ನೆರೆಯ ಬಾಂಗ್ಲಾದೇಶದಲ್ಲಿ ವಿಶ್ವದ ಅತಿ ದೊಡ್ಡ ಪ್ರಭು ಶ್ರೀರಾಮನ ಪ್ರತಿಮೆಯನ್ನ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ಇದೀಗ ಪ್ರತಿಮೆಯ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಗೈಬಂಧ ಜಿಲ್ಲೆಯ ಪಲಾಶ್ಬರಿ ಉಪಜಿಲ್ಲೆಯಲ್ಲಿರುವ ಶ್ರೀ ಶ್ರೀ ರಾಧಾಗೋವಿಂದ ಮತ್ತು ಕಾಳಿ ದೇವಾಲಯ ಸಂಕೀರ್ಣದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗುತ್ತಿತ್ತು. ಆದಾಗ್ಯೂ, ನಿಷೇಧವು ಈಗ ಸ್ಥಳದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಈ ಪ್ರತಿಮೆ ಕಾರ್ಯ ಸ್ಥಗಿತವನ್ನ ದೇವಾಲಯದ ಮುಖ್ಯ ಸಲಹೆಗಾರ ಶ್ಯಾಮಲ್ ಕುಮಾರ್ ಮಹಂತ್ ಅವರು ಘೋಷಣೆ ಮಾಡಿದ್ದು, ಈ ಘೋಷಣೆಯ ಹಿಂದೆ, ಪ್ರತಿಮೆಯ ಯೋಜನೆಯನ್ನ ವಿರೋಧಿಸುತ್ತಿದ್ದ ಇಸ್ಲಾಮಿಕ್ ಸಂಘಟನೆಗಳ ಒತ್ತಡ ಕಾರಣ ಎನ್ನುವ ಸುದ್ದಿಯೂ ಕೇಳಿ ಬರುತ್ತಿದೆ. ಹಾಗಾಗಿಯೇ, ದೇವಾಲಯದ ಆಡಳಿತ ಮಂಡಳಿಯು ಪ್ರತಿಮೆಯ ನಿರ್ಮಾಣ ಕಾರ್ಯದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.
ಇನ್ನು, ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತಕ್ಕೆ, ಬಾಂಗ್ಲಾದೇಶ ಮೂಲದ ಲೇಖಕಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ತಸ್ಲೀಮಾ ನಸ್ರೀನ್ ಅವರು ಖಂಡಿಸುತ್ತಾ, “ಲಕ್ಷಾಂತರ ಮಸೀದಿಗಳು ಮತ್ತು ಹೊಸ ಮಸೀದಿಗಳು ನಿರಂತರವಾಗಿ ನಿರ್ಮಾಣವಾಗುತ್ತಿರುವಾಗ, ಒಂದೇ ಹಿಂದೂ ದೇವಾಲಯದ ನಿರ್ಮಾಣವನ್ನು ಏಕೆ ವಿರೋಧಿಸಲಾಗುತ್ತಿದೆ” ಎಂದು ಪ್ರಶ್ನಿಸಿದ್ದಾರೆ. “ಬಾಂಗ್ಲಾದೇಶದಲ್ಲಿ ಲಕ್ಷಾಂತರ ಮಸೀದಿಗಳಿವೆ ಮತ್ತು ದೇಶಾದ್ಯಂತ ಹೊಸ ಮಸೀದಿಗಳು ನಿರಂತರವಾಗಿ ನಿರ್ಮಾಣವಾಗುತ್ತಿವೆ. ಹಾಗಾದರೆ ರಾಮನ ದೇವಾಲಯ ಅಥವಾ ಪ್ರತಿಮೆಯ ನಿರ್ಮಾಣಕ್ಕೆ ಇಷ್ಟೊಂದು ವಿರೋಧ ಏಕೆ? ಧಾರ್ಮಿಕ ಸ್ವಾತಂತ್ರ್ಯ ಎಲ್ಲರಿಗೂ ಇದ್ದರೆ, ಅದು ಬಹುಸಂಖ್ಯಾತರಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರಿಗೂ ಇರಬೇಕು” ಎಂದು ಅವರು ತಮ್ಮ ಎಕ್ಸ್ನಲ್ಲಿ ಬರೆದಿದ್ದಾರೆ.
ಮುಂದುವರೆದು, “ಗೈಬಂಧದ ಪಲಾಶ್ಬರಿಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಸೃಷ್ಟಿಸಲಾಗುತ್ತಿರುವ ಬೆದರಿಕೆಗಳು, ಪ್ರಚೋದನಕಾರಿ ಹೇಳಿಕೆಗಳು ಮತ್ತು ದ್ವೇಷ ಹರಡುವಿಕೆ ತೀವ್ರ ಕಳವಳಕಾರಿಯಾಗಿದೆ. ಯಾವುದೇ ವ್ಯಕ್ತಿ ಅಥವಾ ಗುಂಪು ಇನ್ನೊಂದು ಸಮುದಾಯಕ್ಕೆ ಸೇರಿದ ಪೂಜಾ ಸ್ಥಳವನ್ನು ಇಷ್ಟಪಡದ ಕಾರಣ ಅದನ್ನು ನಾಶಮಾಡುವ ಹಕ್ಕನ್ನು ಹೊಂದಿಲ್ಲ. ಕಾನೂನಿನಿಂದ ನಿಯಂತ್ರಿಸಲ್ಪಡುವ ದೇಶದಲ್ಲಿ, ಧಾರ್ಮಿಕ ವಿವಾದಗಳನ್ನು ಹಿಂಸಾಚಾರ ಅಥವಾ ವಿಧ್ವಂಸಕ ಕೃತ್ಯಗಳ ಮೂಲಕ ಪರಿಹರಿಸಲಾಗುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಇಂಡೋನೇಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಮಲೇಷ್ಯಾ ಮತ್ತು ಒಮಾನ್ನಂತಹ ಪ್ರಪಂಚದಾದ್ಯಂತದ ಅನೇಕ ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ದೊಡ್ಡ ಹಿಂದೂ ದೇವಾಲಯಗಳು ಅಸ್ತಿತ್ವದಲ್ಲಿವೆಯೇ ಎಂದು ಪ್ರಶ್ನಿಸಿದ ಅವರು, ಅಲ್ಲಿ ದೇವಾಲಯಗಳ ಉಪಸ್ಥಿತಿಯನ್ನು ಬೆದರಿಕೆಯಾಗಿ ಗ್ರಹಿಸಲಾಗಿಲ್ಲ. ಹಾಗಾದರೆ ಕೆಲವರು ಬಾಂಗ್ಲಾದೇಶದಲ್ಲಿ ದೇವಾಲಯ ನಿರ್ಮಾಣವನ್ನು ಯಾಕೆ ದೊಡ್ಡ ಸಮಸ್ಯೆಯನ್ನಾಗಿ ಮಾಡುತ್ತಿದ್ದಾರೆ? ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಬಾಂಗ್ಲಾದೇಶದ ಪತ್ರಿಕೆ ‘ಬ್ಲಿಟ್ಜ್’ ನ ಸಂಪಾದಕ ಸಲಾವುದ್ದೀನ್ ಶೋಯೆಬ್ ಚೌಧರಿ ಕೂಡ ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳ ಒತ್ತಡದ ನಡುವೆ ಗೈಬಂಧದಲ್ಲಿ ದೇವಾಲಯ ನಿರ್ಮಾಣ ಸ್ಥಗಿತಗೊಂಡಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, “ಸ್ಥಳೀಯ ಜಿಹಾದಿ ಮತ್ತು ಇಸ್ಲಾಮಿಕ್ ಗುಂಪುಗಳ ಬೃಹತ್ ಪ್ರತಿಭಟನೆಗಳ ನಡುವೆ ಬಾಂಗ್ಲಾದೇಶದ ಗೈಬಂಧ ಜಿಲ್ಲೆಯಲ್ಲಿ ನಡೆಯುತ್ತಿರುವ ಸನಾತನ ಸಂಕೀರ್ಣದಲ್ಲಿ ಶ್ರೀರಾಮನ ಪ್ರತಿಮೆಯ ಎಲ್ಲಾ ಚಟುವಟಿಕೆಗಳು ಮತ್ತು ನಿರ್ಮಾಣವನ್ನು ನಿಲ್ಲಿಸುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ” ಎಂದು ಬರೆದಿದ್ದಾರೆ.
ಬಾಂಗ್ಲಾದೇಶದ ರಂಗ್ಪುರ ವಿಭಾಗದ ಗೈಬಂಧ ಜಿಲ್ಲೆಯ ಪಲಾಶ್ಬರಿ ಪ್ರದೇಶದಲ್ಲಿ, ಸುಮಾರು 22 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿತ್ತು. ಈ ಯೋಜನೆಯನ್ನು ಸಮಾಜ ಸೇವಕ ಶ್ರೀ ಹರಿದಾಸ್ ಬಾಬು ಪ್ರಾರಂಭಿಸಿದರು. ಕ್ರಮೇಣ, ಈ ಸಂಕೀರ್ಣವು ಬಾಂಗ್ಲಾದೇಶದ ಅತಿದೊಡ್ಡ ಸಾಂಪ್ರದಾಯಿಕ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗುತ್ತದೆ ಎನ್ನಲಾಗಿದೆ. ಇನ್ನೂ, ದೇವಾಲಯ ಸಂಕೀರ್ಣದೊಳಗೆ ಸುಮಾರು 50 ಅಡಿ ಎತ್ತರದ ಶ್ರೀಕೃಷ್ಣನ ಪ್ರತಿಮೆಯನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ಭಕ್ತರು ಮತ್ತು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಲಿದೆ.












