Rajyasabha Election: ಇಬ್ಬರು ಕೇಂದ್ರ ಸಚಿವರಿಗೆ ರಾಜ್ಯಸಭಾ ಟಿಕೆಟ್​​ ಮಿಸ್​! ಮೋದಿ ಸಂಪುಟ ಪುನರಚನೆಯಾಗುತ್ತಾ? / Rajya Sabha Elections: Two Union Ministers Miss | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋದಿ ಸಂಪುಟ ಪುನರಚನೆಯಾಗುತ್ತಾ?


Last Updated:

ಶೀಘ್ರದಲ್ಲೇ ಮೋದಿ ಸಂಪುಟ ಪುನರಚನೆಯಾಗುತ್ತಾ? ರಾಜ್ಯಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯಾದಾಗಿನಿಂದ ಇದು ಚರ್ಚೆಯ ವಿಷಯವಾಗಿದೆ. ಕಾರಣ ಬಿಜೆಪಿ ಇಬ್ಬರು ಕೇಂದ್ರ ಸಚಿವರಿಗೆ ರಾಜ್ಯಸಭಾ ಟಿಕೆಟ್ ನೀಡಿಲ್ಲ. ಇಬ್ಬರೂ ಸಚಿವರ ರಾಜ್ಯಸಭಾ ಸ್ಥಾನಗಳ ಅವಧಿ ಜೂನ್ 21 ರಂದು ಮುಕ್ತಾಯಗೊಳ್ಳಲಿದೆ.

ಮೋದಿ ಸಂಪುಟ ಪುನರಚನೆಯಾಗುತ್ತಾ?
ಮೋದಿ ಸಂಪುಟ ಪುನರಚನೆಯಾಗುತ್ತಾ?

ಇಬ್ಬರು ಕೇಂದ್ರ ಸಚಿವರಿಗೆ (Central Ministers) ರಾಜ್ಯಸಭಾ ಟಿಕೆಟ್​​ (Rajyasabha Ticket) ಇಲ್ಲ ಎಂದು ಹೇಳಲಾಗಿದೆ. ಈ ಬೆನ್ನಲ್ಲೇ ಮೋದಿ ಸರ್ಕಾರದ ಸಂಪುಟದಲ್ಲಿ ಶೀಘ್ರದಲ್ಲೇ ಬದಲಾವಣೆ ಆಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿದೆ. ಹೌದು, ಮೋದಿ ಸಂಪುಟ ಪುನರಚನೆ ಗುಸುಗುಸು ಶುರುವಾಗಿದ್ದು, ರಾಜ್ಯಸಭಾ ಚುನಾವಣೆ ಮತ್ತು ಟಿಕೆಟ್ ಹಂಚಿಕೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿರುವ ಇಬ್ಬರು ಕೇಂದ್ರ ಸಚಿವರಿಗೆ ಈ ಬಾರಿ ರಾಜ್ಯಸಭಾ ಟಿಕೆಟ್ ಸಿಗದೇ ಇರುವುದರಿಂದ ಈ ವದಂತಿಗಳು ಇನ್ನಷ್ಟು ಬಲಗೊಂಡಿವೆ.

ಬಿಜೆಪಿ ಪಕ್ಷ ಮುಂಬರುವ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಕೇಂದ್ರ ಸಚಿವರಾದ ರವನೀತ್ ಸಿಂಗ್ ಬಿಟ್ಟು ಮತ್ತು ಜಾರ್ಜ್ ಕುರಿಯನ್ ಅವರಿಗೆ ಟಿಕೆಟ್ ನೀಡಿಲ್ಲ. ಇವರಿಬ್ಬರ ರಾಜ್ಯಸಭಾ ಅವಧಿ ಜೂನ್ 21 ರಂದು ಮುಕ್ತಾಯವಾಗುತ್ತಿದೆ.

ಇಬ್ಬರು ಕೇಂದ್ರ ಸಚಿವರಿಗೆ ರಾಜ್ಯಸಭಾ ಟಿಕೆಟ್​​ ಮಿಸ್​!

ಹೌದು, ಕೇಂದ್ರ ಸಚಿವರಾದ ರವನೀತ್ ಸಿಂಗ್ ಬಿಟ್ಟು ರಾಜಸ್ಥಾನದಿಂದ ಮತ್ತು ಜಾರ್ಜ್ ಕುರಿಯನ್ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವಧಿ ಮುಗಿಯುತ್ತಿರುವ ಈ ಇಬ್ಬರು ಸಚಿವರಿಗೆ ಮರುಅವಕಾಶ ಸಿಗದಿರುವುದು ಅವರ ಸಚಿವ ಸ್ಥಾನಗಳ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಾರ್ಜ್ ಕುರಿಯನ್ ಬಿಜೆಪಿ ಪಕ್ಷದೊಳಗಿನ ಪ್ರಮುಖ ಕ್ರಿಶ್ಚಿಯನ್ ಮುಖಂಡರಲ್ಲಿ ಒಬ್ಬರು. ಹಾಗಾಗಿ ಅವರಿಗೆ ರಾಜ್ಯಸಭಾ ಟಿಕೆಟ್ ಸಿಗದಿರುವುದು ಪಕ್ಷದ ಒಳ ರಾಜಕೀಯದ ದೃಷ್ಟಿಯಿಂದ ಗಮನಾರ್ಹ. ಇನ್ನೊಂದೆಡೆ, ರವನೀತ್ ಸಿಂಗ್ ಬಿಟ್ಟು ತಾವು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಇದರಿಂದ ಅವರು ಕೇಂದ್ರ ರಾಜಕೀಯದಿಂದ ರಾಜ್ಯ ರಾಜಕೀಯದತ್ತ ತಿರುಗುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಬಿಜೆಪಿ ಸಂಪುಟ ಪುನರಚನೆ ಸಾಧ್ಯತೆ!

ಇದೇ ವೇಳೆ, ಬಿಜೆಪಿ ಇತ್ತೀಚೆಗೆ ಕೆಲವು ಹಾಲಿ ಸಚಿವರಿಗೆ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ. ಉದಾಹರಣೆಗೆ, ಕೇಂದ್ರ ಸಚಿವ ಹರ್ಷ್ ಮಲ್ಹೋತ್ರಾ ಅವರನ್ನು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದೇ ರೀತಿ, ರಾಜ್ಯ ಸಚಿವ ಪಂಕಜ್ ಚೌಧರಿ ಅವರನ್ನು ಉತ್ತರ ಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಹೀಗಾಗಿ, ಸಚಿವ ಸ್ಥಾನದಿಂದ ಸಂಘಟನೆಗೆ ಜವಾಬ್ದಾರಿ ವರ್ಗಾವಣೆ ನಡೆಯುತ್ತಿರುವುದರಿಂದ ಸಂಪುಟ ಪುನರ್ರಚನೆ ಸಾಧ್ಯತೆಗಳ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿವೆ.

ಇನ್ನೊಂದು ಪ್ರಮುಖ ಅಂಶವೆಂದರೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ರಾಜ್ಯಸಭಾ ಅವಧಿ ನವೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಅವರ ಮುಂದಿನ ರಾಜಕೀಯ ಭವಿಷ್ಯ ಏನು ಎಂಬ ಪ್ರಶ್ನೆಯೂ ಈಗಲೇ ಕೇಳಿಬರುತ್ತಿದೆ.

ಜೂನ್ 18 ರಂದು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ

ಜೂನ್ 18 ರಂದು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಧ್ಯಪ್ರದೇಶದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಮತ್ತು ರಾಜಸ್ಥಾನದಿಂದ ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ತರುಣ್ ಚುಗ್ ಮೂಲತಃ ಪಂಜಾಬ್‌ನವರು, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪಕ್ಷದ ಸಂಘಟನಾ ಕೆಲಸ ನೋಡುತ್ತಿದ್ದಾರೆ. ಸತೀಶ್ ಪೂನಿಯಾ ಹರಿಯಾಣದ ಬಿಜೆಪಿ ಉಸ್ತುವಾರಿಯಾಗಿದ್ದು, 2023ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.

ಒಡಿಶಾದಲ್ಲಿ, ಬಿಜು ಜನತಾ ದಳವನ್ನು ತೊರೆದು ಇತ್ತೀಚೆಗೆ ಬಿಜೆಪಿಗೆ ಸೇರಿದ ದೇಬಾಶಿಸ್ ಸಮಂತ್ರೇ ಅವರನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರು ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದು, ನಂತರ ರಾಜೀನಾಮೆ ನೀಡಿದ್ದರು. ಗುಜರಾತ್‌ನಲ್ಲಿ ರಾಜುಭಾಯ್ ಶುಕ್ಲಾ, ಮುಖೇಶ್‌ಭಾಯ್ ರಥ್ವಾ, ಮಾನ್ಸಿಂಗ್ ಪರ್ಮಾರ್ ಮತ್ತು ಜಿತೇಂದ್ರ ಮೇಘಜಿಭಾಯ್ ಕಂಜಾರಿಯಾ ಅವರನ್ನು ಪಕ್ಷವು ನಾಮನಿರ್ದೇಶನ ಮಾಡಿದೆ. ಮಧ್ಯಪ್ರದೇಶದಿಂದ ರಜನೀಶ್ ಅಗರ್ವಾಲ್ ಕೂಡ ಕಣಕ್ಕಿಳಿದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ದೆಹಲಿ ಸಹ-ಪ್ರಭಾರಿ ಅಲ್ಕಾ ಗುರ್ಜರ್ ಅವರನ್ನು ರಾಜಸ್ಥಾನದಿಂದ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಮಣಿಪುರ ಬಿಜೆಪಿ ಅಧ್ಯಕ್ಷೆ ಎ. ಶಾರದಾ ದೇವಿ ಮತ್ತು ಅರುಣಾಚಲ ಪ್ರದೇಶದ ಹಿರಿಯ ನಾಯಕ ತೈ ಟಗಕ್ ಅವರನ್ನು ಪಕ್ಷವು ಕಣಕ್ಕಿಳಿಸಿದೆ.

ಈ ಎಲ್ಲ ಬೆಳವಣಿಗೆಗಳನ್ನು ಒಟ್ಟಿನಲ್ಲಿ ನೋಡಿದಾಗ, ಬಿಜೆಪಿ ಪಕ್ಷದೊಳಗಿನ ಸಮೀಕರಣಗಳು ಬದಲಾಗುತ್ತಿರುವುದು ಸ್ಪಷ್ಟವಾಗುತ್ತದೆ. ಕೆಲವರಿಗೆ ಸಂಘಟನಾ ಜವಾಬ್ದಾರಿ, ಕೆಲವರಿಗೆ ರಾಜ್ಯಸಭಾ ಅವಕಾಶ, ಕೆಲವರು ಪಟ್ಟಿಯಿಂದ ಹೊರಗುಳಿದ ಪರಿಸ್ಥಿತಿ ಇವೆಲ್ಲವೂ ಸೇರಿ ಮೋದಿ ಸಂಪುಟದಲ್ಲಿ ಶೀಘ್ರದಲ್ಲೇ ಪುನರ್ರಚನೆ ಆಗುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಆದರೆ ಅಂತಿಮ ನಿರ್ಧಾರವನ್ನು ಯಾವಾಗ ಮತ್ತು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed