Last Updated:
ಏಪ್ರಿಲ್ 2025 ರಿಂದ ಮಾರ್ಚ್ 2026ರ ನಡುವೆ ಭಾರತದ 32 ಪ್ರಮುಖ ಕ್ರಿಕೆಟಿಗರು ಗಾಯದಿಂದ ಚೇತರಿಸಿಕೊಳ್ಳಲು ರಿಹ್ಯಾಬಿಲಿಟೇಶನ್ ಪ್ರಕ್ರಿಯೆಗೆ ಒಳಗಾಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಸೆಂಟರ್ ಆಫ್ ಎಕ್ಸಲೆನ್ಸ್ (CoE) ನ ಗಾಯ ನಿರ್ವಹಣೆ ಕಾರ್ಯಕ್ರಮದ ಕುರಿತು ಕೆಲವು ಆಘಾತಕಾರಿ ಹಾಗೂ ಮಹತ್ವದ ಸಂಗತಿಗಳು ಹೊರಬಿದ್ದಿವೆ. ಐಪಿಎಲ್ 2026ರ (IPL) ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಆಟಗಾರರ ಗಾಯದ ಸಮಸ್ಯೆ ತೀವ್ರಗೊಂಡಿದ್ದು, ಪ್ರತಿಯೊಂದು ಸರಣಿಯಲ್ಲೂ ಸರಾಸರಿ ಇಬ್ಬರು ಆಟಗಾರರು ಗಾಯಗೊಳ್ಳುತ್ತಿರುವುದು ಕಳವಳ ಮೂಡಿಸಿದೆ.
ಏಪ್ರಿಲ್ 2025 ರಿಂದ ಮಾರ್ಚ್ 2026ರ ನಡುವೆ ಭಾರತದ 32 ಪ್ರಮುಖ ಕ್ರಿಕೆಟಿಗರು ಗಾಯದಿಂದ ಚೇತರಿಸಿಕೊಳ್ಳಲು ರಿಹ್ಯಾಬಿಲಿಟೇಶನ್ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಈ ಪಟ್ಟಿಯಲ್ಲಿ 20 ಸೆಂಟ್ರಲ್ ಕಾಂಟ್ರಾಕ್ಟ್ ಹೊಂದಿರುವ ಹಿರಿಯ ಆಟಗಾರರು ಹಾಗೂ 12 ಇಂಡಿಯಾ ಎ ಅಥವಾ ಟಾರ್ಗೆಟೆಡ್ ಗ್ರೂಪ್‌ನ ಆಟಗಾರರು ಸೇರಿದ್ದಾರೆ. ಐಪಿಎಲ್ 2026ರ ನಂತರ ಈ ಬಿಕ್ಕಟ್ಟು ಎಷ್ಟು ಹೆಚ್ಚಾಗಿದೆ ಎಂದರೆ, ಪ್ರತಿಯೊಂದು ಸರಣಿಯಲ್ಲೂ ಸರಾಸರಿ ಇಬ್ಬರು ಭಾರತೀಯ ಆಟಗಾರರು ಗಾಯಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮಹಿಳಾ ಮತ್ತು ಪುರುಷರ ಎರಡೂ ವಿಭಾಗಗಳನ್ನು ಪರಿಗಣಿಸಿದರೆ CoEನ ಸ್ಪೋರ್ಟ್ಸ್ ಸೈನ್ಸ್ ಅಂಡ್ ಮೆಡಿಸಿನ್ (SSM) ತಂಡವು ಒಟ್ಟು 68 ಆಟಗಾರರ ಗಾಯಗಳಿಗೆ ಚಿಕಿತ್ಸೆ ನೀಡಿದೆ. ಇವುಗಳಲ್ಲಿ ಹೆಚ್ಚಿನವು ಸ್ನಾಯು ಸೆಳೆತಕ್ಕೆ (ಮಸ್ಕುಲರ್ ಸ್ಟ್ರೈನ್) ಸಂಬಂಧಿಸಿದ ಗಾಯಗಳಾಗಿವೆ. ಜುಲೈ 2025 ರಲ್ಲಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ವೇಳೆ ಕಾಲಿಗೆ ಮುರಿತಕ್ಕೊಳಗಾದ ರಿಷಭ್ ಪಂತ್ ಅವರದ್ದು ಮಾತ್ರ ಏಕೈಕ ಇಂಪ್ಯಾಕ್ಟ್ ಇಂಜರಿ (ನೇರ ಪೆಟ್ಟು) ಎಂದು ದಾಖಲಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ CoE ನ ಒಟ್ಟು ವೆಚ್ಚ 92 ಕೋಟಿ ರೂ.ಗಳಷ್ಟಿತ್ತು. ಆದರೆ 2026-27ನೇ ಸಾಲಿಗೆ ಅಂದಾಜು ಬಜೆಟ್ ಅನ್ನು 127 ಕೋಟಿ ರೂ.ಗಳಿಗೆ ಏರಿಸಲಾಗಿದೆ. ಅಂದರೆ ಸುಮಾರು 35 ಕೋಟಿ ರೂ.ಗಳಷ್ಟು ಭಾರೀ ಹೆಚ್ಚಳ ಮಾಡಲಾಗಿದೆ.












