Team India: 2027ರ ವಿಶ್ವಕಪ್​​ ತಂಡದಲ್ಲಿ ಕೊಹ್ಲಿ ಸ್ಥಾನ ಖಚಿತವಾಗಿದ್ಯಾ? ಇಲ್ವಾ? ಮಹತ್ವದ ಹಿಂಟ್ ಕೊಟ್ಟ ನಾಯಕ ಶುಭ್​ಮನ್ ಗಿಲ್ | ಕ್ರೀಡಾ ಸುದ್ದಿ | ACTPnews

ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಶುಭ್​ಮನ್ ಗಿಲ್


Last Updated:

ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯ ಬಗ್ಗೆ ನಿರಂತರ ಊಹಾಪೋಹಗಳಿವೆ. ಈ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಗಿಲ್, ಕೊಹ್ಲಿ ಅವರು 2027 ಆಫ್ರಿಕಾ ವಿಶ್ವಕಪ್‌ಗೆ ತಂಡದ ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಶುಭ್​ಮನ್ ಗಿಲ್
ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಶುಭ್​ಮನ್ ಗಿಲ್

ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಶತಾಯಗತಾಯ ಏಕದಿನ ವಿಶ್ವಕಪ್ (ODI World Cup) ಆಡಿಯೇ ನಿವೃತ್ತಿಯಾಗಬೇಕೆಂದು ನಿರ್ಧರಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆಯ್ಕೆ ಸಮಿತಿ ಹಾಗೂ ಮ್ಯಾನೇಜ್​ಮೆಂಟ್ ಇದುವರೆಗೂ ಅವರಿಬ್ಬರ ಸ್ಥಾನದ ಬಗ್ಗೆ ಒಮ್ಮೆಯೂ ಭರವಸೆ ನೀಡಿಲ್ಲ. ಬದಲಾಗಿ ಹಾರಿಕೆ ಉತ್ತರ ನೀಡುತ್ತಾ ಬಂದಿತ್ತು. ಆದರೆ ಭಾರತ ಏಕದಿನ ತಂಡದ ನಾಯಕ ಶುಭ್​​ಮನ್ ಗಿಲ್ (Shubman Gill) ನೀಡಿರುವ ಒಂದು ಹೇಳಿಕೆ ಕೊಹ್ಲಿ ಏಕದಿನ ವಿಶ್ವಕಪ್​​ ತಂಡದಲ್ಲಿ ಇರಲಿದ್ದಾರೆ ಎನ್ನುವುದನ್ನ ಖಚಿತಪಡಿಸಿದೆ. ತಾವೂ 2027 ಒಡಿಐ ವಿಶ್ವಕಪ್ ಯೋಜನೆಗಳ ಬಗ್ಗೆ ವಿರಾಟ್ ಅವರೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಒಡಿಐ ಪಂದ್ಯಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಿಲ್ ಅವರು ಈ ಮಾಹಿತಿ ನೀಡಿದ್ದಾರೆ. ಇದು ಕೊಹ್ಲಿ ಅವರು 2027 ವಿಶ್ವಕಪ್‌ನಲ್ಲಿ ಭಾಗವಹಿಸುವುದು ಖಚಿತವಾಗಿದೆ ಎಂಬ ಸಂದೇಶವನ್ನು ನೀಡಿದೆ.

ತಂಡದ ಸಂಯೋಜನೆಯ ಬಗ್ಗೆ ಕೊಹ್ಲಿ ಜೊತೆ ಚರ್ಚೆ

ಕೊಹ್ಲಿ, ರೋಹಿತ್ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಗಿಲ್ ಪ್ರತಿಕ್ರಿಯಿಸಿದರು. ” ಒಂದೆರಡು ದಿನಗಳ ಹಿಂದೆ ನಾನು ವಿರಾಟ್ ಅವರೊಂದಿಗೆ 2027 ಒಡಿಐ ವಿಶ್ವಕಪ್ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ತಂಡದ ಸಂಯೋಜನೆಗಳು, ಯಾವ ಆಟಗಾರರು ತಂಡದಲ್ಲಿ ಇರುತ್ತಾರೆ, ಪ್ರಸ್ತುತ ತಂಡದಲ್ಲಿ ಇಲ್ಲದಿದ್ದರೂ ಆ ಸಮಯಕ್ಕೆ ಯಾರು ತಂಡಕ್ಕೆ ನೆರವಾಗಬಲ್ಲಂತಹ ಆಟಗಾರರು ಯಾರು ಮತ್ತು ಪ್ರತಿ ಆಟಗಾರನ ಸ್ಥಾನ ಎಲ್ಲಿ ಸರಿಹೊಂದುತ್ತದೆ ಎಂಬುದನ್ನು ಚರ್ಚಿಸಿದ್ದೇವೆ” ಎಂದು ಗಿಲ್ ತಿಳಿಸಿದರು. ಸ್ವತಃ ನಾಯಕನ ಈ ಹೇಳಿಕೆ ಕೊಹ್ಲಿ ಅವರು ತಂಡದಲ್ಲಿ ಮಾತ್ರವಲ್ಲ, ನಾಯಕತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನ ಖಚಿತಪಡಿಸಿದೆ.

ನಾಯಕತ್ವದ ತಂಡದಲ್ಲಿ ಕೊಹ್ಲಿ

ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯ ಬಗ್ಗೆ ನಿರಂತರ ಊಹಾಪೋಹಗಳಿವೆ. ಈ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಗಿಲ್, ಕೊಹ್ಲಿ ಅವರು 2027 ಆಫ್ರಿಕಾ ವಿಶ್ವಕಪ್‌ಗೆ ತಂಡದ ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಭರವಸೆ ನೀಡಿದ್ದಾರೆ. ಕೊಹ್ಲಿ ಕೂಡ ತಾವು ಯಾರಿಗಾದರೂ ತಮ್ಮ ಸಾಮರ್ಥ್ಯವನ್ನ ಸಾಬೀತು ಮಾಡಬೇಕಾದ ಅನಿವಾರ್ಯತೆ ಬಂದರೆ, ಆ ತಂಡದಲ್ಲಿ ಇರಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಸ್ವತಃ ಗಿಲ್ ಕೊಹ್ಲಿ ಹೆಸರನ್ನ ನಾಯಕತ್ವದ ಪಾತ್ರದಲ್ಲಿದ್ದಾರೆ ಎಂದು ತಿಳಿಸುವ ಮೂಲಕ ಕೊಹ್ಲಿ ತಂಡದ ಅವಿಭಾಜ್ಯ ಅಂಗವಾಗಿರುವುದು ಖಚಿತವಾಗಿದೆ.

ಅವರಿಬ್ಬರು ತಂಡದ ಬೆನ್ನೆಲುಬು

ತಮ್ಮ ಮಾತನ್ನ ಮುಂದುವರಿಸಿದ ಗಿಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಭಾರತ ಬ್ಯಾಟಿಂಗ್ ಲೈನ್‌ಅಪ್‌ನ ಬೆನ್ನೆಲುಬು ಎಂದು ವಿವರಿಸಿದ್ದಾರೆ. “ ಕಳೆದ ಹತ್ತು ವರ್ಷಗಳಿಂದ ರೋಹಿತ್ ಮತ್ತು ವಿರಾಟ್ ತಂಡದ ಮುಖ್ಯ ಆಧಾರ ಸ್ತಂಭಗಳಾಗಿದ್ದಾರೆ. ಅವರ ಅನುಭವ ಮತ್ತು ಕೌಶಲ್ಯ ತಂಡಕ್ಕೆ ಅತ್ಯಂತ ಮುಖ್ಯವಾಗಿದೆ. ವಿವಿಧ ಪರಿಸ್ಥಿತಿಗಳಲ್ಲಿ ಅವರು ಏನೇನು ಮಾಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ” ಎಂದು ಹೇಳಿದ್ದಾರೆ. ವಯಸ್ಸಿನ ಪ್ರಶ್ನೆಗಳಿದ್ದರೂ ಅವರನ್ನು ತಂಡದ ಅವಿಭಾಜ್ಯ ಅಂಗವೆಂದು ಗಿಲ್ ಒತ್ತಿ ಹೇಳಿದ್ದಾರೆ.

ನಾಯಕತ್ವದ ಪಾಠ ಮತ್ತು ಮಾರ್ಗದರ್ಶನ

ನಾಯಕರು ಹೇಗೆ ಜವಾಬ್ದಾರಿಯಿಂದ ವರ್ತಿಸಬೇಕು ಎಂಬುದನ್ನು ನಾನು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರಿಂದ ಕಲಿಯುತ್ತಿದ್ದೇನೆ .ಮೈದಾನದಲ್ಲಿ ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ, ಕೊಹ್ಲಿ ಮತ್ತು ರೋಹಿತ್ ಅವರ ಬಳಿ ಹೋಗಿ ಸಲಹೆ ಅಥವಾ ಮಾರ್ಗದರ್ಶನ ಪಡೆಯಲು ನಾನು ಎಂದಿಗೂ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಅವರಿಬ್ಬರಲ್ಲಿರುವ ಕೌಶಲ್ಯ ಮತ್ತು ಅನುಭವ ಜಗತ್ತಿನ ಬೇರೆ ಯಾವ ಆಟಗಾರರಲ್ಲೂ ಸಿಗುವುದು ಅಪರೂಪ. ಅಂತಹ ಅನುಭವಿ ಆಟಗಾರರ ಬೆಂಬಲ ತಂಡಕ್ಕೆ ತುಂಬಾ ಮೌಲ್ಯಯುತವಾಗಿದೆ ಎಂದು ಗಿಲ್ ಕೊಂಡಾಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports