Last Updated:
ಸಲ್ಮಾನ್ ಖಾನ್ ಅವರ ಹೊಸ ಹೇರ್ಸ್ಟೈಲ್ ನೋಡಿದ ಅನೇಕ ಅಭಿಮಾನಿಗಳಿಗೆ ಅವರ ವೃತ್ತಿಜೀವನದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ಒಂದಾದ ‘ತೇರೆ ನಾಮ್’ ಚಿತ್ರದ ರಾಧೆ ಪಾತ್ರ ನೆನಪಾಗಿದೆ. 2003ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸಲ್ಮಾನ್ ಅವರ ಕರಿಯರ್ನಲ್ಲಿ ವಿಶೇಷ ಮೈಲುಗಲ್ಲಾಗಿತ್ತು.
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ‘ಲಗಾನ್’ (Lagaan) ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಅದ್ಧೂರಿ ಸಂಭ್ರಮಾಚರಣೆ ನಡೆಯಿತು. ಬಾಲಿವುಡ್ನ ಅನೇಕ ಗಣ್ಯ ತಾರೆಯರು ಭಾಗವಹಿಸಿದ್ದ ಈ ಕಾರ್ಯಕ್ರಮ ದಲ್ಲಿ ಎಲ್ಲರ ಗಮನ ಸೆಳೆದದ್ದು ಸಲ್ಮಾನ್ ಖಾನ್ (Salman Khan) ಅವರ ಹೊಸ ಲುಕ್. ವಿಭಿನ್ನ ಹೇರ್ಸ್ಟೈಲ್ ಮತ್ತು ಸ್ಟೈಲಿಶ್ ಗಡ್ಡದೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡ ಸಲ್ಲು ಭಾಯ್ ಅವರ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಆಮಿರ್ ಖಾನ್ ಅಭಿನಯದ ಐತಿಹಾಸಿಕ ಯಶಸ್ಸಿನ ಚಿತ್ರ ‘ಲಗಾನ್’ ಭಾರತೀಯ ಸಿನಿಮಾದ ಮೈಲಿಗಲ್ಲುಗಳಲ್ಲೊಂದು. ಚಿತ್ರದ 25ನೇ ವರ್ಷದ ಸಂಭ್ರಮಾಚರಣೆಗೆ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಮಿರ್ ಖಾನ್, ಸಲ್ಮಾನ್ ಖಾನ್, ಕರೀನಾ ಕಪೂರ್ ಖಾನ್ ಸೇರಿದಂತೆ ಹಲವಾರು ಸಿನಿಮಾ ತಾರೆಯರು ಭಾಗವಹಿಸಿದ್ದರು.
ವೇದಿಕೆಯ ಮೇಲೆ ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಕಾಣಿಸಿಕೊಂಡ ಕ್ಷಣ ಎಲ್ಲರ ಗಮನ ಸೆಳೆದಿದೆ. ಬಾಲಿವುಡ್ನ ಇಬ್ಬರು ಖಾನ್ಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ದೊರೆತಿದ್ದರಿಂದ ಕಾರ್ಯಕ್ರಮದ ವಿಡಿಯೋಗಳು ಮತ್ತು ಫೋಟೋಗಳು ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಸಂಪೂರ್ಣ ಹೊಸ ಮೇಕ್ ಓವರ್ನಲ್ಲಿ ಕಾಣಿಸಿಕೊಂಡರು. ಶಾರ್ಟ್ ಬಝ್-ಕಟ್ ಹೇರ್ಸ್ಟೈಲ್ ಮತ್ತು ನೀಟಾಗಿ ಟ್ರಿಮ್ ಮಾಡಲಾದ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಭಾಯ್ ಮತ್ತೆ ರಾಧೆ ಆಗಿ ಬಂದಿದ್ದಾರೆ, ರಾಧೆ ಕಮ್ಬ್ಯಾಕ್ 2027, ತೇರೆ ನಾಮ್ 2 ಬರಬಹುದೇ? ಎಂಬ ಕಾಮೆಂಟ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಕೆಲವರು ಈ ಹೊಸ ಲುಕ್ ಹಿಂದಿನ ಜನಪ್ರಿಯ ಪಾತ್ರದ ಪ್ರಭಾವವನ್ನು ಮತ್ತೊಮ್ಮೆ ನೆನಪಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾರ್ಯಕ್ರಮದ ವೇಳೆ ಸೆರೆಹಿಡಿಯಲಾದ ಸಲ್ಮಾನ್ ಖಾನ್ ಅವರ ವಿಡಿಯೋಗಳು ಮತ್ತು ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅವರು ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರೊಂದಿಗೆ ಹೊಸ ಚಿತ್ರವನ್ನು ಘೋಷಿಸಿದ್ದರು. ಸದ್ಯಕ್ಕೆ ‘SVC63’ ಎಂಬ ತಾತ್ಕಾಲಿಕ ಹೆಸರಿನಲ್ಲಿ ಗುರುತಿಸಲ್ಪಡುತ್ತಿರುವ ಈ ಬಿಗ್ ಬಜೆಟ್ ಸಿನಿಮಾ ಈಗಾಗಲೇ ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಖ್ಯಾತ ನಿರ್ಮಾಣ ಸಂಸ್ಥೆ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
Bangalore [Bangalore],Bangalore,Karnataka













