4000 EVMs Destroyed: ಪಶ್ಚಿಮ ಬಂಗಾಳ ಚುನಾವಣೆಗೆ ಬಳಸಿದ್ದ 4000 EVMಗಳು ಸುಟ್ಟು ಭಸ್ಮ! ಸರ್ಕಾರಿ ಕಟ್ಟಡದ ಅಗ್ನಿ ದುರಂತದ ಸುತ್ತ ಅನುಮಾನ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

4000 EVMs Destroyed: ಪಶ್ಚಿಮ ಬಂಗಾಳ ಚುನಾವಣೆಗೆ ಬಳಸಿದ್ದ 4000 EVMಗಳು ಸುಟ್ಟು ಭಸ್ಮ! ಸರ್ಕಾರಿ ಕಟ್ಟಡದ ಅಗ್ನಿ ದುರಂತದ ಸುತ್ತ ಅನುಮಾನ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


ದಕ್ಷಿಣ ಕೋಲ್ಕತ್ತಾದ ಅಲಿಪೋರ್ ಪ್ರದೇಶದ ಒಂಬತ್ತು ಅಂತಸ್ತಿನ ಸರ್ಕಾರಿ ಕಟ್ಟಡದಲ್ಲಿ ಗುರುವಾರ ಬೆಳಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಈ ಕಟ್ಟಡದಲ್ಲಿ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳಿವೆ. ಈ ದುರ್ಘಟನೆಯಲ್ಲಿ ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000ಕ್ಕೂ ಹೆಚ್ಚು ಇವಿಎಂಗಳು ಸುಟ್ಟು ಹೋಗಿವೆ ಎಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧರಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆಯ ಸುತ್ತ ಅನುಮಾನದ ಹುತ್ತ?

ಇನ್ನು ಈ ಬೆಂಕಿ ಅವಘಡದ ಸುತ್ತ ಅನುಮಾನದ ಹುತ್ತ ಸೃಷ್ಟಿಯಾಗಿದ್ದು, ಒಂದೆಡೆ ಈ ಘಟನೆಯ ನಂತರ ರಾಜಕೀಯ ವಾತಾವರಣವೂ ಬಿಸಿಯಾಗಿದೆ. ಈ ಪ್ರಕರಣದಲ್ಲಿ ಪಿತೂರಿಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಕೇಂದ್ರ ಸಚಿವ ಸುಕಾಂತ್ ಮಜುಂದಾರ್ ಹೇಳಿದ್ದಾರೆ. ಅತ್ತ ಟಿಎಂಸಿ ‘ಬೆಂಕಿಯಲ್ಲಿ ಬಂಗಾಳದ ಚುನಾವಣೆಯ ರಹಸ್ಯ ಭಸ್ಮವಾಗಿದೆ. ನಾಲ್ಕು ಸಾವಿರ ಇವಿಎಂಗಳು, ನಾಲ್ಕು ಸಾವಿರ ವಿವಿಪ್ಯಾಟ್’ಗಳು ಸುಟ್ಟುಕರಕಲಾಗಿದೆ. ಇದು, ಕಸ್ಬಾ, ಜಾಧವಪುರ, ಬೆಹಲಾ ಪೂರ್ವ, ಬೆಹಲಾ ಪಶ್ಚಿಮ, ಮೆಟಿಯಾಬುರಜ್, ಸಾತ್’ಗಾಚಿಯಾ, ಡೈಮಂಡ್ ಹಾರ್ಬರ್ ಉಪವಿಭಾಗದ ವ್ಯಾಪ್ತಿಗೆ ಬರುವಂತಹ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿದೆ’ ಎಂದು ಹೇಳಿದೆ.

4 ಸಾವಿರ ಇವಿಎಂಗಳು ಸುಟ್ಟುಭಸ್ಮ

ಘಟನಾ ಸ್ಥಳವನ್ನು ಪರಿಶೀಲಿಸಿದ ನಂತರ, ಸಚಿವ ಕೌಶಿಕ್ ಚೌಧರಿ, ಈ ಬೆಂಕಿ ಅವಘಡದಲ್ಲಿ ಸುಮಾರು 4,000 ಇವಿಎಂಗಳು ನಾಶವಾಗಿವೆ ಎಂದು ಹೇಳಿದರು. ಈ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ 10 ಕ್ಷೇತ್ರಗಳಲ್ಲಿ ಈ ಇವಿಎಂಗಳನ್ನು ಬಳಸಲಾಗಿತ್ತು. ಇದು ಸಾಮಾನ್ಯ ಬೆಂಕಿ ಅವಘಡದಂತೆ ಕಾಣುತ್ತಿಲ್ಲ. ಯಾವುದೇ ವಿಧ್ವಂಸಕ ಕೃತ್ಯ ಅಥವಾ ಬೆಂಕಿ ಹಚ್ಚಿ ಕೃತ್ಯ ಎಸಗಲಾಗಿದೆಯೇ ಎಂದು ನಿರ್ಧರಿಸಲು ತನಿಖೆ ನಡೆಯುತ್ತಿದೆ. ಬೆಂಕಿ ಒಂಬತ್ತನೇ ಮತ್ತು ಹತ್ತನೇ ಮಹಡಿಗೆ ಹೇಗೆ ತಲುಪಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸಚಿವರ ಹೇಳಿಕೆ ಪ್ರಕಾರ, ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಆದರೆ, ನಂತರ ಬೆಂಕಿ ನೇರವಾಗಿ ಏಳನೇ ಮತ್ತು ಎಂಟನೇ ಮಹಡಿಗಳಿಗೆ ಹೇಗೆ ಹರಡಿದೆ, ನಾಲ್ಕನೇ, ಐದನೇ ಮತ್ತು ಆರನೇ ಮಹಡಿಗಳ ಮೇಲೆ ಬೆಂಕಿ ಕಡಿಮೆ ಪರಿಣಾಮ ಬೀರಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

‘ನಾಲ್ಕನೇ, ಐದನೇ ಮತ್ತು ಆರನೇ ಮಹಡಿಗಳಿಗೆ ಗಮನಾರ್ಹವಾಗಿ ಪರಿಣಾಮ ಬೀರದೆ ನೇರವಾಗಿ ಬೆಂಕಿ ಏಳನೇ ಮತ್ತು ಎಂಟನೇ ಮಹಡಿಗೆ ಹೇಗೆ ತಲುಪಿತು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಇಡೀ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಪಡೆಯಲು ನಾವು ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಚೌಧರಿ ಹೇಳಿದರು.

24 ಗಂಟೆಗಳ ನಂತರವೂ ಬೆಂಕಿ ನಂದಿಸುವ ಪ್ರಯತ್ನ

ಈತನ್ಮಧ್ಯೆ, ಬೆಂಕಿ ಕಾಣಿಸಿಕೊಂಡು ಸುಮಾರು 24 ಗಂಟೆಗಳಾದರೂ, ಅಗ್ನಿಶಾಮಕ ದಳದವರು ನಿನ್ನೆಯೂ ಸ್ಥಳದಲ್ಲಿದ್ದು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಪ್ರಯತ್ನಿಸುತ್ತಿದ್ದರು. ಬೆಳಿಗ್ಗೆ ಯಾವುದೇ ದೊಡ್ಡ ಜ್ವಾಲೆಗಳು ಗೋಚರಿಸದಿದ್ದರೂ, ಕಟ್ಟಡದ ಕೆಲವು ಭಾಗಗಳು ಹೊಗೆಯಾಡುತ್ತಿರುವ ಸಾಧ್ಯತೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘ಕಟ್ಟಡದ ಒಳಗೆ ಇನ್ನೂ ಕೆಲವು ಸ್ಥಳಗಳಲ್ಲಿ ಬೆಂಕಿ ಇದೆ. ಅದನ್ನು ಸಂಪೂರ್ಣವಾಗಿ ನಂದಿಸಬೇಕಾಗಿದೆ. ಪ್ರಸ್ತುತ ತಂಪಾಗಿಸುವ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಫ್‌ಐಆರ್ ದಾಖಲು; ಪೊಲೀಸ್ ತನಿಖೆ ಪ್ರಗತಿಯಲ್ಲಿ

ಘಟನೆಯ ನಂತರ, ದಕ್ಷಿಣ 24 ಪರಗಣ ಆಡಳಿತವು ಅಲಿಪುರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿ, ಸಮಗ್ರ ತನಿಖೆಗೆ ಒತ್ತಾಯಿಸಿದೆ. ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ) ಈ ದೂರು ದಾಖಲಿಸಿದ ನಂತರ, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದರು.

ಕಟ್ಟಡಕ್ಕೆ ಬೀಗ ಜಡಿದ ಅಧಿಕಾರಿಗಳು; ಪ್ರವೇಶ ನಿಷೇಧ

ಬೆಂಕಿಯ ಕಾರಣವನ್ನು ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಬೆಂಕಿಯ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಕಟ್ಟಡವನ್ನು ಸೀಲ್ ಮಾಡಲಾಗಿದೆ ಮತ್ತು ಪ್ರವೇಶ ಮತ್ತು ನಿರ್ಗಮನವನ್ನು ನಿಷೇಧಿಸಲಾಗಿದೆ. ಬೆಂಕಿ ಹಲವಾರು ಮಹಡಿಗಳಿಗೆ ಹೇಗೆ ಹರಡಿತು ಎಂಬುದನ್ನು ತನಿಖೆ ಮಾಡಲು ಪೊಲೀಸರು ಕಟ್ಟಡದ ಪ್ರದೇಶದಲ್ಲಿ ಭದ್ರತೆ ಮತ್ತು ಕಣ್ಗಾವಲು ಹೆಚ್ಚಿಸಿದ್ದಾರೆ.

ಎಲ್ಲರ ಚಿತ್ತ ವಿಧಿವಿಜ್ಞಾನ ತನಿಖೆಯತ್ತ

ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತಲುಪಿ ವಿವಿಧ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬುದನ್ನು ಸ್ಪಷ್ಟಪಡಿಸಲು ತನಿಖೆ ಸಹಾಯ ಮಾಡುತ್ತದೆ. ಅಧಿಕಾರಿಗಳ ಪ್ರಕಾರ, ವಿಧಿವಿಜ್ಞಾನ ತನಿಖೆಯ ಸಂಶೋಧನೆಗಳು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾಗಿವೆ.

ಒಟ್ಟಿನಲ್ಲಿ ಈ ಘಟನೆ ಮೇಲ್ನೋಟಕ್ಕೆ ಆಕಸ್ಮಿಕ ಬೆಂಕಿಯಿಂದ ಉಂಟಾಗಿರುವಂತೆ ಕಾಣುತ್ತಿಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರದಂತೆ ಕಾಣುತ್ತಿದ್ದು, ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸಿದರೆ ಇದರ ಹಿಂದಿನ ಸತ್ಯಾಸತ್ಯತೆ ಹೊರಬರಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports