Last Updated:
2024ರ ಆಗಸ್ಟ್ 5 ರಂದು ವಿದ್ಯಾರ್ಥಿ ದಂಗೆಯ ಕಾರಣದಿಂದ ಭಾರತಕ್ಕೆ ಓಡಿಹೋಗಿ ಆಶ್ರಯ ಪಡೆದಿದ್ದ ಅವರು, ಇದೀಗ ಎರಡು ವರ್ಷಗಳ ಬಳಿಕ ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ ಈ ಪ್ರಕಟಣೆ ಹೊರಡಿಸಿದ್ದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಬುಧವಾರ ತಮ್ಮ ತಾಯ್ನಾಡಿಗೆ ಹಿಂತಿರುಗುವುದಾಗಿ ಘೋಷಿಸಿದ್ದಾರೆ. ಬಂಧನ, ಜೈಲುವಾಸ ಅಥವಾ ಜೀವಕ್ಕೆ ಅಪಾಯ ಸಂಭವಿಸಬಹುದು ಎಂಬುದನ್ನು ಅರಿತಿದ್ದರೂ ತಮ್ಮ ಜನರೊಂದಿಗೆ ನಿಲ್ಲಲು ಸಿದ್ಧರಾಗಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಾಂಗ್ಲಾದೇಶವನ್ನು ತೊರೆದ ನಂತರ ನವದೆಹಲಿಯಿಂದ ಮೊದಲ ಬಾರಿಗೆ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ನಾನು ಬಾಂಗ್ಲಾದೇಶಕ್ಕೆ ಹೋದರೆ ನನ್ನನ್ನು ಕೊಲ್ಲಬಹುದು, ಬಂಧಿಸಬಹುದು, ಸೆರೆಮನೆಗೆ ಕಳುಹಿಸಬಹುದು. ಆದರೆ ನನಗೆ ಭಯವಿಲ್ಲ, ನನ್ನ ಜೀವನ ವೈಯಕ್ತಿಕ ಸುರಕ್ಷತೆಯ ಲೆಕ್ಕಾಚಾರಗಳನ್ನು ದಾಟಿ ಹೋಗಿದೆ ಎಂದು ಹೇಳಿದ್ದಾರೆ.
2024ರ ಆಗಸ್ಟ್ 5 ರಂದು ವಿದ್ಯಾರ್ಥಿ ದಂಗೆಯ ಕಾರಣದಿಂದ ಭಾರತಕ್ಕೆ ಓಡಿಹೋಗಿ ಆಶ್ರಯ ಪಡೆದಿದ್ದ ಅವರು, ಇದೀಗ ಎರಡು ವರ್ಷಗಳ ಬಳಿಕ ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ ಈ ಪ್ರಕಟಣೆ ಹೊರಡಿಸಿದ್ದಾರೆ.
” ನನಗೆ ಏನೇ ಆದರೂ ಪರವಾಗಿಲ್ಲ, ನನ್ನ ಜನರ ಬಳಿಗೆ ಹಿಂತಿರುಗುತ್ತೇನೆ. ನನ್ನ ಪ್ರೀತಿಯ ದೇಶಬಂಧುಗಳು ಕಷ್ಟಪಡುತ್ತಿರುವಾಗ ನಾನು ದೂರ ಉಳಿಯಲು ಸಾಧ್ಯವಿಲ್ಲ. ಡಿಸೆಂಬರ್ ತಿಂಗಳಲ್ಲಿ ಹಿಂತಿರುಗಲು ಬಯಸುತ್ತೇನೆ, ಶೀಘ್ರದಲ್ಲೇ ದಿನಾಂಕವನ್ನ ಘೋಷಣೆ ಮಾಡುವೆ” ಎಂದು ಅವರು ಹೇಳಿದ್ದಾರೆ. ತಮ್ಮ ಹಿಂತಿರುಗುವಿಕೆಯ ಏಕೈಕ ಉದ್ದೇಶ ಜನರ ಪಕ್ಕದಲ್ಲಿ ನಿಂತು ಅವರ ಜೀವನವನ್ನು ಸುಧಾರಿಸಲು ಸಹಾಯ ಮಾಡುವುದು” ಎಂದು ಅವರು ತಿಳಿಸಿದ್ದಾರೆ.
2024ರ ಆಗಸ್ಟ್‌ನಲ್ಲಿ ನಡೆದ ಮೀಸಲಾತಿ ವಿರೋಧಿ ಪ್ರತಿಭಟನೆಗಳು ಕೇವಲ ವಿದ್ಯಾರ್ಥಿಗಳ ಸ್ವಯಂಪ್ರೇರಿತ ಹೋರಾಟವಾಗಿರಲಿಲ್ಲ, ಬದಲಿಗೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಜಾಗತಿಕ ಮತ್ತು ದೇಶೀಯ ಶಕ್ತಿಗಳು ವ್ಯವಸ್ಥಿತವಾಗಿ ರೂಪಿಸಿದ ರಾಜಕೀಯ ಪಿತೂರಿ ಎಂಬುದು ಹಸೀನಾ ಅವರ ಗಂಭೀರ ಆರೋಪವಾಗಿದೆ.
ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿದ್ದ ನೊಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನುಸ್ ಅವರ ನೇತೃತ್ವದ ಆಡಳಿತವು ಈ ದಂಗೆಯನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವಿರೋಧಿ ಮಾರ್ಗದಲ್ಲಿ ಅಧಿಕಾರ ಹಿಡಿಯಿತು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.
ಹಸೀನಾ ತಮ್ಮ ರಾಜಕೀಯ ಪಯಣದಲ್ಲಿನ ಹಿಂದಿನ ಸವಾಲುಗಳನ್ನು ನೆನಪಿಸಿಕೊಂಡಿದ್ದಾರೆ. “1971ರಲ್ಲಿ ನಾನು ನನ್ನ ತಾಯಿಯೊಂದಿಗೆ ಸೆರೆಯಲ್ಲಿದ್ದೆ. ನನ್ನ ಮಗ ಜಾಯ್ ಸೆರೆಯಲ್ಲೇ ಹುಟ್ಟಿದ. 1975ರಲ್ಲಿ ನನ್ನ ಕುಟುಂಬವನ್ನು ಕಳೆದುಕೊಂಡೆ. ಆರು ವರ್ಷಗಳ ಕಾಲ ಗಡಿಪಾರಿನಲ್ಲಿದ್ದೆ. ನನ್ನ ಇಡೀ ಜೀವನವನ್ನು ಬಾಂಗ್ಲಾದೇಶದ ಜನರೊಂದಿಗೆ ಕಳೆದಿದ್ದೇನೆ. ಬಲವಂತವಾಗಿ ನನ್ನನ್ನು ದೇಶದಿಂದ ದೂರ ಇಡಲಾಗಿದೆಯೇ ಹೊರತು, ಜನರ ಹೃದಯದಿಂದ ನನ್ನನ್ನು ಬೇರ್ಪಡಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಅವರು ತಮ್ಮ ಪಕ್ಷ ಅವಾಮಿ ಲೀಗ್‌ನ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ತೆರವುಗೊಳಿಸಬೇಕು, ಪಕ್ಷದ ನಾಯಕರನ್ನು ಬಿಡುಗಡೆ ಮಾಡಬೇಕು ಮತ್ತು ಸದಸ್ಯರ ವಿರುದ್ಧದ ಕಾನೂನು ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ತಮ್ಮ ನಿಷೇಧಿತ ‘ಅವಾಮಿ ಲೀಗ್’ ಪಕ್ಷದ ಹಿರಿಯ ನಾಯಕರೊಂದಿಗೆ ಮರಳಿ, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಮುಕ್ತ ಚುನಾವಣೆಗಾಗಿ ಹೋರಾಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು (ICT) ಅವರಿಗೆ ಮರಣದಂಡನೆ ವಿಧಿಸಿದೆ. ಆದರೆ ಈ ತೀರ್ಪನ್ನು “ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರ” ಎಂದು ಕರೆದಿರುವ ಅವರು, ನ್ಯಾಯಾಲಯದಲ್ಲೇ ಇದನ್ನು ಎದುರಿಸುವುದಾಗಿ ತಿಳಿಸಿದ್ದಾರೆ.
Sheikh Hasina: ನನ್ನನ್ನ ಕೊಲ್ಲಲಿ, ಜೈಲಿಗೆ ಹಾಕಲಿ, ನಾನು ನನ್ನ ಜನರ ಬಳಿಗೆ ಹಿಂತಿರುಗುತ್ತೇನೆ: ಬಾಂಗ್ಲಾಕ್ಕೆ ಹಿಂತಿರುವುದಾಗಿ ಮಾಜಿ ಪಿಎಂ ಶೇಖ್ ಹಸೀನಾ ಘೋಷಣೆ














