Last Updated:
Gen Z ಪ್ರತಿಭಟನಾಕಾರರ ಕುರಿತು ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ (Bollywood Actress Kangana Ranaut) ನೀಡಿದ್ದ ಹೇಳಿಕೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
Gen Z ಪ್ರತಿಭಟನಾಕಾರರ ಕುರಿತು ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ (Bollywood Actress Kangana Ranaut) ನೀಡಿದ್ದ ಹೇಳಿಕೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಬಾಲಿವುಡ್ ನಟ ಸೋನು ಸೂದ್ (Sonu Sood) ಪ್ರತಿಕ್ರಿಯೆ ನೀಡಿದ್ದು, ಯುವಕರನ್ನು ಗೌರವಿಸುವುದು ಪ್ರತಿಯೊಬ್ಬ ಸಾರ್ವಜನಿಕ ವ್ಯಕ್ತಿಯ ಜವಾಬ್ದಾರಿ ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು ಸೂದ್, Gen Z ಯುವಕರ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಈ ಯುವಕರೇ ನಮ್ಮನ್ನು ಸ್ಟಾರ್ ಮಾಡುತ್ತಾರೆ. ನಾವು ಇಂದು ಈ ಸ್ಥಾನದಲ್ಲಿದ್ದರೆ ಅದಕ್ಕೆ ಅವರ ಬೆಂಬಲವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಹಾಗೆಯೇ ಯುವಜನರ ಬೆಂಬಲದ ಮಹತ್ವವನ್ನು ವಿವರಿಸಿದ ಸೋನು ಸೂದ್, ಅವರು ನಮ್ಮ ಜೊತೆ ಇರುವವರೆಗೂ ನಾವು ಬೆಳೆಯುತ್ತೇವೆ. ಅವರು ನಮ್ಮಿಂದ ದೂರವಾದರೆ ಅದು ಯಾವುದೇ ಕ್ಷೇತ್ರದಲ್ಲಿದ್ದರೂ ಕಷ್ಟವಾಗುತ್ತದೆ. ಆದ್ದರಿಂದ ಎಲ್ಲರನ್ನೂ ಜೊತೆಯಾಗಿ ಕರೆದೊಯ್ಯುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಹಾಗೆಯೇ ನೀವು ನಟರಾಗಿರಬಹುದು, ವೈದ್ಯರಾಗಿರಬಹುದು ಅಥವಾ ಯಾವುದೇ ವೃತ್ತಿಯಲ್ಲಿರಬಹುದು. ಜನರು ನಿಮ್ಮನ್ನು ಬೆಂಬಲಿಸುವವರೆಗೂ ಮಾತ್ರ ನಿಮ್ಮ ಅಸ್ತಿತ್ವಕ್ಕೆ ಅರ್ಥ ಇರುತ್ತದೆ. ಸಾರ್ವಜನಿಕರ ವಿಶ್ವಾಸ ಮತ್ತು ಪ್ರೀತಿಯೇ ಪ್ರತಿಯೊಬ್ಬರ ಯಶಸ್ಸಿನ ಅಡಿಪಾಯ ಎಂದು ಹೇಳಿದರು.
ಕಂಗನಾ ರಣಾವತ್ ಪ್ರತಿಭಟನಾಕಾರರನ್ನು ‘Generation Gutter’ ಎಂದು ಉಲ್ಲೇಖಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನು ಸೂದ್, ಅವರು ನಿಜವಾಗಿಯೂ ಹಾಗೆ ಹೇಳಿದ್ದರೆ ಅದು ಸರಿಯಲ್ಲ. ಅಂತಹ ಪದಗಳನ್ನು ಬಳಸಬಾರದಿತ್ತು. ಅದು ಬೇಸರದ ಸಂಗತಿ ಎಂದು ಪ್ರತಿಕ್ರಿಯಿಸಿದರು.
ಇತ್ತೀಚೆಗೆ ಕಂಗನಾ ರಣಾವತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ Gen Z ಪ್ರತಿಭಟನಾಕಾರರ ಕುರಿತು ಟೀಕಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಆ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ,ವಿರೋಧದ ಚರ್ಚೆಗೆ ಕಾರಣವಾಗಿತ್ತು. ಇದೀಗ ಸೋನು ಸೂದ್ ನೀಡಿರುವ ಪ್ರತಿಕ್ರಿಯೆಯಿಂದ ಈ ವಿಚಾರ ಮತ್ತಷ್ಟು ಸುದ್ದಿಯಾಗಿದೆ.
ಸದ್ಯ ಕಂಗನಾ ರಣಾವತ್ ಅವರ ಹೇಳಿಕೆ ಹಾಗೂ ಸೋನು ಸೂದ್ ಅವರ ಪ್ರತಿಕ್ರಿಯೆ ಎರಡೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು , ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
Bangalore [Bangalore],Bangalore,Karnataka
Jul 30, 2026 12:53 PM IST














