Last Updated:
ವಿಮಾನದಲ್ಲಿದ್ದ ನೂರಾರು ಜನರ ಜೀವ ಉಳಿಸಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೀಗ ಅವರಿಗೆ ಹಣದ ಮಳೆ ಜೊತೆಗೆ ಹಲವು ಬಹುಮಾನಗಳು ಹರಿದು ಬರುತ್ತಿದೆ.
ಫ್ಲೈ ದುಬೈ ವಿಮಾನ FZ1073ರಲ್ಲಿ 174 ಜನರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಭಾರತೀಯ ಪೈಲಟ್ (Pilot) ಕ್ಯಾಪ್ಟನ್ ಸ್ಮಿತ್ ಮಚ್ಚರ್ (Smit Machchhar) ಇಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಠಿಣ ಸಂದರ್ಭದಲ್ಲಿ ಅಸಾಧಾರಣ ಧೈರ್ಯ ಮತ್ತು ತಾಳ್ಮೆಯನ್ನು ತೋರಿದ ಅವರು ಪ್ರಪಂಚದಾದ್ಯಂತ ಪ್ರಶಂಸೆ ಪಡೆಯುತ್ತಿದ್ದಾರೆ. ಅವರ ಶೌರ್ಯಕ್ಕೆ ಮಾನ್ಯತೆ ನೀಡಿ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳು ಲಕ್ಷಾಂತರ ರೂಪಾಯಿ ನಗದು ಬಹುಮಾನಗಳನ್ನು ಘೋಷಿಸಿದ್ದಾರೆ.
ಹೌದು ವಿಮಾನದಲ್ಲಿದ್ದ ನೂರಾರು ಜನರ ಜೀವ ಉಳಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್‌ಗೆ ಹಣದ ಮಳೆಯೇ ಹರಿದುಬಂದಿದೆ.
ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನ FZ1073 ದುಬೈನಿಂದ ಟೆಲ್ ಅವೀವ್‌ಗೆ ಹಾರುತ್ತಿತ್ತು. ವಿಮಾನದಲ್ಲಿ ಒಟ್ಟು 174 ಜನರಿದ್ದರು. ಹಾರಾಟದ ಮಧ್ಯೆ ಅನಿರೀಕ್ಷಿತ ಘಟನೆ ನಡೆಯಿತು. ಸಹ-ಪೈಲಟ್ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ದಾಳಿ ಮಾಡಿದರು. ಸ್ಮಿತ್ ಗಂಭೀರವಾಗಿ ಗಾಯಗೊಂಡರು. ಪರಿಸ್ಥಿತಿ ಹದಗೆಡುತ್ತಿದ್ದರೂ ಅವರು ತಮ್ಮನ್ನು ತಾವು ಹತೋಟಿಯಲ್ಲಿಟ್ಟುಕೊಂಡು ವಿಮಾನದ ನಿಯಂತ್ರಣವನ್ನು ಕಾಯ್ದುಕೊಂಡರು. ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ಸುರಕ್ಷಿತವಾಗಿ ಇಳಿಸಿದರು. ಈ ಕಾರಣದಿಂದ ವಿಮಾನದಲ್ಲಿದ್ದ ಎಲ್ಲಾ 174 ಪ್ರಯಾಣಿಕರ ಜೀವಗಳು ಉಳಿದವು. ಈ ಘಟನೆಯ ತನಿಖೆ ಇನ್ನೂ ಮುಂದುವರೆದಿದೆ.
ಸ್ಮಿತ್ ಮಚ್ಚರ್ ಪ್ರಸ್ತುತ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಧೈರ್ಯವನ್ನು ಪರಿಗಣಿಸಿ ರಾಷ್ಟ್ರಮಟ್ಟದಲ್ಲಿ ಶೌರ್ಯ ಪ್ರಶಸ್ತಿ ನೀಡಬೇಕೆಂಬ ಬೇಡಿಕೆಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಭಾರತೀಯ ಪೈಲಟ್‌ಗಳ ಸಂಘವು ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಅಥವಾ ಅಶೋಕ ಚಕ್ರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.
ಸ್ಮಿತ್‌ನ ಶೌರ್ಯಕ್ಕೆ ಮನ್ನಣೆ ನೀಡಿ ಹಲವಾರು ಕಡೆಗಳಿಂದ ನಗದು ಪ್ರಶಸ್ತಿಗಳು ಘೋಷಣೆಯಾಗಿವೆ. ಮ್ಯಾನ್‌ಕೈಂಡ್ ಫಾರ್ಮಾ ಕಂಪನಿ ಸ್ಮಿತ್ ಮಚ್ಚರ್‌ಗೆ ₹1 ಕೋಟಿ ನಗದು ಬಹುಮಾನ ನೀಡಿದೆ. ಅವರು ತಮ್ಮ ಸ್ವಂತ ಜೀವವನ್ನು ಲೆಕ್ಕಿಸದೆ ಮಾಡಿದ ಕ್ರಮಗಳು ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಿದವು ಎಂದು ಕಂಪನಿ ಹೇಳಿದೆ. ಇದು ಪ್ರತಿಯೊಬ್ಬ ಸಿಬ್ಬಂದಿಯ ಜವಾಬ್ದಾರಿಯನ್ನು ಉದಾಹರಣೆಯಾಗಿ ತೋರಿಸುತ್ತದೆ ಎಂದು ಅವರು ಪ್ರಶಂಸಿಸಿದ್ದಾರೆ.
ಸ್ಮಿತ್ ಮೂಲತಃ ಗುಜರಾತ್‌ನವರು. ಅವರ ಧೈರ್ಯವನ್ನು ಗುರುತಿಸಿ ಗುಜರಾತ್ ಸರ್ಕಾರವು ವಿಶಿಷ್ಟ ‘ಗುಜರಾತ್ ಗರಿಮಾ’ ಪ್ರಶಸ್ತಿಯನ್ನು ಘೋಷಿಸಿದೆ. ಜೊತೆಗೆ ₹25 ಲಕ್ಷ ನಗದು ಬಹುಮಾನವನ್ನೂ ನೀಡಲಾಗುತ್ತದೆ. ಅಕ್ಟೋಬರ್ 1ರಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇದನ್ನು ಘೋಷಿಸಿದ್ದಾರೆ. ರಾಜ್ಯಸಭಾ ಸಂಸದ ವಿಕ್ರಮ್‌ಜಿತ್ ಸಿಂಗ್ ಸಾಹ್ನಿ (ಸನ್ ಫೌಂಡೇಶನ್) ಅವರು ಸ್ಮಿತ್‌ಗೆ ₹25 ಲಕ್ಷ ನಗದು ಬಹುಮಾನ ಮತ್ತು ‘ಸ್ಮಿತ್ ಮಚ್ಚರ್ ಶೌರ್ಯ ಪ್ರಶಸ್ತಿ’ಯನ್ನು ಘೋಷಿಸಿದ್ದಾರೆ. ಅವರಿಗೆ ರಾಷ್ಟ್ರೀಯ ಮಟ್ಟದ ಶೌರ್ಯ ಪ್ರಶಸ್ತಿ ನೀಡಬೇಕೆಂದು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. ಭಾರತೀಯ ಪೈಲಟ್‌ಗಳ ಒಕ್ಕೂಟ (FIP) ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳು ಸಹ ಪ್ರಧಾನ ಮಂತ್ರಿಯವರನ್ನು ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಅಥವಾ ಅಶೋಕ ಚಕ್ರ ನೀಡುವಂತೆ ವಿನಂತಿಸಿದ್ದಾರೆ ಎಂದು ಕನ್ನಡ ಏಷ್ಯಾನೆಟ್ ಸುವರ್ಣ ವರದಿ ಮಾಡಿದೆ.
ಧೈರ್ಯದ ಮಾದರಿಸ್ಮಿತ್ ಮಚ್ಚರ್ ಅವರು ತೋರಿದ ಧೈರ್ಯ, ತಾಳ್ಮೆ ಮತ್ತು ಬುದ್ಧಿವಂತಿಕೆ ಇಡೀ ಪ್ರಪಂಚದಲ್ಲಿ ಮೆಚ್ಚುಗೆ ಪಡೆದಿದೆ. ತಮ್ಮ ಜೀವಕ್ಕೆ ಅಪಾಯವಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಇಳಿಸಿ ನೂರಾರು ಜೀವಗಳನ್ನು ಉಳಿಸಿದ ಅವರ ಕಾರ್ಯ ಶೌರ್ಯಕ್ಕೆ ಮಾದರಿಯಾಗಿದೆ. ಅವರು ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಅವರಿಗೆ ರಾಷ್ಟ್ರಮಟ್ಟದ ಗೌರವ ಸಿಗಬೇಕು ಎಂಬ ಬೇಡಿಕೆ ಬಲವಾಗುತ್ತಿದೆ. ಅವರ ಈ ಸಾಹಸಕ್ಕೆ ಎಲ್ಲರೂ ಸಲಾಮ್ ಹೇಳುತ್ತಿದ್ದಾರೆ.














