Last Updated:
Arjun Sarja: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು ತೊಲಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ತಮಿಳು ನಟ ಕಮ್ ತಮಿಳುನಾಡು ಮಾಜಿ ಡಿಸಿಎಂ ಉದಯನಿಧಿ ಸ್ಟಾಲಿನ್ ನೀಡಿದ್ದರು. ಇದೀಗ ಉದಯನಿಧಿ ಹೇಳಿಕೆಗೆ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ತಿರುಗೇಟು ನೀಡಿದ್ದಾರೆ.
ಚೆನ್ನೈ: ಸನಾತನ ಧರ್ಮವನ್ನು (Sanatan Dharma) ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು ತೊಲಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ತಮಿಳು ನಟ (Tamil actor) ಕಮ್ ತಮಿಳುನಾಡು ಮಾಜಿ ಡಿಸಿಎಂ (Tamil actor) ಉದಯನಿಧಿ ಸ್ಟಾಲಿನ್ (Udhayanidhi Stalin) ನೀಡಿದ್ದರು. ಇದೀಗ ಉದಯನಿಧಿ ಹೇಳಿಕೆಗೆ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ತಮ್ಮ ಬ್ಲಾಸ್ಟ್ ಸಿನಿಮಾ ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ಅರ್ಜುನ್ ಸರ್ಜಾ, ಸನಾತನ ಧರ್ಮ ಕೇವಲ ಒಂದು ಧರ್ಮವಲ್ಲ, ಅದು ಪವಿತ್ರ ಜೀವನ ವಿಧಾನ ಎಂದಿದ್ದಾರೆ.
2023ರ ಸೆಪ್ಟೆಂಬರ್ನಲ್ಲಿ ಚೆನ್ನೈನಲ್ಲಿ ನಡೆದ ಒಂದು ಸಾಹಿತ್ಯ ಸಮ್ಮೇಳನದಲ್ಲಿ ಉದಯನಿಧಿ ಸ್ಟಾಲಿನ್ ಸತಾನತ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ಸನಾತನ ಧರ್ಮವನ್ನು ವಿರೋಧಿಸುವುದು ಸಾಧ್ಯವಿಲ್ಲ, ಅದನ್ನು ನಿರ್ಮೂಲನೆ ಮಾಡಬೇಕು. ಡೆಂಗ್ಯೂ, ಮಲೇರಿಯಾ, ಕೊರೊನಾ ರೋಗಗಳನ್ನು ನಿರ್ಮೂಲನೆ ಮಾಡುವಂತೆ ಸನಾತನ ಧರ್ಮವನ್ನೂ ನಿರ್ಮೂಲನೆ ಮಾಡಬೇಕು” ಎಂದಿದ್ದರು. ಅಲ್ಲದೇ ಸನಾತನ ಧರ್ಮವು ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತದೆ ಎಂದು ಆರೋಪಿಸಿ, ಅದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದರು.
ಉದಯನಿಧಿ ಸ್ಟಾಲಿನ್ರ ಈ ವಿವಾದಾತ್ಮಕ ಹೇಳಿಕೆಗಳು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಅವರ ವಿರುದ್ಧ ಹಲವಾರು ನ್ಯಾಯಾಲಯಗಳಲ್ಲಿ ಪ್ರಕರಣಗಳು ದಾಖಲಾಗಲು ಕಾರಣವಾಯಿತು. ಕಳೆದ ಬಾರಿ ತಮಿಳುನಾಡು ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಅವರು ಮಾತನಾಡಿದ್ದು, ಹಿಂತಿರುಗಿದ್ದು ಅವರು ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ ಎಂದು ತಿಳಿಸಿದ್ರು.
ಸನಾತನ ಧರ್ಮ ಕೇವಲ ಒಂದು ಧರ್ಮವಲ್ಲ, ಅದು ಪವಿತ್ರ ಜೀವನ ವಿಧಾನ ಅಂತ ಅರ್ಜುನ್ ಸರ್ಜಾ ಹೇಳಿದ್ದಾರೆ. ಸನಾತನ ಧರ್ಮವು ನಮಗೆ ದೇವರಂತೆ. ಜನ್ಮ ನೀಡಿದ ನಮ್ಮ ಹೆತ್ತವರನ್ನು ಹೇಗೆ ಪೂಜಿಸಬೇಕು ಮತ್ತು ಗೌರವಿಸಬೇಕು ಎಂಬುದನ್ನು ಕಲಿಸುವ ಒಂದು ಶ್ರೇಷ್ಠ ಸಂಸ್ಕೃತಿಯಾಗಿದೆ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ನನಗೆ ತಿಳಿದಿರುವಂತೆ ಸನಾತನ ಧರ್ಮ ಒಂದು ಜೀವನ ವಿಧಾನ. ಅದು ಹೇಗೆ ವರ್ತಿಸಬೇಕು, ಕದಿಯಬಾರದು ಮತ್ತು ಅಸೂಯೆ ಪಡಬಾರದು ಎಂಬುದನ್ನು ಕಲಿಸುತ್ತದೆ. ಸನಾತನ ಧರ್ಮವು ಯುವಕರು ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೋ ಹಾಗೆಯೇ ತಮ್ಮ ಹೆತ್ತವರನ್ನು ನೋಡಿಕೊಳ್ಳಬೇಕೆಂದು ನೆನಪಿಸುತ್ತದೆ ಎಂದರು.
ಸನಾತನ ಧರ್ಮವು ನಮ್ಮ ಹೆತ್ತವರನ್ನು ಗೌರವಿಸಲು ಹೇಳುತ್ತದೆ. ನೀವು ನಿಮ್ಮ ಸ್ವಂತ ಹೆತ್ತವರನ್ನು ತಿರಸ್ಕರಿಸಬಹುದೇ? ನೀವು ಅವರನ್ನು ತ್ಯಜಿಸಬಹುದೇ? ಎಂದು ಅಱ್ಜುನ್ ಸರ್ಜಾ ಪ್ರಶ್ನಿಸಿದ್ರು. ಅದಕ್ಕೆ ಉತ್ತರ ಖಂಡಿತವಾಗಿಯೂ ‘ಇಲ್ಲ’ ಎಂದು ಬರುತ್ತದೆ. ಅದೇ ರೀತಿ, ಸನಾತನ ಧರ್ಮವನ್ನು ಯಾರೂ ತಿರಸ್ಕರಿಸಲು ಸಾಧ್ಯವಿಲ್ಲ ಮತ್ತು ಅದನ್ನು ಈ ಭೂಮಿಯಿಂದ ಎಂದಿಗೂ ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಅರ್ಜುನ್ ಸರ್ಜಾ ಉದಯನಿಧಿ ಸ್ಟಾಲಿನ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಸನಾತನ ಧರ್ಮವನ್ನು ಕೀಳಾಗಿ ಕಾಣುವ ಮತ್ತು ಅವಮಾನಿಸುವವರಿಗೆ ಅರ್ಜುನ್ ಸರ್ಜಾ ಅವರು ಕೇಳಿರುವ ಪ್ರಶ್ನೆಗಳು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಇಂತಹ ಟೀಕೆಗಳನ್ನು ಮಾಡುವವರಿಗೆ ಒಂದು ಬಲವಾದ ಸಂದೇಶವನ್ನು ನೀಡಿದ್ದಾರೆ ಅಂತ ಅವರ ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.
May 29, 2026 10:19 PM IST













