Last Updated:
ಪೊಲೀಸ್ ಅಧಿಕಾರಿಯೊಬ್ಬರು, ಕಾನ್‌ಸ್ಟೆಬಲ್ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮಯೂರ್ ವಿಹಾರ್-ನೋಯ್ಡಾ ಲಿಂಕ್ ರಸ್ತೆಯ ಬಳಿಯ ಪಾರ್ಕಿಂಗ್ ಪ್ರದೇಶದಿಂದ ಅವರ ಶವ ಪತ್ತೆಯಾಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿಯ ಪೂರ್ವ ದೆಹಲಿಯ ಕಲ್ಯಾಣಪುರಿ ಪ್ರದೇಶದಲ್ಲಿ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ (Shocking News) ತಲೆಮರೆಸಿಕೊಂಡಿದ್ದ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಮಂಗಳವಾರ ಸಂಜೆ ಆತ್ಮಹತ್ಯೆ (Police Constable Suicide Case) ಮಾಡಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು, ಕಾನ್‌ಸ್ಟೆಬಲ್ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮಯೂರ್ ವಿಹಾರ್-ನೋಯ್ಡಾ ಲಿಂಕ್ ರಸ್ತೆಯ ಬಳಿಯ ಪಾರ್ಕಿಂಗ್ ಪ್ರದೇಶದಿಂದ ಅವರ ಶವ ಪತ್ತೆಯಾಗಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ಬಗ್ಗೆ ವಿವರವಾದ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜೀವ್ ಕುಮಾರ್ ಅವರ ಪ್ರಕಾರ, ಕಾನ್‌ಸ್ಟೆಬಲ್ ಮನೀಶ್ ಭಾಟಿ ಭಾನುವಾರ ರಾತ್ರಿ ತಮ್ಮ ಪತ್ನಿ ಪ್ರಿಯಾಂಕಾ ಅವರೊಂದಿಗೆ ಹುಟ್ಟುಹಬ್ಬ ಆಚರಿಸಲು ಮನೆಯಿಂದ ಹೊರಟಿದ್ದರು. ಈ ವೇಳೆ ಪ್ರಯಾಣದ ಸಮಯದಲ್ಲಿ ದಂಪತಿಗಳು ಜಗಳವಾಡಿದ್ದಾರೆ ಎನ್ನಲಾಗಿದೆ. ಜಗಳ ತಾರಕಕ್ಕೇರಿ ಭಾಟಿ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯ ಬಳಿ ಸ್ಕೂಟರ್ ನಿಲ್ಲಿಸಿದ ಮನೀಶ್ ಭಾಟಿ ಪ್ರಿಯಾಂಕಾ ಮೇಲೆ ಎರಡು ಬಾರಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ, ಪ್ರಿಯಾಂಕಾ ಅವರ ಕುಟುಂಬವು ಭಾಟಿ ಮತ್ತು ಅವರ ಸಂಬಂಧಿಕರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿತು. ಮದುವೆಯ ಸಮಯದಲ್ಲಿ ಸುಮಾರು 15 ಲಕ್ಷ ರೂಪಾಯಿ ನಗದು ಸೇರಿದಂತೆ ಗಣನೀಯ ಪ್ರಮಾಣದಲ್ಲಿ ವರದಕ್ಷಿಣೆ ಪಡೆದಿದ್ದರೂ, ಮನೀಶ್ ಭಾಟಿ ಮತ್ತು ಅವರ ಕುಟುಂಬವು ಐಷಾರಾಮಿ ಕಾರಿಗೆ ಬೇಡಿಕೆ ಇಡುವುದನ್ನು ಮುಂದುವರೆಸಿದೆ ಎಂದು ಅವರ ತಂದೆ ಅಜಿತ್ ಸಿಂಗ್ ಆರೋಪಿಸಿದ್ದಾರೆ.
‘ಐಷಾರಾಮಿ ಕಾರಿನ ಬೇಡಿಕೆಯನ್ನು ನಾವು ಪೂರೈಸಲು ಸಾಧ್ಯವಾಗದ ಕಾರಣ ಅವರು ನನ್ನ ಮಗಳಿಗೆ ಕಿರುಕುಳ ನೀಡುತ್ತಲೇ ಇದ್ದರು’ ಎಂದು ಅಜಿತ್ ಸಿಂಗ್ ಆರೋಪಿಸಿದ್ದಾರೆ. ತನಿಖೆಯ ಭಾಗವಾಗಿ ವರದಕ್ಷಿಣೆ ಕಿರುಕುಳದ ಆರೋಪಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಈಟಿವಿ ನ್ಯೂಸ್ ವರದಿ ಮಾಡಿದೆ.
2022 ರ ಬ್ಯಾಚ್‌ನ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿರುವ ಮನೀಶ್ ಭಾಟಿ, ಆಟೋ ಕಳ್ಳತನ ವಿರೋಧಿ ದಳ (AATS) ದಲ್ಲಿ ನಿಯೋಜಿತರಾಗಿದ್ದರು, ಆಪಾದಿತ ಕೊಲೆಯ ನಂತರ ಪರಾರಿಯಾಗಿದ್ದರು. ಆತನನ್ನು ಪತ್ತೆಹಚ್ಚಲು ಹಲವಾರು ಪೊಲೀಸ್ ತಂಡಗಳು ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ದಾಳಿ ನಡೆಸಿದ್ದವು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ್ದವು.
ಡಿಸಿಪಿ ರಾಜೀವ್ ಕುಮಾರ್ ಅವರ ಪ್ರಕಾರ, ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ, ಮಯೂರ್ ವಿಹಾರ್-ನೋಯ್ಡಾ ಲಿಂಕ್ ರಸ್ತೆಯ ಬಳಿಯ ಹೋಟೆಲ್‌ನ ಹಿಂಭಾಗದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು.
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಪರಾಧ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
New Delhi,Delhi
Jul 15, 2026 11:28 AM IST












