Last Updated:
Prakash Raj: ಬುರುಡೆ ಕೇಸ್ ಬಗ್ಗೆ ದಿಢೀರ್ ಪೋಸ್ಟ್ ಮಾಡಿದ್ಯಾಕೆ ಪ್ರಕಾಶ್ ರಾಜ್? ಎಕ್ಸ್ ಪೋಸ್ಟ್ ಹಿಂದಿನ ಅರ್ಥ ಏನು?
ಧರ್ಮಸ್ಥಳ (Dharmasthala) ಗ್ರಾಮದ ಬುರುಡೆ ಪ್ರಕರಣ ಭಾರೀ ಸದ್ದು ಮಾಡುತ್ತಿರುವಾಗಲೇ ಪ್ರಕಾಶ್ ರಾಜ್ ಅವರ ಎಕ್ಸ್ ಪೋಸ್ಟ್ ಕೂಡಾ ವೈರಲ್ ಆಗಿದೆ. ಅಷ್ಟಕ್ಕೂ ದಿಢೀರ್ ಆಗಿ ನಟ ಪ್ರಕಾಶ್ ರಾಜ್ ಅವರು ಪೋಸ್ಟ್ ಮಾಡಿದ್ಯಾಕೆ? ಅದರ ಹಿಂದಿನ ಕಾರಣ ಏನು?
ತನಿಖಾ ವರದಿ ಬಹಿರಂಗಪಡಿಸುವಂತೆ ಮನವಿ ಮಾಡಿ ಚಿನ್ನಯ್ಯ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ ಮತ್ತು ಎಸ್‌ಐಟಿಗೆ ಗುರುವಾರ ನೋಟಿಸ್ ಜಾರಿಗೊಳಿಸಿದೆ. ಇದೇ ವೇಳೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ವಿರುದ್ಧ ನಟ ಪ್ರಕಾಶ್ ರಾಜ್, ಗಿರೀಶ್ ಮಟ್ಟಣ್ಣವರ್ ಮತ್ತಿತರರು ಸುಮಾರು 200 ಕೋಟಿ ರೂ. ಷಡ್ಯಂತ್ರ ರೂಪಿಸಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಿದ್ದು ಭಾರೀ ಗದ್ದಲಕ್ಕೆ ಕಾರಣವಾಯಿತು.
ಆದರೆ ಪ್ರಕಾಶ್ ರಾಜ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಅರ್ಜಿದಾರ ಚಿನ್ನಯ್ಯ ಅರ್ಜಿದಾರರನ್ನು ಕೇರಳದ ಮುಡಾಯಿಕಾವು ದೇವಸ್ಥಾನಕ್ಕೆ ಹಾಗೂ ನಂತರ ಒಂದು ರೆಸಾರ್ಟ್‌ಗೆ ಕರೆದೊಯ್ದರು. ಅಲ್ಲಿ ಅವರು 2 ದಿನ ತಂಗಿದರು. ಒಂದು ರಾತ್ರಿ ಸುಮಾರು 8 ಗಂಟೆಗೆ ಗಿರೀಶ್ ಮಟ್ಟಣ್ಣವರ್ ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ, ಅರ್ಜಿದಾರರಿಗೆ ಫೋನ್ ನೀಡಿದರು ಎನ್ನಲಾಗಿದೆ.
ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ, ಗಿರೀಶ್ ಮಟ್ಟಣ್ಣವರ್ ಹೇಳಿಕೊಟ್ಟಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡಬೇಕೆಂದು ಮತ್ತು ತಾವು 29 ನೇ ತಾರೀಕಿಗೆ ಬಂದು ಅಪ್ಪಿಕೊಳ್ಳುವುದಾಗಿ ಹೇಳಿದರು ಎಂದು ಅರ್ಜಿದಾರರು ತಿಳಿಸಿದ್ದಾರೆ.
ಎಲ್ಲರಿಗು ನಮಸ್ಕಾರ.. ಮಾಧ್ಯಮಗಳಲ್ಲಿ ಸಾಮಾಜಿಕ ಜಲತಾಣಗಳಲ್ಲಿ ಧರ್ಮಸ್ತಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿ ಚರ್ಚಿಸಲ್ಪಡುತ್ತಿರುವು ನನ್ನ ಗಮನಕ್ಕೆ ಬಂದಿದೆ. ಇದು ಅತಿ ಸೂಕ್ಷ್ಮವಾದ ಮತ್ತು ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿರುವುದರಿಂದ ಈ ರೀತಿಯ ಅನುಮಾನಗಳಿಗೆ ಉತ್ತರಿಸಬೇಕಾಗಿರುವುದು ನನ್ನ ಕರ್ತವ್ಯವೂ ಆಗಿದೆ.

ನಾನು ದೂರದೂರಿನಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಸ್ವತಃ ಬಂದು ಮಾಧ್ಯಮ ಮಿತ್ರರ ಮುಖೇನ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಗಾಳಿಮಾತುಗಳನ್ನು ಮತ್ತು ಕೆಲವು ದುರುಳರು ಈ ಸುದ್ದಿಗೆ ಕಟ್ಟಲು ಯತ್ನಿಸುತ್ತಿರುವ ರೆಕ್ಕೆ ಪುಕ್ಕಗಳನ್ನು ನಂಬದಿರಿ ಎಂದು ನಗುವ ಎಮೋಜಿಗಳನ್ನು ಹಾಕಿದ್ದಾರೆ ಪ್ರಕಾಶ್ ರಾಜ್.
Bangalore [Bangalore],Bangalore,Karnataka
Jun 13, 2026 10:14 AM IST













