Last Updated:
ನಟ ಪವನ್ ಕಲ್ಯಾಣ್ ಅವರ ಪುಟಾಣಿ ಅಭಿಮಾನಿ ನಿರಂಜನ್ ಇಂದು ಕೊನೆಯುಸಿರೆಳೆದಿದ್ದಾರೆ. ಹನುಮಕೊಂಡ ನಗರದ ಹನುಮಾನ್ ನಗರದಲ್ಲಿ ವಾಸಿಸುತ್ತಿದ್ದ 17 ವರ್ಷದ ನಿರಂಜನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ (DCM Pawan Kalyan) ಅವರ ಪುಟಾಣಿ ಅಭಿಮಾನಿ ನಿರಂಜನ್ ಇಂದು ಕೊನೆಯುಸಿರೆಳೆದಿದ್ದಾರೆ. ರಾಮು ಮತ್ತು ಮಾನಸ ದಂಪತಿಗಳ ಪುತ್ರನಾಗಿದ್ದ ನಿರಂಜನ್ (Niranjan), ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದರು. ನಿರಂಜನ್ಗೆ ಬಾಲ್ಯದಿಂದಲೇ ಪವನ್ ಕಲ್ಯಾಣ್ ಅಭಿಮಾನಿಯಾಗಿದ್ದ. ಒಂದು ಬಾರಿಯಾದರೂ ತನ್ನ ನೆಚ್ಚಿನ ನಟನನ್ನು ಭೇಟಿಯಾಗಬೇಕು ಎಂದು ಆಸೆಯಿಂದ ಇದ್ದ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ವತಃ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್, ನಡೆಯಲು ಆಗದ ಸ್ಥಿತಿಯಲ್ಲಿದ್ದ ತನ್ನ ಅಭಿಮಾನಿಯ ಮನೆಗೆ ಜೂನ್ 15 ರಂದು ಭೇಟಿ ನೀಡಿ ಆತನ ಆಸೆ ಈಡೇರಿಸಿದ್ದರು. ಈ ವೇಳೆ ತಿರುಮಲ (Tirumala) ಶ್ರೀ ವೆಂಕಟೇಶ್ವರ ಸ್ವಾಮಿ ಪ್ರಸಾದ ಹಾಗೂ ಅಕ್ಷತೆ ನೀಡಿ ಆತನ ಆರೋಗ್ಯ (Health) ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.
ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರನ್ನು ಅನುಕರಣೆ ಮಾಡಿ ನಿರಂಜನ್ ಮಾಡಿದ್ದ ವಿಡಿಯೋಗಳನ್ನು ತನ್ನ ನೆಚ್ಚಿನ ನಟನಿಗೆ ತೋರಿಸಿ ಬಾಲಕ ಸಂತಸಪಟ್ಟಿದ್ದ. ಈ ವೇಳೆ ಜನಸೇನಾ ಡೈರಿಯಲ್ಲಿ ‘ಪ್ರೀತಿಯ ನಿರಂಜನ್ ನಿನಗೆ ಆ ದುರ್ಗಾ ಮಾತೆಯ ಆಶೀರ್ವಾದಗಳೊಂದಿಗೆ ನೀನು ಚೆನ್ನಾಗಿ ಇರಬೇಕು ಎಂದು ಆಶಿಸುವ ಪವನ್ ಕಲ್ಯಾಣ್’ ಅಂತ ಬರೆದು ಆಟೋಗ್ರಾಫ್ ಕೂಡ ನೀಡಿದ್ದರು.
ಪವನ್ ಕಲ್ಯಾಣ್ ಅವರೇ ತಮ್ಮ ಮನೆಗೆ ಭೇಟಿ ನೀಡಿ ಅನಾರೋಗ್ಯದಿಂದ ಬಳಲುತ್ತಿದ್ದ ಮಗನೊಂದಿಗೆ ಮಾತನಾಡಿ ಆತನ ಮುಖದಲ್ಲಿ ನಗು ಅರಳುವಂತೆ ಮಾಡಿದ್ದಕ್ಕೆ ನಿರಂಜನ್ ಪೋಷಕರು ಕೂಡ ಸಂತಸ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ, ಆ ಕುಟುಂಬಕ್ಕೆ ಅಗತ್ಯವಿರುವ ಆರ್ಥಿಕ ನೆರವು, ಚಿಕಿತ್ಸೆ ಬೇಕಾಗಿರುವ ನೆರವು ಕೂಡ ನೀಡಿದ್ದರು. ಇದೇ ಸಂದರ್ಭದಲ್ಲಿ ತನ್ನ ಪುಟಾಣಿ ಅಭಿಮಾನಿಗೆ ಮಾತುಕೊಟ್ಟಿದ್ದ ನಟ ಪವನ್ ಕಲ್ಯಾಣ್, ನಾವಿಬ್ಬರು ಸೇರಿ ತಮ್ಮ ಮುಂದಿನ ಒಜಿ-2 ಸಿನಿಮಾ ನೋಡೋಣಾ, ನಿನ್ನನ್ನು ನನ್ನ ಸ್ಪೆಷಲ್ ಗೆಸ್ಟ್ ಆಗಿ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದರು. ಆದರೆ ಈ ಕನಸು ನನಸಾಗುವ ಮುನ್ನವೇ ನಿರಂಜನ್ ಇಹಲೋಕ ತ್ಯಜಿಸಿದ್ದಾನೆ.
ನಿರಂಜನ್, ಕೆಲ ಸಮಯದಿಂದ ‘ಡಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿ’ ಎಂಬ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ. ಈ ಆರೋಗ್ಯ ಸಮಸ್ಯೆಯಿಂದ ಬಳಲುವವರಿಗೆ ಕ್ರಮೇಣ ಮಾಂಸಖಂಡಗಳ ಬೆಳವಣಿಗೆ ನಿಂತು ಹೋಗುತ್ತದೆ. ಅಲ್ಲದೇ ದೇಹ ಬೆಳವಣಿಗೆ ನಡೆಯುವುದಿಲ್ಲ. ಈ ಸಮಸ್ಯೆಗೆ ಇದುವರೆಗೂ ಯಾವುದೇ ಚಿಕಿತ್ಸೆ ಇಲ್ಲ. ಸಮಯ ಕಳೆದಂತೆ ನಿರಂಜನ್ ಕಿಡ್ನಿಗಳು ಕೂಡ ಹಾನಿಯಾಗಿತ್ತು. ಚಿಕಿತ್ಸೆಗಾಗಿ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರಂಜನ್ ಬುಧವಾರ ಮುಂಜಾನೆ ಕೊನೆಯುಸಿರೆಳೆದಿದ್ದಾನೆ ಎಂದು ತೆಲುಗು ನ್ಯೂಸ್18 ವರದಿ ಮಾಡಿದೆ.
నిరంజన్ ఇక లేడనే వార్త నా హృదయాన్ని తీవ్రంగా కలచివేసింది.
కొద్ది రోజుల క్రితం హనుమకొండలో నిరంజన్ ఇంటికి వెళ్లి కలిసిన ఆ క్షణాలు ఇంకా నా మదిలో సజీవంగానే ఉన్నాయి. తీవ్రమైన అనారోగ్యంతో పోరాడుతూనే నా కోసం ఎదురుచూసిన ఆ చిన్నారి… నన్ను చూడగానే అతని ముఖంపై విరిసిన ఆ చిరునవ్వు… ఇవన్నీ… pic.twitter.com/uQ7ujh3La1
— Pawan Kalyan (@PawanKalyan) July 8, 2026
ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಪವನ್ ಕಲ್ಯಾಣ್ ಅಭಿಮಾನಿಗಳು ಕೂಡ ಬಾಲಕನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ನಡುವೆ ಅಭಿಮಾನಿಯ ಸಾವಿಗೆ ಸಂತಾಪ ಸೂಚಿಸಿರುವ ಪವನ್ ಕಲ್ಯಾಣ್, ನಿರಂಜನ್ ಇನ್ನಿಲ್ಲ ಎಂಬ ಸುದ್ದಿ ನನ್ನ ಹೃದಯವನ್ನು ಆಳವಾಗಿ ಮುಟ್ಟಿದೆ. ಕೆಲವು ದಿನಗಳ ಹಿಂದೆ ನಾನು ಹನುಮಕೊಂಡದಲ್ಲಿರುವ ನಿರಂಜನ್ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾದ ಆ ಕ್ಷಣಗಳು ಇನ್ನೂ ನನ್ನ ಮನಸ್ಸಿನಲ್ಲಿ ಜೀವಂತವಾಗಿವೆ. ಗಂಭೀರ ಕಾಯಿಲೆಯೊಂದಿಗೆ ಹೋರಾಡುತ್ತಾ ನನಗಾಗಿ ಕಾಯುತ್ತಿದ್ದ ಆ ಪುಟ್ಟ ಹುಡುಗ, ನನ್ನನ್ನು ನೋಡಿದಾಗ ಅವರ ಮುಖದಲ್ಲಿ ಮೂಡಿದ ಆ ನಗು. ಇವೆಲ್ಲವೂ ಮರೆಯಲಾಗದ ನೆನಪುಗಳಾಗಿ ಶಾಶ್ವತವಾಗಿ ಉಳಿಯುತ್ತವೆ.
ಆತನ ದೇಹ ರೋಗದ ವಿರುದ್ಧ ಹೋರಾಡಿದರೂ, ಅವರ ಮನಸ್ಸು ಅಪಾರ ಧೈರ್ಯದಿಂದ ದೃಢವಾಗಿ ನಿಂತಿತು. ಎಲ್ಲಾ ನೋವುಗಳ ನಡುವೆಯೂ ಅವರು ಜೀವನದಲ್ಲಿ ತೋರಿಸಿದ ಭರವಸೆ ಮತ್ತು ಆತ್ಮವಿಶ್ವಾಸ ಅಮೂಲ್ಯವಾದುದು. ಅಂತಹ ಧೈರ್ಯಶಾಲಿ ಮಗು ಇಷ್ಟು ಬೇಗ ನಮ್ಮನ್ನು ಅಗಲಿದ್ದು ತುಂಬಾ ದುಃಖಕರ. ನಿರಂಜನ್ ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪಗಳು. ದೇವರು ಅವರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
Hyderabad,Hyderabad,Telangana













