ಆಮಿರ್ ಖಾನ್ ಮೂರನೇ ಮದುವೆ ಅತ್ಯಂತ ಸರಳವಾಗಿ ನಡೆದಿದ್ದರೂ, ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಸಮಾರಂಭದಲ್ಲಿ ಕಾಣಿಸದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು.
ಇಬ್ಬರ ನಡುವಿನ ಸಂಬಂಧದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂಬ ಪ್ರಶ್ನೆಗಳೂ ಕೇಳಿಬಂದಿದ್ದವು. ಆದರೆ ಇದೀಗ ಈ ಎಲ್ಲ ಊಹಾಪೋಹಗಳಿಗೆ ಅಮಿನ್ ಹಾಜಿ ತೆರೆ ಎಳೆದಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿನ್ ಹಾಜಿ, ಕಿರಣ್ ರಾವ್ ಮದುವೆಯ ಸಮಯದಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಅವರ ಮಗ ಆಜಾದ್ ಮದುವೆಯಲ್ಲಿ ಭಾಗವಹಿಸಿದ್ದಾನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಕಿರಣ್ ರಾವ್ ಅವರ ಗೈರುಹಾಜರಿಗೆ ವೈಯಕ್ತಿಕ ಕಾರಣವೇ ಇದ್ದದ್ದು ಹೊರತು ಯಾವುದೇ ಭಿನ್ನಾಭಿಪ್ರಾಯವಲ್ಲ ಎಂಬುದು ತಿಳಿದುಬಂದಿದೆ.
ಇಂತಹ ಮಹತ್ವದ ದಿನದಲ್ಲಿ ಯಾರಿಗೂ ಮುಜುಗರವಾಗಬಾರದು ಎಂಬುದು ಆಮಿರ್ ಖಾನ್ ಅವರ ಉದ್ದೇಶವಾಗಿತ್ತು. ಯಾರ ಮೇಲೂ ಯಾವುದೇ ಒತ್ತಡ ಹೇರುವ ವ್ಯಕ್ತಿತ್ವ ಅವರದ್ದಲ್ಲ ಎಂದು ತಿಳಿಸಿದ್ದಾರೆ.
ಆಮಿರ್ ಖಾನ್ ಇಂದಿಗೂ ತಮ್ಮ ಇಬ್ಬರು ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗೆ ಉತ್ತಮ ಸ್ನೇಹ ಹಾಗೂ ಗೌರವದ ಸಂಬಂಧ ಹೊಂದಿದ್ದಾರೆ ಎಂದು ಅಮಿನ್ ಹಾಜಿ ಹೇಳಿದ್ದಾರೆ.
ಆಮಿರ್ ಖಾನ್ ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೌರಿ ಸ್ಪ್ರಾಟ್ ಅವರನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ಪರಿಚಯಿಸಿದ್ದರು.
ಸುಮಾರು 18 ತಿಂಗಳುಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆಯನ್ನು ಖಾಸಗಿಯಾಗಿ ಇಡಲು ಇಬ್ಬರೂ ನಿರ್ಧರಿಸಿದ್ದರಿಂದ, ಸಮಾರಂಭಕ್ಕೆ ಕೆಲವೇ ಆಪ್ತರನ್ನು ಆಹ್ವಾನಿಸಲಾಗಿತ್ತು ಎಂದು ತಿಳಿದುಬಂದಿದೆ.
ಆಮಿರ್ ಖಾನ್ ಮೊದಲಿಗೆ 1986ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. 2002ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.
ನಂತರ 2005ರಲ್ಲಿ ನಿರ್ದೇಶಕಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದ ಆಮಿರ್, 2021ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಟ್ಟರು. ಈ ದಂಪತಿಗೆ ಆಜಾದ್ ಎಂಬ ಮಗನಿದ್ದಾನೆ.
ಇದೀಗ ಗೌರಿ ಸ್ಪ್ರಾಟ್ ಅವರೊಂದಿಗೆ ಅವರು ಮೂರನೇ ಬಾರಿ ವೈವಾಹಿಕ ಜೀವನ ಆರಂಭಿಸಿದ್ದಾರೆ. ಗೌರಿ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಹಿಂದಿನ ಮದುವೆಯಿಂದ ಕ್ವಿನ್ ಎಂಬ ಐದು ವರ್ಷದ ಮಗನಿದ್ದಾನೆ.













