Bigg Boss: ಕ್ಯಾನ್ಸರ್ ಚಿಕಿತ್ಸೆಯ ನಡುವೆ ಆರೋಗ್ಯದಲ್ಲಿ ಏರುಪೇರು; ಸಾವು-ಬದುಕಿನ ಹೋರಾಟದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ! | | ACTPnews

Bigg Boss: ಕ್ಯಾನ್ಸರ್ ಚಿಕಿತ್ಸೆಯ ನಡುವೆ ಆರೋಗ್ಯದಲ್ಲಿ ಏರುಪೇರು; ಸಾವು-ಬದುಕಿನ ಹೋರಾಟದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ! |


ಬಿಗ್ ಬಾಸ್ ಮಲಯಾಳಂ 7ರ ಸ್ಪರ್ಧಿಯಾಗಿದ್ದ ರೇಣು ಸುಧಿಗೆ ಕ್ಯಾನ್ಸರ್ ಇರುವುದು ಇತ್ತೀಚೆಗೆ ಬಹಿರಂಗವಾಗಿತ್ತು. ಐದು ಸುತ್ತಿನ ಕಿಮೊಥೆರಪಿ ಚಿಕಿತ್ಸೆ ಪಡೆದ ಬಳಿಕ  ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದೆ. ಪ್ರಸ್ತುತ ಅವರನ್ನು ಕೋಟ್ಟಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಈ ಕುರಿತು ರೇಣು ಆಪ್ತ ಗೆಳತಿ ಹಾಗೂ ಬಿಗ್ ಬಾಸ್ ಸಹ ಸ್ಪರ್ಧಿ ಸಾರಿಕಾ ಕೆಬಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ರೇಣು ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿದ್ದು, ಪ್ಲೇಟ್‌ಲೆಟ್‌ಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಸಾರಿಕಾ ತಿಳಿಸಿದ್ದಾರೆ.

ರೇಣು ದೇಹ ಮತ್ತೊಂದು ಸುತ್ತಿನ ಕಿಮೊಥೆರಪಿಯನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸಾರಿಕಾ ಹೇಳಿದ್ದಾರೆ. ಹೀಗಾಗಿ ಮತ್ತೊಂದು ಸುತ್ತಿನ ಚಿಕಿತ್ಸೆಯ ಅಪಾಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ವೈದ್ಯರು ಸಲಹೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

ಆರೋಗ್ಯ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರೇಣು ಅವರಿಗೆ ಆಹಾರ ಸೇವಿಸುವುದಕ್ಕೂ ತೊಂದರೆಯಾಗುತ್ತಿದೆ ಎನ್ನಲಾಗಿದೆ. ಈ ಕಾರಣದಿಂದ ಅವರಿಗೆ ಪಿಐಸಿಸಿ ಲೈನ್ ಅಳವಡಿಸಲಾಗಿದೆ ಎಂದು ಆಪ್ತರು ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ರೇಣು ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡ ಸಾರಿಕಾ ಭಾವುಕರಾಗಿದ್ದು, ತಮ್ಮ ಗೆಳತಿಯ ಸ್ಥಿತಿ ಕುರಿತು ಅಭಿಮಾನಿಗಳು ಹಾಗೂ ಹಿತೈಷಿಗಳು ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾರೆ.

ರೇಣು ಸುಧಿ ತಮ್ಮ ಕ್ಯಾನ್ಸರ್ ಹೋರಾಟದ ಕುರಿತು ಈ ಹಿಂದೆ ಹಲವು ಬಾರಿ ಮಾತನಾಡಿದ್ದರು. ತಮ್ಮ 15ನೇ ವಯಸ್ಸಿನಲ್ಲೇ ದೇಹದಲ್ಲಿ ಸಣ್ಣ ಗಡ್ಡೆಯೊಂದನ್ನು ಗಮನಿಸಿದ್ದಾಗಿ ಅವರು ಹೇಳಿಕೊಂಡಿದ್ದರು. ಆಗ ಅದರ ಗಂಭೀರತೆ ತಮಗೆ ತಿಳಿದಿರಲಿಲ್ಲ ಎಂದು ರೇಣು ವಿವರಿಸಿದ್ದರು.

ನಂತರ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದರು. ಆಗ ತಕ್ಷಣ ಯಾವುದೇ ಅಪಾಯವಿಲ್ಲ, ಆದರೆ ಮುಂದೆ ಅದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು ಎಂದು ಹೇಳಿದ್ದರು.

ಇದನ್ನೂ ಓದಿ: Savithri Sridharan: 40 ವರ್ಷ ರಂಗಭೂಮಿಯಲ್ಲಿ ಸೇವೆ, ಖ್ಯಾತ ಮಲಯಾಳಂ ನಟಿ ಇನ್ನಿಲ್ಲ

ಪತಿಯ ನಿಧನದ ಬಳಿಕ ಮತ್ತೆ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ರೇಣು ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ವೈದ್ಯರ ಸಲಹೆಯಂತೆ ಮ್ಯಾಮೊಗ್ರಾಮ್ ಹಾಗೂ ಬಯಾಪ್ಸಿ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದರು. ವರದಿ ಬಂದಾಗ ತಾವು ಮೂರನೇ ಹಂತದ ಕ್ಯಾನ್ಸರ್‌ನಲ್ಲಿರುವುದು ತಿಳಿಯಿತು ಎಂದು ರೇಣು ಈ ಹಿಂದೆ ಹೇಳಿಕೊಂಡಿದ್ದರು.

ವೈದ್ಯರು ತಕ್ಷಣ ಕಿಮೊಥೆರಪಿ ಆರಂಭಿಸುವಂತೆ ಸಲಹೆ ನೀಡಿದ್ದರು. ಈ ಕಠಿಣ ಪರಿಸ್ಥಿತಿಯ ನಡುವೆಯೂ ರೇಣು ತಮ್ಮ ಅನುಭವವನ್ನು ಮುಕ್ತವಾಗಿ ಹಂಚಿಕೊಂಡು, ಮಹಿಳೆಯರಲ್ಲಿ ಆರೋಗ್ಯ ತಪಾಸಣೆಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು.

ತಮ್ಮ ಅನುಭವವನ್ನು ಹಂಚಿಕೊಂಡಿದ್ದ ರೇಣು, ನೋವು ಇಲ್ಲದ ಸಣ್ಣ ಗಡ್ಡೆಯನ್ನೂ ನಿರ್ಲಕ್ಷಿಸಬಾರದು ಎಂದು ಮಹಿಳೆಯರಿಗೆ ಸಲಹೆ ನೀಡಿದ್ದರು. ದೇಹದಲ್ಲಿ ಯಾವುದೇ ಅಸಹಜ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದ್ದರು.

ಕ್ಯಾನ್ಸರ್ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣದ ಅಗತ್ಯವಿರುವ ಹಿನ್ನೆಲೆಯಲ್ಲಿ ರೇಣು ಆರ್ಥಿಕವಾಗಿಯೂ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದಾದಾರಿಕೆ ಆಧಾರಿತ ವಿಡಿಯೋಗಳು, ಯೂಟ್ಯೂಬ್ ಕಾರ್ಯಕ್ರಮಗಳು ಹಾಗೂ ಸಂಗೀತ ಆಲ್ಬಮ್‌ಗಳಲ್ಲಿ ಭಾಗವಹಿಸುವ ಮೂಲಕ ಚಿಕಿತ್ಸೆಗೆ ಹಣ ಹೊಂದಿಸಲು ಪ್ರಯತ್ನಿಸುತ್ತಿದ್ದಾಗಿ ಅವರು ಈ ಹಿಂದೆ ತಿಳಿಸಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed