[ad_1]
Last Updated:
ರಣಜಿ ಟ್ರೋಫಿ 2026-27ರ ಎಲಿಟ್ ಗ್ರೂಪ್-ಬಿಯಲ್ಲಿ ಕರ್ನಾಟಕದ ಪರ ಕಣಕ್ಕಿಳಿದಿದ್ದ ರಾಹುಲ್, ಆಂಧ್ರಪ್ರದೇಶ (Andhra Pradesh) ವಿರುದ್ಧದ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟಾದರು. ರಾಹುಲ್ ಮಾತ್ರವಲ್ಲದೆ, ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಕೂಡ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ (KL Rahul) ಅವರ ದೇಶಿ ಕ್ರಿಕೆಟ್ ಪ್ರದರ್ಶನ ತೀರಾ ಕಳಪೆಯಾಗಿದೆ. ರಣಜಿ ಟ್ರೋಫಿ 2026-27ರ (Ranji Trophy) ಎಲಿಟ್ ಗ್ರೂಪ್-ಬಿಯಲ್ಲಿ ಕರ್ನಾಟಕದ ಪರ ಕಣಕ್ಕಿಳಿದಿದ್ದ ರಾಹುಲ್, ಆಂಧ್ರಪ್ರದೇಶ (Andhra Pradesh) ವಿರುದ್ಧದ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟಾದರು. ಈ ವೇಳೆ ಅವರು ಒಟ್ಟು 11 ಎದುರಿಸಿದ ಎಸೆತಗಳನ್ನು ಎದುರಿಸಿದ್ದರು. ಈ ಮೂಲಕ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಕೆ.ಎಲ್. ರಾಹುಲ್ ಘೋರ ವೈಫಲ್ಯ ಅನುಭವಿಸಿದರು.
ಕೇವಲ ರಾಹುಲ್ ಮಾತ್ರವಲ್ಲದೆ, ಕರ್ನಾಟಕ ತಂಡದ ಟಾಪ್ ಆರ್ಡರ್‌ನ ನಾಲ್ಕೂ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ರಾಹುಲ್ ಹೊರತುಪಡಿಸಿ ಮಯಾಂಕ್ ಅಗರ್ವಾಲ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಅವನೀಶ್ ಕೆ.ವಿ. ಖಾತೆ ತೆರೆಯುವ ಮೊದಲೇ ಔಟಾದರೆ, ಕರುಣ್ ನಾಯರ್ ಕೂಡ ಎರಡಂಕಿ ಮೊತ್ತ ದಾಟಲು ಸಾಧ್ಯವಾಗದೆ 8 ರನ್ ಗಳಿಸಿ ಔಟಾದರು. ಕರ್ನಾಟಕ ತಂಡದ ಮೊದಲ ಮೂರು ವಿಕೆಟ್‌ಗಳು ಕೇವಲ 9 ರನ್ ಇರುವಾಗಲೇ ಪತನಗೊಂಡಿದ್ದವು. ಬೆನ್ನುಬೆನ್ನಾಗಿ ವಿಕೆಟ್ ಉರುಳಿದ್ದರಿಂದ ಕರ್ನಾಟಕ ತಂಡದಲ್ಲಿ ತಲ್ಲಣದ ವಾತಾವರಣ ಸೃಷ್ಟಿಯಾಗಿತ್ತು.
ಆಂಧ್ರ ವಿರುದ್ಧದ ಈ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಸ್ಮರಣ್ ರವಿಚಂದ್ರನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದರು. ಆದರೆ, ಅವರ ಈ ನಿರ್ಧಾರ ತಂಡಕ್ಕೆ ಉಲ್ಟಾ ಹೊಡೆಯಿತು. ತಂಡವು ಕೇವಲ 22 ರನ್ ಗಳಿಸುವಷ್ಟರಲ್ಲಿ ತನ್ನ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ಸ್ವತಃ ನಾಯಕ ರವಿಚಂದ್ರನ್ ಅವರೇ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿ ಬಂತು. ಆರಂಭಿಕ 4 ವಿಕೆಟ್‌ಗಳು ಬಿದ್ದ ನಂತರ, ಸ್ಮರಣ್ ರವಿಚಂದ್ರನ್ ಅವರಿಗೆ ಕೃಷ್ಣನ್ ಶ್ರೀಜಿತ್ ಉತ್ತಮ ಸಾಥ್ ನೀಡಿದರು ಮತ್ತು ಇಬ್ಬರೂ ಸೇರಿ ತಂಡದ ಮೊತ್ತವನ್ನು 100 ರನ್ ದಾಟಿಸಿದರು. ಶ್ರೀಜಿತ್ 82 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ 58 ರನ್ಗಳಿಸಿ ಔಟ್ ಆದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಧೃತಿಗೆಡದ ಸ್ಮರಣ್ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದರು. 218 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಿತ 126 ರನ್ಗಳಿಸಿ ಔಟ್ ಆದರು. ಮಾಧವ್ ಬಜಾಜ್ 33 ರನ್ಗಳಿಸಿ ತಂಡದ ಮೂರನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಒಟ್ಟಾರೆ ಕರ್ನಾಟಕ ತಂಡ 82.1 ಓವರ್ಗಳಲ್ಲಿ 274 ರನ್ಗಳಿಗೆ ಆಲೌಟ್ ಆಗಿದೆ.
ಆಂಧ್ರ ಪ್ರದೇಶ ಪರ ಸೌರಭ್ ಕುಮಾರ್ 69ಕ್ಕೆ3, ಲಲಿತ್ ಮೋಹನ್ 87ಕ್ಕೆ2, ತ್ರಿಪುರಣ ವಿಜಯ್ 71ಕ್ಕೆ1, ಕೆವಿ ಸಸಿಕಾಂತ್ 10ಕ್ಕೆ2, ಕವುರಿ ಸಾಯಿತೇಜ್ 20ಕ್ಕೆ2 ವಿಕೆಟ್ ಪಡೆದರು.
ಹಿರಿಯ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅವರಿಗೆ ರಣಜಿ ಟ್ರೋಫಿ ಪಂದ್ಯಗಳು ಅತ್ಯಂತ ನಿರ್ಣಾಯಕವಾಗಿವೆ. ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ರಾಹುಲ್ ಅವರಿಗೆ ಇದು ಉತ್ತಮ ಸಿದ್ಧತೆಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ರಾಹುಲ್ ಟೀಮ್ ಇಂಡಿಯಾದ ಪ್ರಮುಖ ಸದಸ್ಯರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮುಂಬರುವ ರಣಜಿ ಟ್ರೋಫಿ ಪಂದ್ಯಗಳಲ್ಲಿ ಅವರು ಆಡಿದರೆ, ದೊಡ್ಡ ಮೊತ್ತದ ರನ್ ಗಳಿಸುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ.
[ad_2]
Source link














