Richa Chadha: ನಟನೆಗೆ ದೀರ್ಘ ವಿರಾಮ ನೀಡಿದ್ದೇಕೆ? ತಾಯಿಯಾದ ಬಳಿಕದ ಸವಾಲು ಬಿಚ್ಚಿಟ್ಟ ರಿಚಾ ಚಡ್ಡಾ | | ACTPnews

Richa Chadha: ನಟನೆಗೆ ದೀರ್ಘ ವಿರಾಮ ನೀಡಿದ್ದೇಕೆ? ತಾಯಿಯಾದ ಬಳಿಕದ ಸವಾಲು ಬಿಚ್ಚಿಟ್ಟ ರಿಚಾ ಚಡ್ಡಾ |


ರಿಚಾ ಛಡ್ಡಾ ಮತ್ತು ನಟ ಅಲಿ ಫಜಲ್ 2024ರ ಜುಲೈನಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದರು. ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಜುನೈರಾ ಇಡಾ ಫಜಲ್ ಎಂದು ಹೆಸರಿಡಲಾಗಿದೆ. ಮಗಳ ಆಗಮನದ ಬಳಿಕ ರಿಚಾ ತಮ್ಮ ವೃತ್ತಿಜೀವನಕ್ಕಿಂತ ಆರೋಗ್ಯ ಮತ್ತು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿರುವ ರಿಚಾ, ಹೆರಿಗೆಯ ನಂತರ ದೇಹ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು ಎಂದು ಹೇಳಿದ್ದಾರೆ. ಸಹಜ ಹೆರಿಗೆಯ ವೇಳೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಕಳೆದುಕೊಂಡಿದ್ದರಿಂದ ದೇಹ ಸಹಜ ಸ್ಥಿತಿಗೆ ಮರಳಲು ಸಮಯ ಹಿಡಿಯಿತು ಎಂದು ಅವರು ತಿಳಿಸಿದ್ದಾರೆ. ಈ ಕಾರಣದಿಂದಾಗಿ ತಕ್ಷಣವೇ ನಟನೆಗೆ ಮರಳುವುದು ಸಾಧ್ಯವಾಗಲಿಲ್ಲ ಎಂದು ರಿಚಾ ವಿವರಿಸಿದ್ದಾರೆ.

ಇದನ್ನೂ ಓದಿ: Savithri Sridharan: 40 ವರ್ಷ ರಂಗಭೂಮಿಯಲ್ಲಿ ಸೇವೆ, ಖ್ಯಾತ ಮಲಯಾಳಂ ನಟಿ ಇನ್ನಿಲ್ಲ

ಹೆರಿಗೆಯ ನಂತರದ ಆರುರಿಂದ ಎಂಟು ತಿಂಗಳ ಅವಧಿಯಲ್ಲಿ ವಿಶ್ರಾಂತಿ ಪಡೆಯುವುದಕ್ಕಿಂತಲೂ ಕೆಲಸದ ಜವಾಬ್ದಾರಿಗಳು ಹೆಚ್ಚಾಗಿದ್ದವು ಎಂದು ರಿಚಾ ಹೇಳಿದ್ದಾರೆ. ನಿರ್ಮಾಪಕಿಯಾಗಿ ತಾವು ಕೆಲಸ ಮಾಡಿದ್ದ ಗರ್ಲ್ಸ್ ವಿಲ್ ಬಿ ಗರ್ಲ್ಸ್ ಚಿತ್ರದ ಬಿಡುಗಡೆಗಾಗಿ ಸಾಕಷ್ಟು ಸಮಯ ಮತ್ತು ಶ್ರಮ ವ್ಯಯಿಸಬೇಕಾಗಿತ್ತು.

ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ವಿವಿಧ ವೇದಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು, ಪ್ರಚಾರ ಮತ್ತು ಇತರ ಸಿದ್ಧತೆಗಳನ್ನು ನೋಡಿಕೊಳ್ಳುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಅವರು ಒಂದೇ ಸಮಯದಲ್ಲಿ ನಿರ್ವಹಿಸಿದ್ದರು. ಇದರಿಂದ ದೇಹದ ಮೇಲೆ ಹೆಚ್ಚಿನ ಒತ್ತಡ ಬಿದ್ದಿತ್ತು ಎಂದು ರಿಚಾ ಹೇಳಿದ್ದಾರೆ.

ಹೆರಿಗೆಯ ನಂತರ ವಿಶ್ರಾಂತಿ ಪಡೆಯುವುದು, ಅಗತ್ಯವಾದ ವಿಟಮಿನ್‌ಗಳನ್ನು ತೆಗೆದುಕೊಳ್ಳುವುದು ಮತ್ತು ದೇಹಕ್ಕೆ ಸಂಪೂರ್ಣ ಚೇತರಿಕೆಯ ಸಮಯ ನೀಡುವುದು ಅಗತ್ಯವಾಗಿತ್ತು ಎಂದು ರಿಚಾ ತಿಳಿಸಿದ್ದಾರೆ. ಆ ಸಮಯದಲ್ಲಿ ತಲೆ ಮಂಕಾಗಿರುವಂತಹ ಅನುಭವವೂ ಆಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ತಾಯ್ತನದ ಆರಂಭಿಕ ಹಂತದಲ್ಲೇ ವೃತ್ತಿಪರ ಜವಾಬ್ದಾರಿಗಳನ್ನೂ ನಿಭಾಯಿಸಬೇಕಾಗಿದ್ದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಪಡೆಯುವುದು ಮುಖ್ಯವಾಗಿತ್ತು ಎಂಬುದನ್ನು ರಿಚಾ ತಮ್ಮ ಅನುಭವದ ಮೂಲಕ ವಿವರಿಸಿದ್ದಾರೆ. ಹೀಗಾಗಿ ನಟನೆಗೆ ವಿರಾಮ ನೀಡಿದ್ದು ವೃತ್ತಿಜೀವನದಿಂದ ದೂರವಾಗುವ ನಿರ್ಧಾರವಲ್ಲ, ಬದಲಿಗೆ ಆ ಸಮಯದ ಅಗತ್ಯವಾಗಿತ್ತು ಎಂಬುದು ಮಾತುಗಳಿಂದ ಸ್ಪಷ್ಟವಾಗುತ್ತದೆ.

ಮುಸಾಫಿರಿಯನ್ನು ಅವರು ರಚಿಸಿ, ಬರೆದು, ನಿರ್ಮಿಸಿ ಹಾಗೂ ನಿರೂಪಣೆ ಮಾಡಿದ್ದಾರೆ. ನಾನ್-ಫಿಕ್ಷನ್ ಕ್ಷೇತ್ರದಲ್ಲಿ ಇದು ಅವರ ಮೊದಲ ಪ್ರಯತ್ನವಾಗಿದ್ದು, ಮುಂಬೈ ನಗರಕ್ಕೆ ತಾವು ಬರೆದ ಪ್ರೇಮಪತ್ರದಂತೆ ಈ ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದ್ದಾರೆ.

ಮಗಳು ಜುನೈರಾ ಆಗಮನದ ಬಳಿಕ ಜಗತ್ತನ್ನು ನೋಡುವ ತಮ್ಮ ದೃಷ್ಟಿಕೋನದಲ್ಲಿಯೂ ಬದಲಾವಣೆಯಾಗಿದೆ ಎಂದು ರಿಚಾ ಹೇಳಿದ್ದಾರೆ. ತಮ್ಮ ಮಗಳು ಯಾವ ರೀತಿಯ ಜಗತ್ತಿನಲ್ಲಿ ಬೆಳೆಯಬೇಕು ಎಂಬ ವಿಚಾರವನ್ನು ತಾಯಿಯಾಗಿ ಹೆಚ್ಚು ಆಲೋಚಿಸಲು ಆರಂಭಿಸಿದ್ದಾಗಿ ತಿಳಿಸಿದ್ದಾರೆ.

ಬಾಲಿವುಡ್‌ನಲ್ಲಿ ಮಹಿಳಾ ಪಾತ್ರಗಳ ಬದಲಾವಣೆಯ ಬಗ್ಗೆಯೂ ರಿಚಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಮ್ಮ ಬಳಿ ಬರುತ್ತಿರುವ ಕೆಲಸದ ಬಗ್ಗೆ ಸಂತಸವಿದೆ ಎಂದಿರುವ ಅವರು, ಮಹಿಳೆಯರನ್ನು ಚಿತ್ರಿಸುವ ರೀತಿಯಲ್ಲಿ ಇನ್ನಷ್ಟು ಬದಲಾವಣೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಮಹಿಳಾ ಪಾತ್ರಗಳನ್ನು ಉತ್ತಮವಾಗಿ ಬರೆಯಲಾಗುತ್ತಿದೆ. ಆದರೆ ಕೆಲವೊಮ್ಮೆ ಮಹಿಳೆಯರನ್ನು ನೋಡುವ ದೃಷ್ಟಿಕೋನ ಮೇಲ್ನೋಟಕ್ಕೆ ಸೀಮಿತವಾಗುತ್ತದೆ ಎಂಬುದು ಅವರ ಅಭಿಪ್ರಾಯ. ಮಹಿಳೆಯರ ಕಥೆಯನ್ನು ಮಹಿಳೆಯರೇ ಬರೆಯುವ ಸಂದರ್ಭಗಳಲ್ಲಿ ಅವರ ಅನುಭವಗಳು ಮತ್ತು ದೃಷ್ಟಿಕೋನಗಳು ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರಬಹುದು ಎಂದು ರಿಚಾ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed