Mithun Chakraborty: ಲೆಜೆಂಡರಿ ಬಾಲಿವುಡ್​ ನಟನಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿದ ಬಿಜೆಪಿ ಸರ್ಕಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮಿಥುನ್ ಚಕ್ರವರ್ತಿ


Last Updated:

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮಿಥುನ್ ಚಕ್ರವರ್ತಿ ಅವರನ್ನು ಪಶ್ಚಿಮ ಬಂಗಾಳ ಸರ್ಕಾರದ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ. ಇದರೊಂದಿಗೆ ಅವರಿಗೆ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯಲ್ಲಿ ಕ್ಯಾಬಿನೆಟ್ ಸಚಿವರ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದೆ.

 ಮಿಥುನ್ ಚಕ್ರವರ್ತಿ
ಮಿಥುನ್ ಚಕ್ರವರ್ತಿ

ಖ್ಯಾತ ನಟ ಮತ್ತು ಬಿಜೆಪಿ ಸ್ಟಾರ್ ಪ್ರಚಾರಕ ಮಿಥುನ್ ಚಕ್ರವರ್ತಿ (Mithun Chakraborty) ಅವರಿಗೆ ಪಶ್ಚಿಮ ಬಂಗಾಳದ (West Bengal) ಬಿಜೆಪಿ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ( Suvendu Adhikari) ಅವರು ಮಿಥುನ್ ಚಕ್ರವರ್ತಿ ಅವರನ್ನು ಪಶ್ಚಿಮ ಬಂಗಾಳ ಸರ್ಕಾರದ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ. ಇದರೊಂದಿಗೆ ಅವರಿಗೆ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯಲ್ಲಿ ಕ್ಯಾಬಿನೆಟ್ ಸಚಿವರ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದೆ. ಈ ಪ್ರಮುಖ ಇಲಾಖೆಯು ಖುದ್ದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಬಳಿಯೇ ಇರುವುದು ವಿಶೇಷ.

ನಟ ಮಿಥುನ್ ಚಕ್ರವರ್ತಿ ಅವರ ನೇಮಕಾತಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಬುಧವಾರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ ಮಿಥುನ್ ಚಕ್ರವರ್ತಿ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಕ್ಯಾಬಿನೆಟ್ ದರ್ಜೆಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಾಜ್ಯಪಾಲರಿಂದಲೂ ಒಪ್ಪಿಗೆ

” ಪಶ್ಚಿಮ ಬಂಗಾಳ ಸರ್ಕಾರದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಕ್ಯಾಬಿನೆಟ್ ಸಚಿವರ ದರ್ಜೆಯ ಸಲಹೆಗಾರರಾಗಿ ಶ್ರೀ ಮಿಥುನ್ ಚಕ್ರವರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ನೇಮಕ ಮಾಡಲು ಗೌರವಾನ್ವಿತ ರಾಜ್ಯಪಾಲರು ಸಂತಸದಿಂದ ಅನುಮೋದನೆ ನೀಡಿದ್ದಾರೆ,” ಎಂದು ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಆದೇಶದ ಮೂಲಕ ಮಿಥುನ್ ಚಕ್ರವರ್ತಿ ಅವರಿಗೆ ಬಂಗಾಳದ ಸಾಂಸ್ಕೃತಿಕ ನೀತಿಗಳನ್ನು ರೂಪಿಸುವಲ್ಲಿ ಸಂಪೂರ್ಣ ಅಧಿಕಾರ ಸಿಕ್ಕಂತಾಗಿದೆ.

ಚಿತ್ರರಂಗದ ಪುನಶ್ಚೇತನಕ್ಕೆ ಮಾಸ್ಟರ್ ಪ್ಲಾನ್

ಲೆಜೆಂಡರಿ ಬಂಗಾಳಿ ನಟ ಉತ್ತಮ್ ಕುಮಾರ್ ಅವರ ಶತಮಾನೋತ್ಸವ ಸಮಾರಂಭದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಬಂಗಾಳದ ಚಿತ್ರರಂಗ ಮತ್ತು ಸಾಂಸ್ಕೃತಿಕ ವಲಯವನ್ನು ಹೊಸದಾಗಿ ಮರುನಿರ್ಮಾಣ ಮಾಡಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಈ ನೇಮಕಾತಿ ನಡೆದಿದೆ. ರಾಜ್ಯವನ್ನು ದೇಶದ ಪ್ರಮುಖ ಸಾಂಸ್ಕೃತಿಕ ಮತ್ತು ಸಿನಿಮಾ ಹಬ್ ಆಗಿ ರೂಪಿಸಲು ಸರ್ಕಾರ ಹಲವು ದೊಡ್ಡ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದು, ಈ ನಿಟ್ಟಿನಲ್ಲಿ ಚಿತ್ರರಂಗದ ಅಪಾರ ಅನುಭವವಿರುವ ಮಿಥುನ್ ಅವರಿಗೆ ಈ ದೊಡ್ಡ ಹೊಣೆ ಹೊರಿಸಲಾಗಿದೆ.

ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ

2021ರಲ್ಲಿ ಬಿಜೆಪಿ ಸೇರಿದ್ದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಪ್ರಮುಖ ಸ್ಟಾರ್ ಪ್ರಚಾರಕರಾಗಿದ್ದಾರೆ. ಇತ್ತೀಚಿನ 2026ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆರೋಗ್ಯ ಸರಿಯಿಲ್ಲದಿದ್ದರೂ ಅವರು ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದರು. ಈ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷವನ್ನು ಸೋಲಿಸಿ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಬಂಗಾಳದಲ್ಲಿ ಸರ್ಕಾರ ರಚಿಸಿದ್ದು, ಸುವೇಂದು ಅಧಿಕಾರಿ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಆಧುನಿಕ ಥಿಯೇಟರ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸರ್ಕಾರ ಬೆಂಬಲ

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಇತ್ತೀಚೆಗಷ್ಟೇ ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿ ‘ಉತ್ತಮ್ ಕುಮಾರ್ ಫಿಲ್ಮ್ ಸೆಂಟರ್’ಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಅಗತ್ಯವಿರುವ ಆಧುನಿಕ ಸೌಲಭ್ಯಗಳನ್ನು ಒದಗಿಸುವುದು ಮತ್ತು ಅತ್ಯಾಧುನಿಕ ಥಿಯೇಟರ್ ಕಾಂಪ್ಲೆಕ್ಸ್ ನಿರ್ಮಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಬಂಗಾಳದ ಚಿತ್ರರಂಗಕ್ಕೆ ಸರ್ಕಾರದ ಕಡೆಯಿಂದ ಹೆಚ್ಚಿನ ಸಹಕಾರ ನೀಡುವ ಸಲುವಾಗಿಯೇ ಮಿಥುನ್ ಚಕ್ರವರ್ತಿ ಅವರನ್ನು ಸಾಂಸ್ಕೃತಿಕ ನೀತಿ ಚೌಕಟ್ಟಿನ ಪ್ರಮುಖ ಹುದ್ದೆಗೆ ತರಲಾಗಿದೆ.

ದಶಕಗಳ ಚಿತ್ರರಂಗದ ಸುದೀರ್ಘ ಅನುಭವ

ಮಿಥುನ್ ಚಕ್ರವರ್ತಿ ಅವರಿಗೆ ಕೇವಲ ರಾಜಕೀಯ ಹಿನ್ನೆಲೆಯಷ್ಟೇ ಅಲ್ಲದೆ, ಬಂಗಾಳಿ ಮತ್ತು ಹಿಂದಿ (ಬಾಲಿವುಡ್) ಚಿತ್ರರಂಗದಲ್ಲಿ ದಶಕಗಳ ಸುದೀರ್ಘ ಅನುಭವವಿದೆ. ಸಿನಿಮಾ ರಂಗದಲ್ಲಿ ಅವರಿಗಿರುವ ಈ ಅಪಾರ ಜ್ಞಾನ ಮತ್ತು ಬಾಂಧವ್ಯವು ಬಂಗಾಳದ ಚಿತ್ರೋದ್ಯಮದ ಧ್ವನಿಗೆ ಸರ್ಕಾರದಲ್ಲಿ ನೇರ ಪ್ರಾತಿನಿಧ್ಯ ಸಿಗುವಂತೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.



Source link

Leave a Reply

Your email address will not be published. Required fields are marked *