Last Updated:
ಇತ್ತೀಚೆಗೆ ಬಿಡುಗಡೆಯಾದ ಸ್ಪೈಡರ್ ಮ್ಯಾನ್ ಬ್ರ್ಯಾಂಡ್ ನ್ಯೂ ಡೇ (Spider-Man: Brand New Day) ಚಿತ್ರದ ಪ್ರದರ್ಶನದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಿನಿಮಾ ಪ್ರಿಯರಿಗೆ ಚಿತ್ರಮಂದಿರದಲ್ಲಿ ಕುಳಿತು ಯಾವುದೇ ಅಡ್ಡಿಆತಂಕವಿಲ್ಲದೆ ಸಿನಿಮಾ ನೋಡುವ ಅನುಭವವೇ ವಿಶೇಷ. ಆದರೆ ಇತ್ತೀಚೆಗೆ ಬಿಡುಗಡೆಯಾದ ಸ್ಪೈಡರ್ ಮ್ಯಾನ್ ಬ್ರ್ಯಾಂಡ್ ನ್ಯೂ ಡೇ (Spider-Man: Brand New Day) ಚಿತ್ರದ ಪ್ರದರ್ಶನದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿನಿಮಾದ ಕಥೆಯ ಪ್ರಮುಖ ತಿರುವುಗಳನ್ನು ಜೋರಾಗಿ ಹೇಳುತ್ತಿದ್ದ ಯುವಕನನ್ನು ಪ್ರಶ್ನಿಸಿದ ಪ್ರೇಕ್ಷಕರೊಂದಿಗೆ ವಾಗ್ವಾದ ನಡೆದು, ಅದು ತಳ್ಳಾಟ ಮತ್ತು ಗಲಾಟೆಯವರೆಗೆ ತಲುಪಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ವೈರಲ್ ಆಗಿರುವ ಮಾಹಿತಿಯ ಪ್ರಕಾರ, ನಾಲ್ವರು ಸ್ನೇಹಿತರು ಬಹುನಿರೀಕ್ಷಿತ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ತೆರಳಿದ್ದರು. ಅವರ ಪಕ್ಕದ ಆಸನದಲ್ಲಿ ಒಬ್ಬ ಯುವಕ ಹಾಗೂ ಆತನ ಸ್ನೇಹಿತೆ ಕುಳಿತಿದ್ದರು. ಈ ವೇಳೆ ಸಿನಿಮಾದ ಕಥೆಯನ್ನು ವಿವರಿಸುತ್ತಿದ್ದ ಯುವಕನಿಂದಲೇ ಗಲಾಟೆಗೆ ನಾಂದಿ ಹಾಡಲಾಗಿದೆ ಎನ್ನಲಾಗಿದೆ.
🚨 A fight reportedly broke out during a Spider-Man: Brand New Day screening after a moviegoer allegedly kept spoiling major scenes for others in the theater.
A reminder to everyone: if you’ve already seen the movie, don’t ruin the experience for others. Keep the spoilers to…— Global Social News (@GlobalSociaNews) August 3, 2026
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳ ಪ್ರಕಾರ, ಸಂಬಂಧಿತ ಯುವಕ ಈಗಾಗಲೇ ಈ ಸಿನಿಮಾವನ್ನು ಒಮ್ಮೆ ವೀಕ್ಷಿಸಿದ್ದ. ಎರಡನೇ ಬಾರಿ ತನ್ನ ಸ್ನೇಹಿತೆಯೊಂದಿಗೆ ಸಿನಿಮಾ ನೋಡಲು ಬಂದಿದ್ದ ಆತ, ಪ್ರದರ್ಶನ ನಡೆಯುತ್ತಿದ್ದಂತೆಯೇ ಮುಂದಿನ ದೃಶ್ಯಗಳಲ್ಲಿ ಏನಾಗಲಿದೆ, ಕಥೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಜೋರಾಗಿ ಹೇಳಲು ಆರಂಭಿಸಿದ್ದಾನೆ ಎನ್ನಲಾಗಿದೆ.
ಮುಂದಿನ ದೃಶ್ಯಗಳ ಬಗ್ಗೆ ನಿರಂತರವಾಗಿ ಹೇಳುತ್ತಿದ್ದ ಯುವಕನ ವರ್ತನೆಯಿಂದ ಪಕ್ಕದಲ್ಲಿದ್ದ ನಾಲ್ವರು ಪ್ರೇಕ್ಷಕರ ಸಿನಿಮಾ ನೋಡುವ ಅನುಭವ ಹಾಳಾಯಿತು ಎಂದು ಹೇಳಲಾಗಿದೆ. ಮೊದಲಿಗೆ ಅವರು ಶಾಂತವಾಗಿ ಕಥೆ ಹೇಳದಂತೆ ಮನವಿ ಮಾಡಿದರೂ, ಆತ ಅದನ್ನು ಮುಂದುವರಿಸಿದ್ದಾನೆ ಎಂದು ವೈರಲ್ ಪೋಸ್ಟ್ಗಳಲ್ಲಿ ಉಲ್ಲೇಖಿಸಲಾಗಿದೆ.
ಎಚ್ಚರಿಕೆ ನೀಡಿದ ಬಳಿಕವೂ ಸ್ಪಾಯ್ಲರ್ ಹೇಳುವುದನ್ನು ನಿಲ್ಲಿಸದ ಕಾರಣ ಪ್ರೇಕ್ಷಕರು ಯುವಕನನ್ನು ಪ್ರಶ್ನಿಸಿದ್ದಾರೆ. ಬಳಿಕ ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ತಳ್ಳಾಟ ಮತ್ತು ಗಲಾಟೆಯ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಘಟನೆಯ ವಿಡಿಯೋ ವೈರಲ್ ಆದ ನಂತರ ಅನೇಕರು ಸ್ಪಾಯ್ಲರ್ ನೀಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಲು ಬಂದವರಿಗೆ ಕಥೆ ಮುಂಚಿತವಾಗಿ ಹೇಳುವುದು ತಪ್ಪು, ಇತರರ ಅನುಭವಕ್ಕೆ ಗೌರವ ನೀಡಬೇಕು, ಮೊದಲೇ ಸಿನಿಮಾ ನೋಡಿದವರು ಮೌನವಾಗಿರಬೇಕು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಇನ್ನೂ ಕೆಲವರು ಥಿಯೇಟರ್ನಲ್ಲಿ ಹಿಂಸೆಗೆ ಅವಕಾಶ ಕೊಡಬಾರದು ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಮಾರ್ವೆಲ್ ಸ್ಟುಡಿಯೋಸ್ ನಿರ್ಮಿಸಿರುವ ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಚಿತ್ರವನ್ನು ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶಿಸಿದ್ದಾರೆ. ಟಾಮ್ ಹಾಲೆಂಡ್, ಝೆಂಡಾಯಾ, ಜಾಕೋಬ್ ಬಟಾಲನ್ ಮತ್ತು ಮಾರ್ಕ್ ರಫೆಲೊ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ವಿಶ್ವದಾದ್ಯಂತ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Bangalore [Bangalore],Bangalore,Karnataka














