Team India: ಭಾರತ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಯುಗಾರಂಭ! ಹರ್ಮನ್‌ಪ್ರೀತ್ ನಾಯಕತ್ವ ಹೇಗಿತ್ತು? ನಾಯಕಿ ಸ್ಮೃತಿ ಮುಂದಿರುವ ಸವಾಲುಗಳೇನು? | ಕ್ರೀಡಾ ಸುದ್ದಿ | ACTPnews

Team India: ಭಾರತ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಯುಗಾರಂಭ! ಹರ್ಮನ್‌ಪ್ರೀತ್ ನಾಯಕತ್ವ ಹೇಗಿತ್ತು? ನಾಯಕಿ ಸ್ಮೃತಿ ಮುಂದಿರುವ ಸವಾಲುಗಳೇನು? | ಕ್ರೀಡಾ ಸುದ್ದಿ


ಅಬ್ಧುತ ದಾಖಲೆ ಹೊಂದಿರುವ ಹರ್ಮನ್‌ಪ್ರೀತ್ ಕೌರ್

ಕಳೆದ 2016 ರಲ್ಲಿ ಹರ್ಮನ್‌ಪ್ರೀತ್ ಮೊದಲ ಬಾರಿಗೆ ಭಾರತದ ಪೂರ್ಣಾವಧಿ ಟಿ20 ನಾಯಕಿಯಾಗಿ ಜವಾಬ್ದಾರಿ ವಹಿಸಿಕೊಂಡರು. ಅದಾದ ನಂತರ ದಂತಕಥೆ ಮಿಥಾಲಿ ರಾಜ್ ಅವರ ನಿವೃತ್ತಿಯ ಬಳಿಕ 2022 ರಲ್ಲಿ ಏಕದಿನ (ODI) ತಂಡದ ನಾಯಕತ್ವವೂ ಇವರ ಹೆಗಲಿಗೇರಿತು. ಅಂತಿಮವಾಗಿ ಇವರು ಮೂರೂ ಮಾದರಿಗಳ ಸಾರ್ವಭೌಮ ನಾಯಕಿಯಾಗಿ ಹೊರಹೊಮ್ಮಿದರು. ಇವರ ಕ್ಯಾಪ್ಟನ್ಸಿ ರೆಕಾರ್ಡ್ ನೋಡಿದರೆ ಯಾರಿಗಾದರೂ ಮೈ ರೋಮಾಂಚನಗೊಳ್ಳುತ್ತದೆ. ಹರ್ಮನ್ ಒಟ್ಟು 211 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, ಅದರಲ್ಲಿ ಬರೋಬ್ಬರಿ 126 ಪಂದ್ಯಗಳಲ್ಲಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಅಂದರೆ ಶೇಕಡಾ 59.7 ರಷ್ಟು ಅದ್ಭುತ ಗೆಲುವಿನ ಸರಾಸರಿ ಇವರದ್ದಾಗಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡವು ದೈತ್ಯ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ವಿರುದ್ಧ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದ ಕಾಲದಲ್ಲಿ ಈ ನಾಯಕತ್ವ ಬಂದಿತ್ತು ಎಂಬುದನ್ನು ನಾವು ಮರೆಯಬಾರದು.

ದಶಕಗಳ ವಿಶ್ವಕಪ್ ಕನಸು ನನಸು

ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದ ಅತ್ಯಂತ ಮಹತ್ವದ ಸಾಧನೆ ಎಂದರೆ, ಅದು ಇತ್ತೀಚಿನ 2025 ರ ಮಹಿಳಾ ಏಕದಿನ ವಿಶ್ವಕಪ್ (Women’s ODI World Cup). ಇದಕ್ಕಿಂತ ಮೊದಲು ಭಾರತ ತಂಡವು 2005 ಮತ್ತು 2017 ರ ಒಡಿಐ ವಿಶ್ವಕಪ್ ಹಾಗೂ 2020 ರ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಹಂತದವರೆಗೆ ಹೋಗಿ, ಟ್ರೋಫಿ ಕೈತಪ್ಪಿದ ಭೀಕರ ನೋವನ್ನು ಅನುಭವಿಸಿತ್ತು. ಆದರೆ 2025 ರಲ್ಲಿ ತಾಯ್ನಾಡಿನ ನೆಲದಲ್ಲಿ ನಡೆದ ಹೈವೋಲ್ಟೇಜ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಧೂಳೀಪಟ ಮಾಡಿದ ಹರ್ಮನ್ ಪಡೆ, ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಮಹಿಳಾ ಕ್ರಿಕೆಟ್‌ಗೆ 50 ಓವರ್‌ಗಳ ವಿಶ್ವಕಪ್ ತಂದುಕೊಟ್ಟಿತು.

ಈ ಐತಿಹಾಸಿಕ ಸಾಧನೆಯೊಂದಿಗೆ ಹರ್ಮನ್‌ಪ್ರೀತ್ ಅವರು ಕಪಿಲ್ ದೇವ್ ಮತ್ತು ಎಂ.ಎಸ್. ಧೋನಿ ಅವರ ನಂತರ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಮೂರನೇ ಶ್ರೇಷ್ಠ ಕ್ಯಾಪ್ಟನ್ ಎಂಬ ಕೀರ್ತಿಗೆ ಪಾತ್ರರಾದರು. ಕೇವಲ ವಿಶ್ವಕಪ್ ಮಾತ್ರವಲ್ಲದೆ, ಇವರ ನಾಯಕತ್ವದಲ್ಲಿ ಭಾರತ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡು ಬಾರಿ (2026 ರ ಇತ್ತೀಚಿನ ಸೀಸನ್ ಒಳಗೊಂಡಂತೆ) ಚಿನ್ನದ ಪದಕವನ್ನು ಗೆದ್ದು ಇತಿಹಾಸ ಬರೆಯಿತು. ಹಾಗೆಯೇ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಹಾಗೂ ಏಷ್ಯಾ ಕಪ್‌ಗಳಲ್ಲೂ ಭಾರತ ಮುಕುಟ ಧರಿಸುವಂತೆ ಮಾಡಿದರು.

ದಾಖಲೆಗಳ ರಾಣಿ ಹರ್ಮನ್

ವೈಯಕ್ತಿಕವಾಗಿ ಹರ್ಮನ್‌ಪ್ರೀತ್ ಅವರ ಆಟದ ಬಗ್ಗೆ ಹೇಳಲೇಬೇಕು. 2017 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅವರು ಸಿಡಿಸಿದ ಆ ಅಜೇಯ 171 ರನ್ ಇಂದಿಗೂ ಕ್ರಿಕೆಟ್ ಇತಿಹಾಸದ ಅತ್ಯಂತ ವಿಧ್ವಂಸಕ ಇನ್ನಿಂಗ್ಸ್ ಆಗಿದೆ. ಭಾರತ ಸಂಕಷ್ಟದಲ್ಲಿದ್ದಾಗ ಆಸೀಸ್ ಬೌಲರ್‌ಗಳ ಧೂಳೀಪಟ ಮಾಡಿದ್ದ ಆ ಆಟವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮತ್ತೊಂದು ವಿಶೇಷವೆಂದರೆ, ಇತ್ತೀಚಿನ 2026 ರ ವೇಳೆಗೆ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಪಂದ್ಯ ಆಡಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಪುರುಷ ಮತ್ತು ಮಹಿಳಾ ಕ್ರಿಕೆಟ್ ಎರಡೂ ವಿಭಾಗಗಳನ್ನು ಒಟ್ಟಿಗೆ ಸೇರಿಸಿದರೂ, ವಿಶ್ವದಲ್ಲೇ ಮೊದಲ ಬಾರಿಗೆ 200 ಟಿ20 ಪಂದ್ಯಗಳನ್ನು ಆಡಿದ ಮತ್ತು 150 ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಿದ ಏಕೈಕ ಕ್ರಿಕೆಟರ್ ಹರ್ಮನ್‌ಪ್ರೀತ್ ಕೌರ್ ಮಾತ್ರ! ಆರಂಭದಲ್ಲಿ ಕೊಂಚ ಅಗ್ರೆಸಿವ್ ಮತ್ತು ಎಮೋಷನಲ್ ಆಗಿರುತ್ತಿದ್ದ ಇವರು, ದಿನ ಕಳೆದಂತೆ ಒತ್ತಡದ ಪರಿಸ್ಥಿತಿಯನ್ನು ಅತ್ಯಂತ ಶಾಂತವಾಗಿ (Calm) ನಿಭಾಯಿಸುವ ಕೂಲ್ ಕ್ಯಾಪ್ಟನ್ ಆಗಿ ಬೆಳೆದರು. ಒತ್ತಡದ ಪಂದ್ಯಗಳಲ್ಲೂ ಭಾರತ ಗೆಲ್ಲಬಹುದು ಎಂಬ ಆತ್ಮವಿಶ್ವಾಸವನ್ನು ತಂಡದೊಳಗೆ ತುಂಬಿದ್ದೇ ಇವರ ಅಸಲಿ ಪರಂಪರೆಯಾಗಿದೆ.

ಸ್ಮೃತಿ ಮಂಧಾನ ಯುಗ ಆರಂಭ ಮತ್ತು ಅವರ ಮುಂದಿರುವ 4 ಸವಾಲುಗಳು

ಈಗ ಇಂತಹ ದೈತ್ಯ ನಾಯಕಿಯ ಜಾಗಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಹಾ ರಾಣಿ ಸ್ಮೃತಿ ಮಂಧಾನ ಬಂದಿದ್ದಾರೆ. ಸ್ಮೃತಿ ಅವರಿಗೆ ನಾಯಕತ್ವ ಹೊಸದೇನಲ್ಲ, ಏಕೆಂದರೆ ಅವರು ಈಗಾಗಲೇ ಭಾರತ ತಂಡವನ್ನು 18 ಟಿ20 ಮತ್ತು 4 ಏಕದಿನ ಪಂದ್ಯಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅದರಲ್ಲೂ ಪ್ರಮುಖವಾಗಿ, ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (WPL) ಆರ್​ಸಿಬಿ ತಂಡದ ನಾಯಕಿಯಾಗಿ 2024 ಮತ್ತು ಇತ್ತೀಚಿನ 2026 ರ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬರೋಬ್ಬರಿ 204 ರನ್‌ಗಳ ದೈತ್ಯ ಟಾರ್ಗೆಟ್ ಚೇಸ್ ಮಾಡಿ ಬ್ಯಾಕ್-ಟು-ಬ್ಯಾಕ್ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟು ತಮ್ಮ ನಾಯಕತ್ವದ ತಾಕತ್ತನ್ನು ಜಗತ್ತಿಗೆ ಸಾಬೀತುಪಡಿಸಿದ್ದಾರೆ.

ಮಂಧಾನಗೆ ಕ್ಯಾಪ್ಟನ್ಸಿ ಮತ್ತು ಟ್ರೋಫಿ ಗೆಲ್ಲುವುದು ಹೊಸದಲ್ಲದಿದ್ದರೂ, ಇಡೀ ಭಾರತ ತಂಡದ ಪೂರ್ಣಾವಧಿ ನಾಯಕತ್ವ ವಹಿಸುವುದು ಸಂಪೂರ್ಣ ಭಿನ್ನವಾದ ಸವಾಲಾಗಿದೆ. ಸದ್ಯ ಅವರ ಮುಂದೆ ಪ್ರಮುಖವಾಗಿ 4 ದೊಡ್ಡ ಪರೀಕ್ಷೆಗಳಿವೆ:

* ವಿಶ್ವಕಪ್ ಪರಂಪರೆಯನ್ನು ಮುಂದುವರಿಸುವುದು: ಹರ್ಮನ್‌ಪ್ರೀತ್ ಅವರು ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟಿದ್ದಾರೆ. ಅದೇ ವಿನ್ನಿಂಗ್ ಮೆಂಟಾಲಿಟಿ ಮತ್ತು ಕನ್ಸಿಸ್ಟೆನ್ಸಿಯನ್ನು ಮುಂಬರುವ ಐಸಿಸಿ ಟೂರ್ನಿಗಳಲ್ಲೂ ಕಾಯ್ದುಕೊಂಡು ಭಾರತದ ಹೆಮ್ಮೆಯನ್ನು ಉಳಿಸಿಕೊಳ್ಳುವುದು ಸ್ಮೃತಿ ಮುಂದಿರುವ ಮೊದಲ ಗುರಿಯಾಗಿದೆ.

* ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿ ಬ್ಯಾಲೆನ್ಸ್: ಸ್ಮೃತಿ ಮಂಧಾನ ಭಾರತ ತಂಡದ ಅತ್ಯಂತ ಪ್ರಮುಖ ರನ್ ಮಷಿನ್. ಈಗ ನಾಯಕತ್ವದ ಬೃಹತ್ ಜವಾಬ್ದಾರಿ ಇರುವುದರಿಂದ, ತಮ್ಮ ವೈಯಕ್ತಿಕ ಬ್ಯಾಟಿಂಗ್ ಪ್ರದರ್ಶನದ ಮೇಲೆ ಯಾವುದೇ ಒತ್ತಡ ಬೀಳದಂತೆ ಎರಡನ್ನೂ ಅತ್ಯಂತ ಸಮರ್ಥವಾಗಿ ಮ್ಯಾನೇಜ್ ಮಾಡಬೇಕಿದೆ.

* ಭವಿಷ್ಯದ ಬಲಿಷ್ಠ ತಂಡದ ನಿರ್ಮಾಣ: ಹಿರಿಯ ಆಟಗಾರರೊಂದಿಗೆ ಯುವ ಆಟಗಾರರನ್ನು ಸೇರಿಸಿ ಹೊಸ ತಂಡವನ್ನು ಕಟ್ಟುವುದು ಮತ್ತು ತಂಡದ ಬೆಂಚ್ ಸ್ಟ್ರೆಂತ್ ಹೆಚ್ಚಿಸಿ ಯುವ ತಾರೆಗಳಿಗೆ ಹೆಚ್ಚಿನ ಆತ್ಮವಿಶ್ವಾಸ ನೀಡುವುದು ಅವರ ಪ್ರಮುಖ ಕೆಲಸವಾಗಿದೆ.

* ನಾಕೌಟ್ ಪಂದ್ಯಗಳ ಒತ್ತಡ ನಿರ್ವಹಣೆ: ದೊಡ್ಡ ದೊಡ್ಡ ಐಸಿಸಿ ಟೂರ್ನಿಗಳ ಸೆಮಿಫೈನಲ್ ಅಥವಾ ಫೈನಲ್‌ನಂತಹ ಒತ್ತಡದ ಪಂದ್ಯಗಳಲ್ಲಿ ಮೈದಾನದಲ್ಲಿ ತಕ್ಷಣವೇ ತೆಗೆದುಕೊಳ್ಳುವ ನಿರ್ಧಾರಗಳು ಪಂದ್ಯದ ಗತಿಯನ್ನು ಬದಲಾಯಿಸುತ್ತವೆ. ಅಂತಹ ಜಾಗದಲ್ಲಿ ಸ್ಮೃತಿ ತಮ್ಮ ಚಾಣಾಕ್ಷತನ ತೋರಿಸಬೇಕಿದೆ.

ಇದು ಅಂತ್ಯವಲ್ಲ, ಭವ್ಯ ಭವಿಷ್ಯಕ್ಕೆ ಮುನ್ನುಡಿ

ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಇದು ಹರ್ಮನ್‌ಪ್ರೀತ್ ಕೌರ್ ಅವರ ಅಧ್ಯಾಯ ಮುಗಿದು ಸ್ಮೃತಿ ಅಧ್ಯಾಯ ಶುರುವಾಯಿತು ಎಂದಲ್ಲ. ಏಕೆಂದರೆ ಹರ್ಮನ್‌ಪ್ರೀತ್ ಅವರು ನಾಯಕತ್ವಕ್ಕೆ ಮಾತ್ರ ರಾಜೀನಾಮೆ ನೀಡಿದ್ದು, ತಂಡದ ಅತ್ಯಂತ ಹಿರಿಯ ಆಟಗಾರ್ತಿಯಾಗಿ ಮೈದಾನದಲ್ಲಿ ಮುಂದುವರಿಯಲಿದ್ದಾರೆ. ಇದು ಸ್ಮೃತಿ ಮಂಧಾನ ಅವರಿಗೆ ಬೆನ್ನಿಗೆ ನಿಲ್ಲಲು ದೊಡ್ಡ ಆನೆಯ ಬಲ ಸಿಕ್ಕಂತಾಗಿದೆ. ಆರ್​ಸಿಬಿಗೆ ಬ್ಯಾಕ್-ಟು-ಬ್ಯಾಕ್ ಕಪ್ ಗೆದ್ದುಕೊಟ್ಟ ನಮ್ಮ ಹೆಮ್ಮೆಯ ಸ್ಮೃತಿ ಮಂಧಾನ, ಈಗ ತಮ್ಮ ಮಾಡರ್ನ್ ಕ್ರಿಕೆಟ್ ಮೈಂಡ್‌ಸೆಟ್ ಮತ್ತು ಅದ್ಭುತ ಬ್ಯಾಟಿಂಗ್ ಮೂಲಕ ಭಾರತೀಯ ಕ್ರಿಕೆಟ್ ತಂಡದ ನಾಯಕಿಯಾಗಿ ಯಾವ ರೀತಿಯಾಗಿ ಇತಿಹಾಸ ಬರೆಯಲಿದ್ದಾರೆ ಎಂಬುದನ್ನು ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.

ವರದಿ: ಪೃಥ್ವಿರಾಜ್ ಹಾರನಹಳ್ಳಿ, ನ್ಯೂಸ್ ಡೆಸ್ಕ್ 



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed