ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಹಾಗೆ, ಜಾನಕಮ್ಮ ಹಾಡದಿರೋ ಹಾಡಿಲ್ಲ. ಮೂರನೇ ವಯಸ್ಸಿನಿಂದಲೇ ಕಂಠ ಕುಣಿಸೋದಕ್ಕೆ ಪ್ರಾರಂಭಿಸಿದವರು, ಹಾಡುಗಾರಿಕೆಯನ್ನೇ ಉಸಿರಾಗಿಸಿಕೊಂಡಿದ್ದರು. ಮೊಟ್ಟ ಮೊದಲ ಬಾರಿಗೆ 1957ರಲ್ಲಿ ಶುರುವಾದ ಇವರ ಹಿನ್ನೆಲೆ ಗಾಯನದ ಪಯಣ ಉತ್ತುಂಗದ ಶಿಖರವೇರಿ ನಿಂತಿದೆ. ಅದೆಷ್ಟು ಸನ್ಮಾನ, ಅದೆಷ್ಟು ಪ್ರಶಸ್ತಿ, ಅದೆಷ್ಟು ಗೌರವ. ಲೆಕ್ಕ ಹಾಕೋದಕ್ಕೂ ಆಗದಷ್ಟು ಬಿರುದು ಸನ್ಮಾನಗಳು. ಇವರ ಹಾಡಿನಿಂದಲೇ ಸಾಹಿತ್ಯಕ್ಕೊಂದು ಮೆರಗು ಸಿಕ್ತಿತ್ತೋ, ಇವರ ಕಂಠದಲ್ಲೇ ಅಂಥದ್ದೊಂದು ಶಕ್ತಿ ಇತ್ತೋ ಗೊತ್ತಿಲ್ಲ. ಇವರು ಮೈಕ್ ಮುಂದೆ ನಿಂತರೆ ಕೇಳುಗರು ಮಂತ್ರಮುಗ್ಧರಾಗ್ತಿದ್ದರು. ಇವರ ಧ್ವನಿಗೆ ಹುಚ್ಚು ಅಭಿಮಾನಿಗಳಾಗ್ತಿದ್ದರು.
ನಂತರ ಸಿನಿಮಾ ರಂಗಕ್ಕೆ ಕಾಲಿಡೋದಕ್ಕೆ ಬಹಳ ಕಾಲ ಹಿಡಿಯಲೇ ಇಲ್ಲ. ಜಸ್ಟ್ ಒಂದೇ ಒಂದು ವರ್ಷಕ್ಕೆ ಅಂದರೆ, 1957ರಲ್ಲಿ ಮೊದಲ ಬಾರಿಗೆ ಸಿನಿಮಾ ಹಿನ್ನೆಲೆ ಗಾಯನದ ಮೂಲಕ ತಮ್ಮ ಸಂಗೀತ ಜರ್ನಿ ಶುರು ಮಾಡಿದ್ದರು. ತಮಿಳಿನ ‘ವಿಧಿಯಿನ್ ವಿಳಯಾಟ್ಟು’ದಲ್ಲಿ ಮೊದಲ ಬಾರಿಗೆ ಪ್ಲೇ ಬ್ಲ್ಯಾಕ್ ಸಿಂಗರ್ ಆಗಿ ತಮ್ಮ ಕಂಠದಾನ ಮಾಡಿದ್ದರು. ಇಲ್ಲಿಂದಲೇ ನೋಡಿ ಜಾನಕಮ್ಮರ ಸಂಗೀತ ಯಾನ ಶುರುವಾಗಿದ್ದು. ಅವತ್ತು ಹಾಡೋದಕ್ಕೆ ಶುರು ಮಾಡಿದವರು, ಕೊನೆಯುಸಿರಿರುವವರೆಗೂ ಮುಂದುವರಿಸಿದ್ದರು.
ಹುಟ್ಟಿದ ಊರಲ್ಲ, ಬೆಳೆದ ಮಣ್ಣಲ್ಲ. ಇಲ್ಲಿ ಸಂಬಂಧಿಕರೂ ಇಲ್ಲ. ಆದ್ರೂ ಜಾನಕಮ್ಮರಿಗೆ ಈ ಮಣ್ಣಿನ ಮೇಲೆ ಅದೇನ್ ಮೋಹವೋ ಗೊತ್ತಿಲ್ಲ. ಜಾನಕಮ್ಮರಿಗೆ ಮೈಸೂರು ಅಂದ್ರೆ ಜೀವ. ಜನ್ಮಭೂಮಿ ಅಲ್ಲದಿದ್ದರೂ ಇದೇ ನನ್ನ ಕರ್ಮ ಭೂಮಿ ಅಂದ್ಕೊಂಡಿದ್ದರು. ಹೀಗಾಗಿಯೇ ಬದುಕಿನ ಕೊನೇ ಕ್ಷಣಗಳನ್ನ ಇದೇ ಮೈಸೂರಲ್ಲಿ ಕಳೆದಿದ್ದು. ಕೊನೆಗೆ ಇದೇ ಮೈಸೂರಲ್ಲೇ ಕೊನೆಯುಸಿರು ನಿಲ್ಲಿಸಿದ್ದು.
ಜಾನಕಮ್ಮರಿಗೆ ಇದ್ದಿದ್ದೇ ಒಬ್ಬ ಮಗ, ಮಗ ಅಂದ್ರೆ ಜೀವ. ಹುಟ್ಟೂರು ಆಂಧ್ರ ಆದರೂ ಬಹುತೇಕ ದಿನಗಳನ್ನ ಕಳೆದಿದ್ದು ಮೈಸೂರಲ್ಲೇ. ಅಮ್ಮ ಮಗ ಮೈಸೂರಲ್ಲೇ ಹೆಚ್ಚಿನ ದಿನಗಳನ್ನ ದೂಡಿದ್ದರು. ಹೀಗಾಗಿಯೇ ಏನೋ ಇವರ ಮಗ ಕೂಡಾ ಇದೇ ಮೈಸೂರಲ್ಲಿ ಕೊನೆ ಕ್ಷಣ ಕಳೆದಿದ್ದರು. ಇದೇ ವರ್ಷದ ಆರಂಭ, ಜನವರಿಯಲ್ಲಿ ಜಾನಕಮ್ಮರ ಮಗ ಇಹಲೋಕ ತ್ಯಜಿಸಿದ್ದರು. ಯಾವಾಗ ಮುರುಳಿಕೃಷ್ಣ ಸಾವನ್ನಪ್ಪಿದ್ರೋ, ಜಾನಕಮ್ಮ ತುಂಬಾನೇ ಕುಸಿದು ಹೋಗಿದ್ದರು. ಮಾನಸಿಕವಾಗಿ ಜರ್ಜರಿತರಾಗಿದ್ದರು. ಮಗನನ್ನ ಕಳ್ಕೊಂಡ ಜಾನಕಮ್ಮ ಮೈಸೂರು ಬಿಟ್ಟು ಹೋಗಲ್ಲ ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಇಲ್ಲೇ ತಮ್ಮ ಕೊನೆಯ ಕ್ಷಣಗಳನ್ನ ಕಳೆಯಲು ಸಂಪೂರ್ಣವಾಗಿ ಸಜ್ಜಾಗಿದ್ದರು. ಗಂಡ ಇಲ್ಲ, ಮಗ ಇಲ್ಲ, ಮೊಮ್ಮಕ್ಕಳು ಕೂಡಾ ಜೊತೆಗಿರಲಿಲ್ಲ. ಹೀಗಾಗಿ ಇವರ ಪಾಲಿಗೆ ಒಂದಿಷ್ಟು ಮಂದಿ ಕೇರ್ ಟೇಕರ್ ಆಗಿದ್ದರು. ಸ್ವಂತ ತಾಯಿಯಂತೆ ನೋಡ್ಕೊಂಡಿದ್ದರು. ಜಾನಕಮ್ಮಗೆ ಹೇಳ್ಕೊಳ್ಳುವಂಥಾ ಕಾಯಿಲೆ ಇರ್ಲಿಲ್ಲ, ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದವರು ಬದುಕಿನ ಬಂಡಿ ನಿಲ್ಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕೇರ್ ಟೇಕರ್ ಪವನ್, ಇಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವು. ನವೀನ್ ಅವರ ಅಮ್ಮ ಬಂದು ನಮಗೆ ಆಸ್ಪತ್ರೆಗೆ ದಾಖಲಿಸಲು ಹೇಳಿದ್ದರು. ಇದರಂತೆ ಮನೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು ಕೂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವು. ಆ್ಯಂಬುಲೆನ್ಸ್ ನಲ್ಲಿ ಹೋಗುವಾಗಲೂ ನಮ್ಮೊಂದಿಗೆ ಮಾತನಾಡಿದ್ದರು. ಮೆಡಿಸಿನ್ ಕೊಟ್ಟಿದ್ದರಿಂದ ಮಂಪರು ಇದ್ದರೂ, ಅವರು ಎಚ್ಚರವಾಗಿದ್ದರು. ಕೊನೆ ಆಸೆ ಅಂತ ಅವರಿಗೆ ಬೇರೆ ಏನು ಇರಲಿಲ್ಲ, ಎಲ್ಲರನ್ನು ಪ್ರೀತಿ ಮಾಡೋದು. ಮೈಸೂರಿನಲ್ಲಿಯೇ ಇರೋದು ಅವರ ಬಹಳ ಇಷ್ಟ ಆಗುತ್ತಿತ್ತು. ಇಡ್ಲಿಯನ್ನು ಬಹಳ ಇಷ್ಟಪಟ್ಟು ಸೇವಿಸುತ್ತಿದ್ದರು ಎಂದು ಹೇಳಿದ್ದರು. ಅಪಾರ ದೈವ ಭಕ್ತರಾಗಿದ್ದ ಜಾನಕಿ ಅವರು, ಕೊನೆಯ ಕ್ಷಣದ ವರೆಗೂ ಶ್ರೀಕೃಷ್ಣನ ವಿಗ್ರಹವನ್ನು ಕೈನಲ್ಲಿಯೇ ಹಿಡಿದುಕೊಂಡಿದ್ದರು. ಅವರ ಅಂತಿಮ ದರ್ಶನ ವೇಳೆಯೂ ಅವರ ಕೈಯಲ್ಲಿ ಶ್ರೀಕೃಷ್ಣನ ವಿಗ್ರಹ ಇರೋದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.
ಎಸ್ ಜಾನಕಿ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದಾರೆ. ಆದರೆ, ಅತಿಹೆಚ್ಚು ಹಾಡು ಹಾಡಿದ್ದು ಮಾತ್ರ ಕನ್ನಡದಲ್ಲೇ. ಇದರಲ್ಲೇ ಗೊತ್ತಾಗುತ್ತೇ ಕನ್ನಡ ಹಾಗೂ ಜಾನಕಮ್ಮ ನಡುವಿನ ಬಾಂಧವ್ಯ ಹೇಗಿತ್ತು ಅನ್ನೋದು.
ಕನ್ನಡದಲ್ಲೇ ಅತಿಹೆಚ್ಚು ಹಾಡಿದ್ದ ಎಸ್. ಜಾನಕಿ, 10 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದರು. ಕನ್ನಡದ ಪ್ರೇಮಗೀತೆಗಳಿಗೆ ಜೀವ ತುಂಬಿದ್ದ ಗಾಯಕಿ ಅನ್ನೋ ಖ್ಯಾತಿಗಳಿಸಿದವರು, ವೃತ್ತಿಜೀವನದ ಕೊನೆಯ ಪ್ರದರ್ಶನವನ್ನ ನಮ್ಮ ಮೈಸೂರಿನಲ್ಲೇ ನೀಡಿದ್ದರು. ಅಂದರೆ
ಮೈಸೂರಲ್ಲಿ ಕೊನೆಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಮೂಲಕ ಎಸ್ ಜಾನಕಿಯವರ ಜೀವನದ ಕೊನೆಯ ಸಾರ್ವಜನಿಕ ಸಂಗೀತ ಕಾರ್ಯಕ್ರಮ ಮೈಸೂರಲ್ಲೇ ನಡೆದಂತಾಗಿತ್ತು.
ಜಾನಕಮ್ಮ ಬರೀ ಹಾಡು ಹಾಡ್ತಿರಲಿಲ್ಲ. ಸಾಹಿತ್ಯದ ಜೊತೆಗೆ ಬೆರೆತು ಹೋಗ್ತಿದ್ದರು. ಹಾಗಾಗಿಯೇ ಪ್ರತಿ ಹಾಡಲ್ಲೂ ಆ ಮಟ್ಟಿಗಿನ ಸ್ವರಮಾಧುರ್ಯ ತುಂಬಿ ತುಳುಕ್ತಿತ್ತು. ಇವರ ಧ್ವನಿಗಾಗಿಯೇ ಕಾಯೋ ಅಭಿಮಾನಿಗಳಿದ್ದರು. ಇದೇ ಕಾರಣಕ್ಕೋ ಏನೋ ಲೆಕ್ಕವಿಲ್ಲದಷ್ಟು ಸನ್ಮಾನ, ಪ್ರಶಸ್ತಿಗಳು ಅರಸಿ ಬಂದಿದ್ದು.
20ಕ್ಕೂ ಹೆಚ್ಚು ಭಾಷೆಗಳಲ್ಲಿ ಗಾಯನದ ಮೋಡಿ ಹರಿಸಿದ ಜಾನಕಮ್ಮ, 48,000ಕ್ಕೂ ಹೆಚ್ಚು ಹಾಡು ಹಾಡಿದ್ದರು. 4 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಹೆಮ್ಮೆಯ ಗಾಯಕಿ, ಕರ್ನಾಟಕ ಸರ್ಕಾರದಿಂದಲೂ ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡಿದ್ದರು. ರಾಜಕುಮಾರ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಹುಡುಕಿಕೊಂಡು ಬಂದಿದ್ವು. ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್, ದಕ್ಷಿಣ ಭಾರತದ ಫಿಲ್ಮ್ ಫೇರ್ ಜೀವಮಾನದ ಸಾಧನೆ ಪ್ರಶಸ್ತಿ, 10 ಬಾರಿ ಆಂಧ್ರಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು. 2013ರಲ್ಲಿ ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ್ದ ಜಾನಕಮ್ಮ, 2017ರಲ್ಲಿ ಗಾಯನಕ್ಕೆ ನಿವೃತ್ತಿ ಹೇಳಿದ್ದರು.













