸರು ಬ್ಯಾಂಕ್ ಅಧಿಕಾರಿಗಳ ನೆರವಿನೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ವಂಚಕರು ಆ ಹಣವನ್ನು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ನಾಲ್ಕು ಪ್ರಮುಖ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಅಲ್ಲಿಂದ ಪತ್ತೆ ಹಚ್ಚದಂತೆ ತಡೆಯಲು ಸುಮಾರು 30 ರಿಂದ 40 ನಕಲಿ ಖಾತೆಗಳಿಗೆ ಹಣವನ್ನು ರವಾನಿಸಿದ್ದರು. ಆದರೆ ಪೊಲೀಸರು ವಂಚನೆಗೊಳಗಾದ ಮೊತ್ತದ ಸುಮಾರು ಶೇ. 70 ರಷ್ಟು, ಅಂದರೆ ₹4.28 ಕೋಟಿ ಹಣವನ್ನು ವಿವಿಧ ಖಾತೆಗಳಲ್ಲಿ ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಹಣವನ್ನು ರಿಕವರಿ ಮಾಡಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.













